‘ಕಬ್ಜ 2’ ಬರಲ್ಲ ಎಂದು ಟ್ರೋಲ್ ಮಾಡಿದವರಿಗೆ ಸರಿಯಾಗಿ ಉತ್ತರ ಕೊಟ್ಟ ಆರ್. ಚಂದ್ರು
2022ರಲ್ಲಿ ರಿಲೀಸ್ ಆದ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ನೋಡಿ ಅನೇಕರು ಟ್ರೋಲ್ ಮಾಡಿದ್ದರು. ಈ ಚಿತ್ರ ಅನೇಕರಿಗೆ ಇಷ್ಟ ಆಗಿರಲಿಲ್ಲ. ಹೀಗಾಗಿ, ಈ ಚಿತ್ರಕ್ಕೆ ಸೀಕ್ವೆಲ್ ಬರುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಅದು ಸುಳ್ಳಾಗಿದೆ.
ಆರ್. ಚಂದ್ರು ನಿರ್ದೇಶನದ, ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ (Kabzaa Movie) ಟೀಸರ್ ಹಾಗೂ ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಸಿನಿಮಾ ರಿಲೀಸ್ ಆದ ಬಳಿಕ ಅನೇಕರಿಗೆ ಈ ಸಿನಿಮಾ ಇಷ್ಟ ಆಗಲೇ ಇಲ್ಲ. ಆದರೆ, ಚಿತ್ರತಂಡ ಹೇಳೋದೇ ಬೇರೆ. ಸಿನಿಮಾ ಗೆಲುವು ಕಂಡಿದೆ ಎಂದು ತಂಡ ಬೀಗಿದೆ. ಈ ಚಿತ್ರಕ್ಕೆ ಸೀಕ್ವೆಲ್ ಯಾವುದೇ ಕಾರಣಕ್ಕೂ ಸಿದ್ಧವಾಗುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಆ ರೀತಿ ಆಗಿಲ್ಲ. ಜನವರಿ 23ರಂದು ಚಂದ್ರು ಅವರು ಒಟ್ಟೊಟ್ಟಿಗೆ ಐದು ಸಿನಿಮಾ ಘೋಷಣೆ ಮಾಡಿದ್ದಾರೆ. ಅದರಲ್ಲಿ ‘ಕಬ್ಜ 2’ ಸಿನಿಮಾ ಕೂಡ ಇದೆ.
ಆರ್. ಚಂದ್ರು ಅವರು ಮಂಗಳವಾರ ಒಟ್ಟೊಟ್ಟಿಗೆ ಐದು ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ‘ಕಬ್ಜ’ ನಾಯಕ ಉಪೇಂದ್ರ, ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಮೊದಲಾದವರು ಇದ್ದರು. ಅವರು ‘ಕಬ್ಜ 2’ ಅನೌನ್ಸ್ ಮಾಡಿ ಅನೇಕರಿಗೆ ಅಚ್ಚರಿ ಮೂಡಿಸಿದ್ದಾರೆ.
ಟ್ಯಾಕ್ಸ್ ಕಟ್ಟಿದ್ದೆಷ್ಟು?
‘ಕಬ್ಜ’ ಸಿನಿಮಾದ ಕಲೆಕ್ಷನ್ ಫೇಕ್ ಎಂದು ಅನೇಕರು ಹೇಳಿದ್ದರು. ಆದರೆ, ಕಲೆಕ್ಷನ್ ಆಗಿದ್ದು ನಿಜ ಎನ್ನುತ್ತಾರೆ ಆರ್. ಚಂದ್ರು. ‘ಕಬ್ಜ ಸಿನಿಮಾದಿಂದ ನಾನು ಸರ್ಕಾರಕ್ಕೆ 20 ಕೋಟಿ ರೂಪಾಯಿ ಟ್ಯಾಕ್ಸ್ ಕಟ್ಟಿದ್ದೀನಿ. ಇದನ್ನು ಓಪನ್ ಆಗಿ ಹೇಳಿಕೊಳ್ಳುತ್ತಿದ್ದೇನೆ. ಎಷ್ಟು ಜನರು ಇದರಿಂದ ಊಟ ಮಾಡಿರ್ತಾರೆ. ಬಾಯಿ ಇದೆ ಎಂದು ಮಾತನಾಡಿದರೆ ಐದು ಸಿನಿಮಾ, ಹತ್ತು ಸಿನಿಮಾ ಆಗಲ್ಲ’ ಎಂದು ಅವರು ನೇರವಾಗಿ ಹೇಳಿದ್ದಾರೆ.
‘ಕಬ್ಜ 2’ ಬರಲ್ಲ ಅಂದಿದ್ರು..
‘ಕಬ್ಜ’ ಸಿನಿಮಾ ಅಂದುಕೊಂಡ ರೀತಿಯಲ್ಲಿ ಮೂಡಿ ಬರಲಿಲ್ಲ ಎಂಬುದು ಅನೇಕರ ಆರೋಪ. ಚಂದ್ರು ಅವರನ್ನು ಟ್ರೋಲ್ ಮಾಡಲಾಯಿತು. ಈ ಆರೋಪಕ್ಕೆ ಅವರು ‘ಕಬ್ಜ 2’ ಅನೌನ್ಸ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ. ಮೊದಲ ಭಾಗದಲ್ಲಿ ಉಪೇಂದ್ರ ಹಾಗೂ ಶ್ರೀಯಾ ಶರಣ್ ಪಾತ್ರ ಹೈಲೈಟ್ ಆಗಿತ್ತು. ಪೊಲೀಸ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಶಿವರಾಜ್ಕುಮಾರ್ ಎಂಟ್ರಿ ಕೊನೆಯಲ್ಲಿ ಆಗಿತ್ತು. ಈಗ ಸೀಕ್ವೆಲ್ನಲ್ಲಿ ಶಿವಣ್ಣನ ಪಾತ್ರ ಹೈಲೈಟ್ ಆಗಲಿದೆಯೇ ಎನ್ನುವ ಕುತೂಹಲ ಮೂಡಿದೆ.
ಇದನ್ನೂ ಓದಿ: ‘ಕಬ್ಜ’ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರ ಮಾಡಿದ್ದ ಈ ಕಲಾವಿದ ‘ಮ್ಯಾಕ್ಸ್’ ಚಿತ್ರಕ್ಕೆ ವಿಲನ್?
‘ಕಬ್ಜ 2’ ಮಾತ್ರವಲ್ಲದೆ ‘ಡಾಗ್’, ‘ಫಾದರ್’, ‘ಶ್ರೀ ರಾಮ ಬಾಣಂ’, ‘ಪಿಓಕೆ’ ಹೆಸರಿನ ಸಿನಿಮಾಗಳನ್ನೂ ಅವರು ಘೋಷಣೆ ಮಾಡಿದ್ದಾರೆ. ಈ ಸಿನಿಮಾಗಳ ಬಗ್ಗೆಯೂ ಸಾಕಷ್ಟು ನಿರೀಕ್ಷೆ ಮೂಡಿದೆ. ಎಲ್ಲಾ ಸಿನಿಮಾಗಳಿಗೂ ಅವರು ನಿರ್ದೇಶನ ಮಾಡುತ್ತಿಲ್ಲ. ಕೆಲ ಸಿನಿಮಾಗಳನ್ನು ಅವರು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:27 am, Wed, 24 January 24