ಹೆದರುವ ದಿನಗಳು ಹೋಯ್ತು: ವಿನಯ್ಗೆ ದಿಟ್ಟ ಠಕ್ಕರ್ ಕೊಟ್ಟ ಪ್ರತಾಪ್
Prathap-Vinay: ಡ್ರೋನ್ ಪ್ರತಾಪ್ ಬಿಗ್ಬಾಸ್ ಮನೆಗೆ ಬಂದಾಗ ಸದಸ್ಯರ ಮಾತುಗಳನ್ನು ಎದುರಿಸಲಾಗದೆ ಬಾತ್ರೂಂಗೆ ಹೋಗಿ ಅಳುತ್ತಿದ್ದರು. ಈಗ ವಿನಯ್ ಅಂಥಹಾ ಪ್ರಬಲ ಎದುರಾಳಿಯನ್ನು ಎದುರಿಸುತ್ತಿದ್ದಾರೆ.
ಬಿಗ್ಬಾಸ್ (BiggBoss) ಮನೆಗೆ ಬಂದಾಗ ಇದ್ದ ಪ್ರತಾಪ್ಗೂ ಈಗ ಇರುವ ಪ್ರತಾಪ್ಗೂ ದೊಡ್ಡ ಅಂತರವಿದೆ. ಬಿಗ್ಬಾಸ್ ಮನೆಗೆ ಹೋದಾಗ ಹೊರ ಜಗತ್ತಿಗೆ ಪ್ರತಾಪ್ ಒಬ್ಬ ಸುಳ್ಳುಗಾರ, ಮನೆಯ ಸದಸ್ಯರಿಗೂ ಅದೇ ಅಭಿಪ್ರಾಯ. ಇದೇ ಕಾರಣಕ್ಕೆ ಆರಂಭದಲ್ಲಿ ಸಾಕಷ್ಟು ವ್ಯಂಗ್ಯ, ಮೂದಲಿಕೆ, ಟೀಕೆಗಳನ್ನು ಪ್ರತಾಪ್ ಕೇಳಬೇಕಾಯ್ತು. ಆಗೆಲ್ಲ ಬಾತ್ರೂಂಗೆ ಹೋಗಿ ಒಬ್ಬೊಬ್ಬರೇ ಪ್ರತಾಪ್ ಅಳುತ್ತಿದ್ದರು. ಮನೆಯ ಸದಸ್ಯರ ಜೊತೆಗಿಂತಲೂ ಬಾತ್ರೂಂನಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದರು ಪ್ರತಾಪ್. ಆದರೆ ಈಗ ಪರಿಸ್ಥಿತಿ ಬೇರೆಯಾಗಿದೆ.
ವಿನಯ್, ಬಿಗ್ಬಾಸ್ ಮನೆಯ ಗಟ್ಟಿ ವ್ಯಕ್ತಿತ್ವದ ವ್ಯಕ್ತಿ. ಅಭಿಪ್ರಾಯಗಳನ್ನು ಗಟ್ಟಿಯಾಗಿ, ತುಸು ಬೆದರಿಕೆಯ ಧ್ವನಿಯಲ್ಲಿಯೇ ಹೇಳುತ್ತಾರೆ. ಆರಂಭದಿಂದಲೂ ಪ್ರತಾಪ್ ಹಾಗೂ ವಿನಯ್ಗೆ ಅಷ್ಟಕ್ಕಷ್ಟೆ. ಇತ್ತೀಚೆಗೆ ಅದು ಇನ್ನೂ ಹೆಚ್ಚಾಗಿದೆ. ಕಿರಿಕ್ ಕೀರ್ತಿ, ಜಾಹ್ನವಿ ಮನೆಗೆ ಬಂದಾಗ ಅವರ ಎದುರು ಪ್ರತಾಪ್, ವಿನಯ್ ಬಗ್ಗೆ ಆಡಿದ ಮಾತಿನ ಬಗ್ಗೆ ವಿನಯ್ಗೆ ತೀವ್ರ ಅಸಮಾಧಾನವಿತ್ತು. ಅದನ್ನು ತಮ್ಮ ಎಂದಿನ ಶೈಲಿಯಲ್ಲಿಯೇ ಪ್ರತಾಪ್ ಮುಂದೆ ಹೇಳಿಕೊಂಡಿದ್ದರು. ‘ಇದೆಲ್ಲ ಚೆನ್ನಾಗಿರಲ್ಲ’ ಎಂದು ಹೆದರಿಸುವಂತೆ ಮಾತನಾಡಿದ್ದರು.
ಬುಧವಾರದ ಎಪಿಸೋಡ್ನಲ್ಲಿ, ಪಂಚಿಂಗ್ ಪ್ರಕ್ರಿಯೆ ಕೊಟ್ಟಾಗ, ಪಂಚಿಂಗ್ ಬ್ಯಾಗ್ಗೆ ಪ್ರತಾಪ್ ಚಿತ್ರ ಮೆತ್ತಿ, ನೀನು ಯಾರು ನನ್ನ ವ್ಯಕ್ತಿತ್ವದ ಬಗ್ಗೆ ಮಾತನಾಡಲು, ನಿನ್ನ ವಯಸ್ಸಿಗಿಂತಲೂ ಹೆಚ್ಚು ನನಗೆ ಅನುಭವವಿದೆ. ನೀನೊಬ್ಬ ಝೀರೋ ಎಂದು ಹೇಳಿ ಪಂಚ್ ಮಾಡಿದ್ದರು. ಪ್ರತಾಪ್ ತನಗೆ ಅವಕಾಶ ಸಿಕ್ಕಿದಾಗ ವಿನಯ್ರ ಚಿತ್ರವನ್ನೇ ಮೊದಲಿಗೆ ಪಂಚಿಂಗ್ ಬ್ಯಾಗ್ಗೆ ಅಂಟಿಸಿದರು.
ಇದನ್ನೂ ಓದಿ:ಮಂಡಿಯೂರಿ ಕ್ಷಮೆ ಕೇಳಿದ ವಿನಯ್, ದ್ವೇಷ ಕರಗಿ ಮತ್ತೆ ಅರಳಿತು ಸ್ನೇಹ
‘ನೀವು ‘ನೋಡ್ಕೋತೀನಿ‘, ‘ಚೆನ್ನಾಗಿರಲ್ಲ’ ‘ಸರಿಯಿರಲ್ಲ’ ಎಂದೆಲ್ಲ ಹೇಳಿದರೆ ಹೆದರಿಕೊಳ್ಳಲು ಆಗುವುದಿಲ್ಲ. ಹೆದರಿಕೊಳ್ಳುವ ದಿನಗಳೆಲ್ಲ ಹೊರಟು ಹೋದವು, ಇನ್ನೇನಿದ್ದರು ಎದುರಿಸುವ ದಿನಗಳು. ಹೌದು, ನನಗೆ ಬೇಸರವಾದಾಗ ಒಬ್ಬನೇ ಹೋಗಿ ಅಳುತ್ತಿದ್ದೆ. ನೀವು ಅತ್ತಿಲ್ಲವೆ. ನಿಮ್ಮ ಮನೆಯವರಿಗೆ ತೊಂದರೆ ಆಗಿದೆ ಎಂದಾಗ ನೀವು ಅತ್ತಿಲ್ಲವೇ? ನೀವು ಅತ್ತರೆ ಪ್ರೀತಿ, ನಾನು ಅತ್ತರೆ ಸಿಂಪತಿ ಹೇಗಾಗುತ್ತದೆ?’ ಎಂದು ಪ್ರಶ್ನಿಸಿದರು.
ವಿನಯ್, ಮಧ್ಯದಲ್ಲಿ ಮಾತನಾಡಲು ಬಂದಾಗ, ‘ಸುಮ್ಮನಿರಿ, ಇಲ್ಲಿ ನಾನು ಮಾತನಾಡಬೇಕು, ನೀವು ಇವತ್ತು ಬರೀ ಕೇಳಿಸಿಕೊಳ್ಳಬೇಕು’ ಎನ್ನುತ್ತಾ, ತಮ್ಮ ಎಂದಿನ ಶೈಲಿಗಿಂತಲೂ ತುಸು ಅಗ್ರೆಸ್ಸಿವ್ ಆಗಿಯೇ ಇಂದು ವಿನಯ್ ಎದುರು ನಿಂತು ಮಾತನಾಡಿದರು. ವಿನಯ್ರನ್ನು ಅಣಕಿಸುವಂತೆ ಹಾವ ಭಾವಗಳನ್ನು ಮಾಡಿ ಪದೇ ಪದೇ ಪಂಚಿಂಗ್ ಬ್ಯಾಗ್ಗೆ ಪಂಚ್ ಮಾಡಿದರು. ಪ್ರತಾಪ್ರ ಧೈರ್ಯ ತುಂಬಿದ ಮಾತುಗಳು, ಮನೆಯ ಇತರೆ ಸದಸ್ಯರಿಗೂ ವಾವ್ ಎನ್ನಿಸಿತು.
ಆದರೆ ಬುಧವಾರದ ಎಪಿಸೋಡ್ನ ಕೊನೆಯಲ್ಲಿ ಮನೆಯ ಎಲ್ಲ ಸದಸ್ಯರು ಕೋಪ, ದ್ವೇಷಗಳನ್ನು ಮರೆತು ಎಲ್ಲರೂ ಮತ್ತೆ ಸ್ನೇಹದಿಂದ ಕೂಡಿ ಭೋಜನ ಮಾಡಿದರು. ವಿನಯ್ ಸಹ, ತಮ್ಮ ಮಾತುಗಳಿಂದ ಯಾರಿಗಾದರೂ ಘಾಸಿಯಾಗಿದ್ದಲ್ಲಿ ಕ್ಷಮಿಸಿ ಎಂದು ಮಂಡಿಯೂರಿ ಕ್ಷಮೆ ಕೇಳಿದರು. ಎಲ್ಲರೂ ಒಟ್ಟಿಗೆ ಕೂತು ಭೋಜನ ಮಾಡಬೇಕೆಂಬುದು ವಿನಯ್ ಅವರು ಬಿಗ್ಬಾಸ್ ಮುಂದೆ ತೋಡಿಕೊಂಡಿದ್ದ ಇಚ್ಛೆಯಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ