ಕಾಮಿಡಿ ಬಿಟ್ಟು ಕೆಂಡವಾದ ಚಂದ್ರಪ್ರಭ: ಬಿಗ್ ಬಾಸ್ ಮನೆಯ ವಸ್ತುಗಳಿಗೂ ಹಾನಿ
ಬಿಗ್ ಬಾಸ್ ಮನೆಯಲ್ಲಿ ಡಾಗ್ ಸತೀಶ್ ಅವರಿಗೆ ಸ್ನಾನ ಮಾಡಲು ಅರ್ಧ ದಿನ ಸಮಯ ಬೇಕು. ಅವರ ಜೊತೆ ಜಂಟಿಯಾಗಿ ಆಟ ಆಡುತ್ತಿರುವ ಚಂದ್ರಪ್ರಭ ಅವರಿಗೆ ಇದರಿಂದ ಕಿರಿಕಿರಿ ಆಗುತ್ತಿದೆ. ಇದೇ ವಿಚಾರಕ್ಕೆ ದೊಡ್ಡ ಜಗಳ ಆಗಿದೆ. ಚಂದ್ರಪ್ರಭ ಅವರು ಕಾಮಿಡಿ ಬಿಟ್ಟು ಉಗ್ರರೂಪ ತಾಳಿದ್ದಾರೆ.

ನಟ ಚಂದ್ರಪ್ರಭ ಅವರು ಕಾಮಿಡಿ ಮೂಲಕ ಗುರುತಿಸಿಕೊಂಡವರು. ಬಿಗ್ ಬಾಸ್ ಮನೆಯಲ್ಲಿ ಕೂಡ ಅವರು ಕಾಮಿಡಿ ಮಾಡುತ್ತಿದ್ದಾರೆ. ಆದರೆ ಎಲ್ಲ ಸಂದರ್ಭದಲ್ಲೂ ಹಾಗೆಯೇ ಇರಲು ಸಾಧ್ಯವಿಲ್ಲ. ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆಟದಲ್ಲಿ ಚಂದ್ರಪ್ರಭ ಅವರ ತಾಳ್ಮೆಯ ಕಟ್ಟೆ ಒಡೆದಿದೆ. ಎಲ್ಲರ ಮೇಲೂ ಅವರು ಕೂಗಾಡಿದ್ದಾರೆ. ಅಷ್ಟೇ ಅಲ್ಲದೇ, ಬಿಗ್ ಬಾಸ್ ಮನೆಯ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ಡಾಗ್ ಸತೀಶ್! ಶುಕ್ರವಾರದ (ಅಕ್ಟೋಬರ್ 10) ಸಂಚಿಕೆಯಲ್ಲಿ ಚಂದ್ರಪ್ರಭ (Chandraprabha) ಅವರು ರುದ್ರಾವತಾರ ತಾಳಿದ್ದಾರೆ.
ಜಂಟಿಗಳ ಟೀಮ್ನಲ್ಲಿ ಚಂದ್ರಪ್ರಭ ಹಾಗೂ ಸತೀಶ್ ಇದ್ದಾರೆ. ಅವರಿಬ್ಬರು ಜಂಟಿಯಾಗಿ ಆಟ ಆಡುತ್ತಿದ್ದಾರೆ. ಜಂಟಿಗಳು ಎಲ್ಲಿಯೇ ಹೋದರೂ ಜೊತೆಯಲ್ಲೇ ಇರಬೇಕು ಎಂಬ ನಿಯಮವನ್ನು ಬಿಗ್ ಬಸ್ ವಿಧಿಸಿದ್ದಾರೆ. ಒಬ್ಬರು ಸ್ನಾನಕ್ಕೆ ತೆರಳಿದಾಗ ಇನ್ನೊಬ್ಬರು ಹೊರಗೆ ಕೂತು ಕಾಯಬೇಕು. ಈ ನಿಯಮವೇ ಚಂದ್ರಪ್ರಭ ಮತ್ತು ಸತೀಶ್ ನಡುವಿನ ಜಗಳಕ್ಕೆ ಕಾರಣ ಆಗಿದೆ.
ಸತೀಶ್ ಅವರು ಸ್ನಾನದ ವಿಚಾರದಲ್ಲಿ ಎಲ್ಲರ ಕೋಪಕ್ಕೆ ಗುರಿ ಆಗುತ್ತಿದ್ದಾರೆ. ಅವರು ಒಮ್ಮೆ ಬಾತ್ ರೂಮ್ ಸೇರಿಕೊಂಡರೆ ಹೊರಗೆ ಬರಲು ಹಲವು ಗಂಟೆಗಳು ಬೇಕು! ಅವರಿಗಾಗಿ ಹೊರಗಡೆ ಕುಳಿತು ಅರ್ಧ ದಿನವೆಲ್ಲ ಕಾಯುತ್ತಿದ್ದ ಚಂದ್ರಪ್ರಭ ಅವರಿಗೆ ತಾಳ್ಮೆ ಕೆಟ್ಟಿದೆ. ನೀರು ಕುಡಿಯಲು ಕೂಡ ಅಡುಗೆ ಮನೆಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಆಗ ಆಟದ ನಿಯಮವನ್ನು ಮುರಿಯಲು ಅವರು ತೀರ್ಮಾನಿಸಿದರು.
ಚಂದ್ರಪ್ರಭ ಅವರು ನಿಯಮ ಮುರಿದು ಅಡುಗೆ ಮನೆಗೆ ಬಂದು ನೀರು ಕುಡಿಯಲು ಮುಂದಾದರು. ಆಗ ಒಂಟಿಗಳೆಲ್ಲ ಆಕ್ಷೇಪ ವ್ಯಕ್ತಪಡಿಸಿದರು. ಅದರಿಂದ ಚಂದ್ರಪ್ರಭ ಅವರಿಗೆ ಕೋಪ ಬಂತು. ನೀರು ಕುಡಿಯಲು ಕೈಯಲ್ಲಿ ಹಿಡಿದಿದ್ದ ಗಾಜಿನ ಲೋಟವನ್ನು ನೆಲಕ್ಕೆ ಕುಕ್ಕಿದರು. ಲೋಟ ಒಡೆದು ಹೋಯಿತು. ಇದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ!
ಇದನ್ನೂ ಓದಿ: ಬಿಗ್ ಬಾಸ್ ಹನುಮಂತನ ಮದುವೆ ಯಾಕೆ ತಡ ಆಗುತ್ತಿದೆ? ಕಾರಣ ತಿಳಿಸಿದ ಗೋಲ್ಡ್ ಸುರೇಶ್
ದೊಡ್ಮನೆ ಒಳಗಿನ ವಸ್ತುಗಳಿಗೆ ಹಾನಿ ಮಾಡಿದರೆ ಬಿಗ್ ಬಾಸ್ ಕಠಿಣ ಶಿಕ್ಷೆ ನೀಡಬಹುದು. ತಪ್ಪು ಮಾಡಿದವರಿಗೆ ಮಾತ್ರವಲ್ಲದೇ ಇಡೀ ಮನೆಗೆ ಕೂಡ ಶಿಕ್ಷೆ ವಿಧಿಸಬಹುದು. ಹಾಗಾಗಿ ಎಲ್ಲರಿಗೂ ಚಿಂತೆ ಆಗಿದೆ. ‘ಮನುಷ್ಯನ ತಾಳ್ಮೆಗೆ ಮಿತಿ ಇರುತ್ತದೆ. ನಾನು ಎಷ್ಟು ಅಂತ ಕಾಯೋದು? ಬಾತ್ ರೂಮ್ ಹೊರಗೆ ನಾನು ಅರ್ಧ ದಿನ ಕಾಯೋಕೆ ಆಗುತ್ತಾ? ನೀರು ಕುಡಿಯಲು ಕೂಡ ಬರೋಕೆ ಆಗುತ್ತಿಲ್ಲ’ ಎಂದು ಚಂದ್ರಪ್ರಭ ಅವರು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




