12 ಜನರ ಊಟಕ್ಕೆ ಮಣ್ಣು ಹಾಕಿ ಅಸಲಿ ಬುದ್ಧಿ ತೋರಿಸಿದ ರಕ್ಷಿತಾ ಶೆಟ್ಟಿ

ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಊಟ ಹಾಗೂ ಇತರೆ ಸವಲತ್ತುಗಳಿಗೆ ಕಷ್ಟಪಡಬೇಕು. ಪರಿಸ್ಥಿತಿ ಹೀಗಿರುವಾಗ ರಕ್ಷಿತಾ ಶೆಟ್ಟಿ ಅವರು 12 ಜನರ ಊಟವನ್ನು ಹಾಳು ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಮಾಡಿದ ಈ ಕೆಲಸದಿಂದ ಮಂಜು ಭಾಷಿಣಿ ಅವರಿಗೆ ವಿಪರೀತ ಕೋಪ ಬಂದಿದೆ.

12 ಜನರ ಊಟಕ್ಕೆ ಮಣ್ಣು ಹಾಕಿ ಅಸಲಿ ಬುದ್ಧಿ ತೋರಿಸಿದ ರಕ್ಷಿತಾ ಶೆಟ್ಟಿ
Rakshitha Shetty

Updated on: Oct 09, 2025 | 10:40 PM

ಮೊದಲ ವಾರವೇ ಬಿಗ್ ಬಾಸ್ (Bigg Boss Kannada Season 12) ಮನೆಯಿಂದ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ ಅವರು ನಂತರ ಮತ್ತೆ ರೀ-ಎಂಟ್ರಿ ನೀಡಿದರು. ದೊಡ್ಮನೆಗೆ ಪುನಃ ಕಾಲಿಡುತ್ತಿದ್ದಂತೆಯೇ ರಕ್ಷಿತಾ ಶೆಟ್ಟಿ ಅವರು ಪಟಾಕಿ ರೀತಿ ಸಿಡಿಯುತ್ತಿದ್ದಾರೆ. ಸದ್ಯಕ್ಕೆ ಅವರು ಒಂಟಿಗಳ ಜೊತೆಯಲ್ಲಿ ಇದ್ದಾರೆ. ಅಕ್ಟೋಬರ್ 9ರ ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಅವರ ಸೌಂಡು ಜಾಸ್ತಿ ಆಗಿದೆ. ಅವರ ಆರ್ಭಟ ನೋಡಿ ಧ್ರುವಂತ್, ಅಶ್ವಿನಿ ಗೌಡ ಮುಂತಾದವರಿಗೆ ಅಚ್ಚರಿ ಆಗಿದೆ. ಅಸುರಾಧಿಪತಿ ಆಗಿರುವ ಕಾಕ್ರೋಚ್ ಸುಧಿಗೆ ರಕ್ಷಿತಾ ಶೆಟ್ಟಿ ಆವಾಜ್ ಹಾಕಿದ್ದಾರೆ. ಅಷ್ಟೇ ಅಲ್ಲ, 12 ಜನರು ತಿನ್ನುವ ಅನ್ನಕ್ಕೆ ಮಣ್ಣು ಹಾಕಿದ್ದಾರೆ!

ಒಂಟಿಗಳು ವರ್ಸಸ್ ಜಂಟಿಗಳು ಎಂಬ ಥೀಮ್​​ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ನಡೆಯುತ್ತಿದೆ. ರಕ್ಷಿತಾ ಶೆಟ್ಟಿ ಅವರು ಒಂಟಿಗಳ ತಂಡದಲ್ಲಿ ಇದ್ದಾರೆ. ಕಾಕ್ರೂಚ್ ಸುಧಿ ಅವರಿಗೆ ಅಸುರಾಧಿಪತಿಯಾಗಿ ವಿಶೇಷ ಅಧಿಕಾರ ನೀಡಲಾಗಿದೆ. ಮನೆಯವರನ್ನು ಅವರು ಹೇಗೆ ಬೇಕಾದರೂ ಶಿಕ್ಷಿಸಬಹುದು. ಆದರೆ ರಕ್ಷಿತಾ ಶೆಟ್ಟಿಗೆ ಬುದ್ಧಿ ಕಲಿಸಲು ಕಾಕ್ರೋಚ್ ಸುಧಿ ಕಷ್ಟಪಡುವಂತಾಗಿದೆ.

ಮೊದಲು ರಕ್ಷಿತಾ ಶೆಟ್ಟಿ ಅವರು ಮಾಡುತ್ತಿದ್ದ ಅಡುಗೆಯನ್ನು ಕಾಕ್ರೂಚ್ ಸುಧಿ ಕೆಡಿಸಿದರು. ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ರಕ್ಷಿತಾ ಶೆಟ್ಟಿ ಅವರು ನಿರ್ಧಾರ ಮಾಡಿದರು. ಜಂಟಿಗಳಾಗಿರುವ 12 ಜನರಿಗೆ ಚಿಕನ್ ಬೇಯಿಸಲಾಗುತ್ತಿತ್ತು. ಆಗ ರಕ್ಷಿತಾ ಶೆಟ್ಟಿ ಅವರು ಚಿಕನ್ ಬೇಯುತ್ತಿದ್ದ ಪಾತ್ರೆಗೆ ಟೀ ಸುರಿದರು. ಅದರಿಂದಾಗಿ ತಿನ್ನುವ ಅನ್ನಕ್ಕೆ ಮಣ್ಣು ಹಾಕಿದಂತಾಯಿತು.

ರಕ್ಷಿತಾ ಶೆಟ್ಟಿ ಮಾಡಿದ ಈ ಕೆಲಸದಿಂದ ಬಿಗ್ ಬಾಸ್ ಮನೆಯ ಜಂಟಿಗಳಿಗೆ ತೀವ್ರ ಕೋಪ ಬಂತು. ಕಾಕ್ರೋಜ್ ಸುಧಿ ಒಬ್ಬರು ಮಾಡಿದ ತಪ್ಪಿಗಾಗಿ ರಕ್ಷಿತಾ ಶೆಟ್ಟಿ ಅವರು 12 ಜನರ ಊಟ ಕೆಡಿಸಬಾರದಾಗಿತ್ತು ಎಂದು ಎಲ್ಲರೂ ರೇಗಾಡಿದರು. ಆ ವೇಳೆ ಮಂಜು ಭಾಷಿಣಿ ಅವರು ರಕ್ಷಿತಾ ಶೆಟ್ಟಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಂಡರು. ಆಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.

ಇದನ್ನೂ ಓದಿ: ಜಾನ್ವಿ ಮೇಲೆ ಮುಗಿಬಿದ್ದ ಮನೆ ಮಂದಿ, ರಕ್ಷಿತಾ ಮಾತಿಗೆ ಚಪ್ಪಾಳೆ

ರಕ್ಷಿತಾ ಶೆಟ್ಟಿ ಅವರಲ್ಲಿ ಮುಗ್ಧತೆ ಇದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಸಲಿಗೆ ಆಗುತ್ತಿರುವುದೇ ಬೇರೆ. ಆಟದ ಭರದಲ್ಲಿ ಅವರು 12 ಜನರ ಊಟವನ್ನು ಕೆಡಿಸಿದ್ದಕ್ಕೆ ಎಲ್ಲರಿಗೂ ಕೋಪ ಬಂದಿದೆ. ರಕ್ಷಿತಾ ಶೆಟ್ಟಿ ಅವರು ಅಂದುಕೊಂಡಷ್ಟು ಮುಗ್ಧೆ ಅಲ್ಲ ಎಂಬುದು ಅರ್ಥ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಊಟಕ್ಕೆ ಎಲ್ಲರೂ ಕಷ್ಟ ಪಡಬೇಕು. ಹಾಗಿರುವಾಗ ಊಟವನ್ನು ಹಾಳು ಮಾಡಿದ ರಕ್ಷಿತಾ ಮೇಲೆ ಮನೆ ಮಂದಿ ಕೋಪ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.