AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷಾಂತರ ಹಣ ಪಡೆದು ಕಳಪೆ ದರ್ಜೆಯ ಡ್ರೋನ್ ಮಾರಾಟ, 83 ಲಕ್ಷ ರೂ ನಷ್ಟ: ಪ್ರತಾಪ್ ವಿರುದ್ಧ ಆರೋಪ

Drone Prathap: ಪುಣೆಯ ಸಂಸ್ಥೆಯೊಂದರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ಒಪ್ಪಂದಕ್ಕಿಂತಲೂ ಕಡಿಮೆ ಡ್ರೋನ್ ನೀಡಿರುವ ಬಗ್ಗೆ ಸಂಸ್ಥೆಯ ಸಿಇಓ, ಪ್ರತಾಪ್ ವಿರುದ್ಧ ಆರೋಪ ಮಾಡಿದ್ದಾರೆ. ಪ್ರತಾಪ್ ಇಂದಾಗಿ ತಮಗೆ 83 ಲಕ್ಷ ರೂಪಾಯಿ ನಷ್ಟವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಲಕ್ಷಾಂತರ ಹಣ ಪಡೆದು ಕಳಪೆ ದರ್ಜೆಯ ಡ್ರೋನ್ ಮಾರಾಟ, 83 ಲಕ್ಷ ರೂ ನಷ್ಟ: ಪ್ರತಾಪ್ ವಿರುದ್ಧ ಆರೋಪ
ಮಂಜುನಾಥ ಸಿ.
|

Updated on: Jan 25, 2024 | 10:43 AM

Share

ಡ್ರೋನ್ ಪ್ರತಾಪ್ (Drone Prathap), ತಾವು ಡ್ರೋನ್ ಕಂಡು ಹಿಡಿದಿದ್ದಾಗಿ ಅದರಿಂದ ವಿದೇಶಗಳಲ್ಲಿ ಭಾರಿ ಗೌರವ, ಆದರಗಳನ್ನು ಪಡೆದಿದ್ದಾಗಿ ಸುಳ್ಳು ಹೇಳಿ ತೀವ್ರ ಟ್ರೋಲ್​ಗೆ ಒಳಗಾಗಿದ್ದರು. ಅದಾದ ಬಳಿಕ ತಾವೇ ಒಂದು ಡ್ರೋನ್ ಸಂಸ್ಥೆ ಪ್ರಾರಂಭಿಸಿ, ರೈತರಿಗೆ ಅನುಕೂಲಕರವಾಗುವಂತೆ ಡ್ರೋನ್ ನಿರ್ಮಿಸಿ ಮಾರಾಟ ಮಾಡುತ್ತಿರುವುದಾಗಿ ಹೇಳಿ ಹಲವು ವಿಡಿಯೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಪ್ರತಾಪ್, ತಮ್ಮ ಡ್ರೋನ್​ಗಳನ್ನು ಮಾರಾಟ ಮಾಡಿದ್ದ ಸಂಸ್ಥೆಯ ಸಿಇಓ ಪ್ರತಾಪ್ ವಿರುದ್ಧ ಆರೋಪ ಮಾಡಿದ್ದಾರೆ.

ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಹೆಸರಿನ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಎಂಬುವರು ಕೆಲ ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರಿಗೆ ಎಂಟು ಡ್ರೋನ್​ಗಳನ್ನು ನೀಡುವಂತೆ ಒಪ್ಪಂದ ಮಾಡಿಕೊಂಡು ಅಡ್ವಾನ್ಸ್ ನೀಡಿದ್ದರು. ಆದರೆ ನಾಲ್ಕು ಡ್ರೋನ್​ಗಳನ್ನಷ್ಟೆ ನೀಡಿರುವ ಪ್ರತಾಪ್, ಉಳಿದ ಡ್ರೋನ್​ಗಳನ್ನು ನೀಡಿಲ್ಲವೆಂದು, ಈಗ ನೀಡಿರುವ ನಾಲ್ಕು ಡ್ರೋನ್​ಗಳು ಸಹ ಕಳಪೆ ಗುಣಮಟ್ಟದ್ದಾಗಿವೆ ಎಂದು ಸಾರಂಗ್ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಾರಂಗ್ ಮಾನೆ, ಕಳೆದ ವರ್ಷ ನಾಸಿಕ್ ಡ್ರೋನ್ ಎಕ್ಸಿಬಿಷನ್​ನಲ್ಲಿ ನಾನು ಡ್ರೋನ್​ ಪ್ರತಾಪ್​ರ ಡ್ರೋನ್​ಗಳನ್ನು ನೋಡಿದ್ದೆ. ಬಳಿಕ ಧುಲಿಯಾನಲ್ಲಿ ಅವರ ಸಿಎ ಸಾಗರ್ ಮುಖಾಂತರ ಅವರ ಕಚೇರಿಗೆ ಹೋಗಿ ಅವರನ್ನು ಭೇಟಿ ಮಾಡಿದೆ. ಒಟ್ಟು ಎಂಟು ಡ್ರೋನ್ ನೀಡುವಂತೆ ಮಾತುಕತೆ ಮಾಡಿ 35.75 ಲಕ್ಷ ರೂಪಾಯಿ ಹಣ ಪಾವತಿ ಮಾಡಿದೆವು. ಈ ಹಣವನ್ನು ನಾವು ರೈತರಿಂದ ಪಡೆದ ಅಡ್ವಾನ್ಸ್ ಹಾಗೂ ಬ್ಯಾಂಕ್​ನಿಂದ ಪಡೆದ ಸಾಲವನ್ನು ಒಟ್ಟು ಮಾಡಿ ನೀಡಿದ್ದೆವು. ಮೊದಲ ಎರಡು ಡ್ರೋನ್​ಗಳನ್ನು ನೀಡಲು ಪ್ರತಾಪ್ ಎರಡು ತಿಂಗಳು ತಡ ಮಾಡಿದರು. ಅದಾದ ನಾಲ್ಕು ತಿಂಗಳ ಬಳಿಕ ಇನ್ನೆರಡು ಡ್ರೋನ್​ಗಳನ್ನು ನೀಡಿದರು. ಅದಾದ ಬಳಿಕ ಯಾವುದೇ ಡ್ರೋನ್ ನೀಡಿಲ್ಲ. ಇನ್ನೂ ನಾಲ್ಕು ಡ್ರೋನ್​ಗಳನ್ನು ಅವರು ನಮಗೆ ನೀಡಬೇಕಿದೆ’ ಎಂದಿದ್ದಾರೆ.

ಇದನ್ನೂ ಓದಿ:ಮಾಡಿದ ತಪ್ಪಿಗೆ ಬಿಗ್​ಬಾಸ್ ಮನೆಯಿಂದ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್

‘ಈಗ ಪ್ರತಾಪ್ ಕೊಟ್ಟಿರುವ ಡ್ರೋನ್​ಗಳು ಉತ್ತಮ ಗುಣಮಟ್ಟ ಹೊಂದಿಲ್ಲ. ಕೆಲವು ಡ್ರೋನ್​ಗಳ ಬ್ಯಾಟರಿ ಸರಿಯಿಲ್ಲ. ಒಂದು ಡ್ರೋನ್​ ನಲ್ಲಿ ತಪ್ಪು ಜಿಪಿಎಸ್ ತೋರಿಸುತ್ತಿದೆ. ಪ್ರತಾಪ್, ಡ್ರೋನ್​ಗಳ ಬಿಡಿ ಭಾಗಗಳನ್ನು ವಿದೇಶಗಳಿಂದ ತರಿಸುತ್ತಾರೆ. ಹಾಗೂ ಅದನ್ನು ತಾವು ಜೋಡಿಸಿ ಮಾರಾಟ ಮಾಡುತ್ತಾರೆ. ಹೀಗೆ ಜೋಡಿಸಲು ಸಹ ಧುಲೆಯಿಂದ ಇಂಟರ್ನ್​ಗಳನ್ನು ಕರೆದುಕೊಂಡು ಅವರಿಂದ ಡ್ರೋನ್​ನ ಕಾಂಪೋನೆಂಟ್ಸ್​ಗಳನ್ನು ಜೋಡಿಸಿ ಮಾರಾಟ ಮಾಡುತ್ತಾರೆ. ಅವರಿಗೆ ಹೆಚ್ಚಿನ ತಂತ್ರಜ್ಞಾನ ಮಾಹಿತಿ ಇದೆ ಎಂದು ನನಗೆ ಅನಿಸುವುದಿಲ್ಲ’ ಎಂದಿದ್ದಾರೆ.

View this post on Instagram

A post shared by Prathap N M (@droneprathap)

ಪ್ರತಾಪ್ ಅನ್ನು ಹೇಗೆ ನಂಬಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಸಾರಂಗ್, ‘ನನಗೂ ಏರೋಸ್ಪೇಸ್​ನ ಮಾಹಿತಿ ಇರವುದರಿಂದ ಅವರ ಡ್ರೋನ್​ಗಳನ್ನು ನೋಡಿದೆ. ಎಲ್ಲವೂ ಹಾರುವ ಸ್ಥಿತಿಯಲ್ಲಿದ್ದವು. ಅಲ್ಲದೆ ಡ್ರೋನ್​ನಿಂದ ರೈತರ ಬೆಳೆಗೆ ಕೀಟನಾಶಕ ಸ್ಪ್ರೇ ಮಾಡುತ್ತಿರುವ ವಿಡಿಯೋಗಳನ್ನು ಸಹ ತೋರಿಸಿದರು. ಭೇಟಿ ಮಾಡಿದ್ದಾಗ ಒಮ್ಮೆ, ನೀವು ನನ್ನ ಬಗ್ಗೆ ಗೂಗಲ್ ಮಾಡಿ ನೋಡಿ ಎಂದು ಹೇಳಿದ್ದರು. ಅಂತೆಯೇ ಮಾಡಿದಾಗ ಅವರದ್ದು ವೆರಿಫೈಡ್ ಅಕೌಂಟ್ ಆಗಿತ್ತು. ಗೂಗಲ್​ನಲ್ಲಿಯೂ ಅವರ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ನಂಬಿದೆ. ಒಮ್ಮೆ ನಮ್ಮನ್ನು ಬೆಂಗಳೂರಿಗೆ ಆಹ್ವಾನಿಸಿ ಐಶಾರಾಮಿ ಹೋಟೆಲ್​ನಲ್ಲಿ ರೂಂ ಬುಕ್ ಮಾಡಿದ್ದರು. ಹೋಟೆಲ್​ಗೆ 20 ಸಾವಿರ ಅಡ್ವಾನ್ಸ್ ನೀಡಿ ಎಲ್ಲ ಸವಲತ್ತು ಬಳಸಿಕೊಳ್ಳುವಂತೆ ಹೇಳಿ, ನಮ್ಮ ಮೇಲೆ ಪರೋಕ್ಷ ಪ್ರಭಾವ ಬೀರಿದ್ದರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಡ್ರೋನ್ ಪ್ರತಾಪ್​ ಮೇಲೆ ಮತ್ತೆ ವಿನಯ್ ಜಗಳ, ಸುದೀಪ್ ಮುಂದೆ ಕಣ್ಣೀರು

‘ಈ ಹಿಂದೆ ಹಣ ಕೇಳಿದಾಗ ಕಾಯಲು ಹೇಳಿದ್ದರು. ಅವರ ಸಹಾಯಕ ರವಿಯಿಂದ ಕಾರು ಮಾರಾಟ ಮಾಡಿರುವುದಾಗಿ ಸುಳ್ಳು ಹೇಳಿಸಿದ್ದರು. ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಆತ ನಮಗೆ ಡ್ರೋನ್ ಕೊಡುತ್ತಾನೆ ಎಂಬ ನಂಬಿಕೆ ಇಲ್ಲ. ಆತನ ಬಳಿ ತಂತ್ರಜ್ಞಾನದ ಮಾಹಿತಿ ಇಲ್ಲ. ಆತನ ಬಳಿ ಇರುವುದೇ ನಾಲ್ಕು ಜನ ಸಿಬ್ಬಂದಿ. ಒಬ್ಬ ಪ್ರತಾಪ್ ಫೋಟೊ ತೆಗೆಯುತ್ತಾನೆ. ಇನ್ನೊಬ್ಬ ಪ್ರತಾಪ್​ರ ಮ್ಯಾನೇಜರ್, ಒಬ್ಬ ವಾಚ್​ಮ್ಯಾನ್ ಇದ್ದಾರೆ ಅಷ್ಟೆ. ಇಷ್ಟು ಮಂದಿಯನ್ನು ಇಟ್ಟುಕೊಂಡು ನಮಗೆ ಡ್ರೋನ್ ಮಾಡಿಕೊಡುತ್ತಾನೆ ಎಂಬ ನಂಬಿಕೆ ಇಲ್ಲ’ ಎಂದಿದ್ದಾರೆ ಸಾರಂಗ್.

‘ನಾವು ಭೇಟಿಯಾದಾಗ ತಮಗೆ ಸಿಸಿಡಿಯಿಂದ ಡ್ರೋನ್​ಗಳಿಗಾಗಿ ಬೇಡಿಕೆ ಇದೆಯೆಂದು, ಬೆಂಗಳೂರಿನಲ್ಲಿ ಇನ್ನೂ ಒಂದು ಸಂಸ್ಥೆಗಾಗಿ ಡ್ರೋನ್ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದ. ಅದೆಲ್ಲ ಸುಳ್ಳು ಅನ್ನಿಸುತ್ತದೆ. ಈಗ ಪ್ರತಾಪ್, ಬಿಗ್​ಬಾಸ್ ಮನೆಯಿಂದ ಹೊರಗೆ ಬರುವವರೆಗೆ ಕಾಯುತ್ತೇವೆ. ಹೊರಗೆ ಬಂದ ಬಳಿಕ ಆತನೊಟ್ಟಿಗೆ ಚರ್ಚಿಸಿ ಮುಂದಿನ ಹೆಜ್ಜೆ ನಿಶ್ಚಯಿಸುತ್ತೇವೆ. ಡ್ರೋನ್ ಸರಿಯಾದ ಸಮಯಕ್ಕೆ ನೀಡದ ಕಾರಣ ನಮಗೆ 83 ಲಕ್ಷ ರೂಪಾಯಿ ನಷ್ಟವಾಗಿದೆ. ಅಷ್ಟೂ ಹಣವನ್ನು ಆತ ಭರಿಸಬೇಕು. ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ ಸಾರಂಗ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ