ಮಾಡಿದ ತಪ್ಪಿಗೆ ಬಿಗ್ಬಾಸ್ ಮನೆಯಿಂದ ಕ್ಷಮೆ ಕೇಳಿದ ಡ್ರೋನ್ ಪ್ರತಾಪ್
Drone Prathap: ಹೊರಗಿನ ಸಮಾಜದಲ್ಲಿ ಸುಳ್ಳ, ಡೋಂಗಿ ಎನಿಸಿಕೊಂಡಿದ್ದ ಡ್ರೋನ್ ಪ್ರತಾಪ್, ಬಿಗ್ಬಾಸ್ ಮನೆಯಲ್ಲಿ ಜನರ ಪ್ರೀತಿ ಗಳಿಸಿ ಫಿನಾಲೆ ವಾರಕ್ಕೆ ತಲುಪಿದ್ದಾರೆ. ಇದೀಗ ಹೊರಗೆ ತಾವು ಮಾಡಿದ ತಪ್ಪಿಗೆ ಬಿಗ್ಬಾಸ್ ಮನೆ ಮೂಲಕ ಕ್ಷಮೆ ಕೇಳಿದ್ದಾರೆ.
ಡ್ರೋನ್ ಪ್ರತಾಪ್ (Drone Prathap), ಬಿಗ್ಬಾಸ್ ಕನ್ನಡ ಸೀಸನ್ (BiggBoss) 10ರ ಫಿನಾಲೆ ವಾರ ತಲುಪಿದ್ದಾರೆ. ಹೊರಗೆ ಪ್ರತಾಪ್ ಬಗ್ಗೆ ಸಾಕಷ್ಟು ಋಣಾತ್ಮಕ ಅಭಿಪ್ರಾಯಗಳಿದ್ದವು. ಪ್ರತಾಪ್, ತಾವು ಡ್ರೋನ್ ಕಂಡುಹಿಡಿದಿದ್ದಾಗಿ, ತಮಗೆ ಅಂತರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳು ಬಂದಿರುವುದಾಗಿ, ತಾವು ಮಹಾ ಸಂಕಷ್ಟಗಳನ್ನು ಎದುರಿಸಿ ‘ಸಾಧನೆ’ ಮಾಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಅವೆಲ್ಲವೂ ಸುಳ್ಳೆಂದು ಸಾಬೀತಾಗಿ, ಪ್ರತಾಪ್, ಟ್ರೋಲ್ಗೆ ವಸ್ತುವಾದರು. ಆ ಬಳಿಕ ಡ್ರೋನ್ ಸಂಸ್ಥೆಯೊಂದನ್ನು ಪ್ರಾರಂಭಿಸಿ ಕೆಲಸ ಮಾಡಲು ಆರಂಭಿಸಿದ್ದರು. ಅದೇ ವೇಳೆ ಬಿಗ್ಬಾಸ್ ಮನೆಗೆ ಬಂದರು.
ಮನೆಗೆ ಬಂದ ಆರಂಭದಲ್ಲಿ ಮನೆಯ ಸದಸ್ಯರಿಂದ ತಾವು ಹೇಳಿದ್ದ ಸುಳ್ಳಿನ ವಿಷಯವಾಗಿ ಹಲವು ಬಾರಿ ಟೀಕೆ, ವ್ಯಂಗ್ಯ, ಅಪಹಾಸ್ಯಕ್ಕೆ ಪ್ರತಾಪ್ ಗುರಿಯಾದರು. ಆದರೆ ಸುದೀಪ್ ನೀಡಿದ ಬೆಂಬಲದಿಂದ ಮತ್ತೆ ಉತ್ಸಾಹ ತುಂಬಿಕೊಂಡು ಆಡಿ ಈಗ ಫಿನಾಲೆ ವಾರಕ್ಕೆ ಬಂದಿದ್ದಾರೆ. ಹಿಂದೊಮ್ಮೆ ಕಿಚ್ಚನ ಚಪ್ಪಾಳೆ ಸಿಕ್ಕಾಗ, ತಾನು ಹೊರಗಡೆ ಆಡಿದ ಮಾತುಗಳಿಗೆ, ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದರು. ಈಗ ಮತ್ತೊಮ್ಮೆ ಕರ್ನಾಟಕ ಜನರ ಕ್ಷಮೆ ಕೇಳಿ ಮನವಿಯೊಂದನ್ನು ಮಾಡಿದ್ದಾರೆ.
ಮಂಗಳವಾರದ ಎಪಿಸೋಡ್ನಲ್ಲಿ ಬಿಗ್ಬಾಸ್ ಮನೆಗೆ ಕಿರಿಕ್ ಕೀರ್ತಿ ಹಾಗೂ ಜಾಹ್ನವಿ ಪತ್ರಕರ್ತರಾಗಿ ಬಂದು ಸ್ಪರ್ಧಿಗಳಿಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಈ ವೇಳೆ ಜಾಹ್ನವಿ, ಪ್ರತಾಪ್ ಅವರನ್ನುದ್ದೇಶಿಸಿ, ‘ನೀವು ಮಾಡಿದ್ದು ತಪ್ಪು ಎಂದು ಅನ್ನಿಸಿಲ್ಲವೆ, ಅದರ ಬಗ್ಗೆ ಕ್ಷಮೆ ಕೇಳಿಲ್ಲ ಏಕೆ?’ ಎಂದರು. ಇದಕ್ಕೆ ಉತ್ತರಿಸಿದ ಪ್ರತಾಪ್, ಹಿಂದೆ, ಕಿಚ್ಚನ ಚಪ್ಪಾಳೆ ಸಿಕ್ಕ ದಿನ ನಾನು ಜನರ ಬಳಿ ಕ್ಷಮೆ ಕೇಳಿದ್ದೆ, ಆದರೆ ಈಗ ಮತ್ತೊಮ್ಮೆ ಕ್ಷಮೆ ಕೇಳಲು ನನಗೆ ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದರು.
ಇದನ್ನೂ ಓದಿ:ಬಿಗ್ಬಾಸ್ನಿಂದ ಜೀವನದಲ್ಲಿ ದೊಡ್ಡ ಬದಲಾವಣೆ: ಸುದೀಪ್ ಎದುರು ತನಿಷಾ ಭಾವುಕ
ಮುಂದುವರೆದು, ‘ನಾನು ಹೊರಗೆ ಆಡಿದ ಕೆಲವು ಮಾತುಗಳು ತಪ್ಪು, ನಾನು ಅದಕ್ಕೆ ಕ್ಷಮೆ ಕೇಳುತ್ತೇನೆ. ನಾನು ಈಗ ಹೊಸದಾಗಿ ಕೆಲಸ ಆರಂಭಿಸಿದ್ದೇನೆ. ನನ್ನದೇ ಆದ ಸಂಸ್ಥೆಯೊಂದನ್ನು ಕಟ್ಟಿಕೊಂಡಿದ್ದೇನೆ. ಅದನ್ನು ಬೆಳೆಸಬೇಕಿದೆ, ನನಗೆ ಮತ್ತೊಂದು ಅವಕಾಶವನ್ನು ಜನ ಕೊಡುತ್ತಾರೆಂದು ನಂಬಿದ್ದೇನೆ. ನನ್ನನ್ನು ನಾನು ಸಾಬೀತು ಮಾಡಿಕೊಳ್ಳಲು ಮತ್ತೊಂದು ಅವಕಾಶ ಕೊಡಿ’ ಎಂದು ಪ್ರತಾಪ್ ಮನವಿ ಮಾಡಿದರು.
ಪ್ರತಾಪ್, ಹೊರ ಜಗತ್ತಿಗೆ ಸುಳ್ಳನಾಗಿ ಕಂಡಿದ್ದರು. ಸತತ ಟ್ರೋಲ್, ಮೀಡಿಯಾ ಟ್ರಯಲ್, ಟೀಕೆ, ವ್ಯಂಗ್ಯಗಳಿಂದ ಸಾಕಷ್ಟು ನೋವನ್ನೂ ಅನುಭವಿಸಿದರು. ಕೋವಿಡ್ ಸಮಯದಲ್ಲಿ ಅವರ ವಿರುದ್ಧ ಪ್ರಕರಣಗಳು ಸಹ ದಾಖಲಾಯ್ತು. ಮಾಧ್ಯಮಗಳು ಪ್ರತಾಪ್ ಅವರನ್ನು ಸತತವಾಗಿ ಪ್ರಶ್ನೆ ಮಾಡಿ ನಿಕಷಕ್ಕೆ ಒಡ್ಡಿತ್ತು. ಆದರೆ ಬಿಗ್ಬಾಸ್ ಮನೆಯಲ್ಲಿ ಪ್ರತಾಪ್, ತಾವೊಬ್ಬ ಸಂಯಮಿ, ಸಹಾಯ ಮಾಡುವ ಗುಣದವನು, ಎಲ್ಲರನ್ನೂ ಪ್ರೀತಿಸುವವ ಎಂಬುದಾಗಿ ತೋರಿಸಿಕೊಂಡಿದ್ದಾರೆ. ಜನರ ಬೆಂಬಲವೂ ದೊರೆತು ಫಿನಾಲೆ ವಾರಕ್ಕೆ ಬಂದಿದ್ದು, ಪ್ರತಾಪ್ ಗೆಲ್ಲುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ