ಈ ಬಾರಿ ಬಿಗ್ಬಾಸ್ ಮನೆಯ ಒಳಗಿನ ಜಗಳ, ವಿವಾದಗಳಿಗಿಂತಲೂ ಹೊರಗೆ ಸೃಷ್ಟಿಸುತ್ತಿರುವ ವಿವಾದಗಳಿಂದ ಹೆಚ್ಚು ಹೆಚ್ಚು ಸುದ್ದಿಯಾಗುತ್ತಿದೆ. ಮೊದಲಿಗೆ ಬಿಗ್ಬಾಸ್ ಸ್ಪರ್ಧಿ ವರ್ತೂರು ಪ್ರಕಾಶ್ ಹುಲಿ ಉಗುರು ಧರಿಸಿದ್ದು ವಿವಾದವಾಗಿ ಅವರು ಜೈಲು ಪಾಲಾದರು. ಅದರ ಬಳಿಕ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳಿಗೆ ಹುಲಿ ಉಗುರಿನ ಪ್ರಕರಣದಲ್ಲಿ ನೊಟೀಸ್ ಜಾರಿ ಆಗಿ, ವಿಚಾರಣೆ ಎದುರಿಸಬೇಕಾಯ್ತು. ಅದು ಮುಗಿಯುತ್ತಿದ್ದಂತೆ ಈಗ ಮತ್ತೊಬ್ಬ ಸ್ಪರ್ಧಿ ತನಿಷಾ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ಎಫ್ಐಆರ್ ನಮೂದು ಮಾಡಿಕೊಂಡಿದ್ದಾರೆ.
ತನಿಷಾ, ಬಿಗ್ಬಾಸ್ ಮನೆಯಲ್ಲಿ ಆಡಿದ ಮಾತೊಂದು ವಿವಾದಕ್ಕೆ ಕಾರಣವಾಗಿದೆ. ತನಿಷಾ, ಜಾತಿ ನಿಂದನೆ ಮಾಡಿದ್ದಾರೆಂದು ಭೋವಿ ಸಮುದಾಯದ ಮಹಿಳಾ ವಿಭಾಗ ಅಧ್ಯಕ್ಷರಾದ ಪದ್ಮಾ ಎಂಬುವರು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ರಾಮನಗರ ಪೊಲೀಸರು ಬಿಗ್ಬಾಸ್ ರಿಯಾಲಿಟಿ ಶೋನ ಆಯೋಜಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಪ್ರಕರಣ ಸಂಬಂಧ ಮಾಧ್ಯಮದೊಟ್ಟಿಗೆ ಮಾತನಾಡಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ”ಬಿಗ್ಬಾಸ್ ಶೋನ ಸ್ಪರ್ಧಿ ತನಿಷಾ ಕುಪ್ಪಂಡ ಭೋವಿ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆಂದು ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಂತೆಯೇ ಸ್ಪರ್ಧಿ ತನಿಷಾ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಷಾ ನಿಂದನಾತ್ಮಕ ಪದ ಬಳಸಿದ್ದಾರೆ ಎನ್ನಲಾದ ಪ್ರೋಮೋ ಅನ್ನು ಪರಿಶೀಲಿಸಿದ್ದು, ಮೂಲ ದೃಶ್ಯಗಳ ವಿಡಿಯೋವನ್ನು ನೀಡುವಂತೆ ನೋಟೀಸ್ ನೀಡಲಾಗಿದೆ” ಎಂದಿದ್ದಾರೆ.
ಇದನ್ನೂ ಓದಿ:‘ವರ್ತೂರು ಸಂತೋಷ್ ಬಿಗ್ಬಾಸ್ ಸಂಭಾವನೆ ಸೇರುವುದು ಅನಾಥಾಶ್ರಮಕ್ಕೆ’
”ಪ್ರಕರಣವನ್ನು ನಿಯಮಾನುಸಾರ ತನಿಖೆ ನಡೆಸುತ್ತಿದ್ದೇವೆ. ಬಿಗ್ಬಾಸ್ನವರು ಕೊಡುವ ದೃಶ್ಯಗಳನ್ನು ಪರಿಶೀಲನೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಮಾಗಡಿಯ ಡಿವೈಎಸ್ಪಿ ಅವರಿಗೆ ಈ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ” ಎಂದಿದ್ದಾರೆ.
ಟಾಸ್ಕ್ ಒಂದರಲ್ಲಿ ಉಸ್ತುವಾರಿಯಾಗಿದ್ದ ಡ್ರೋನ್ ಪ್ರತಾಪ್, ತಮ್ಮ ತಂಡಕ್ಕೆ ಅನುಕೂಲವಾಗುವಂತೆ ಆಡಲಿಲ್ಲ ಎಂದು ತನಿಷಾ, ಡ್ರೋನ್ ಪ್ರತಾಪ್ ಅನ್ನು ಬೈಯ್ಯುವ ಸಮಯದಲ್ಲಿ ಮಾಡಿದ್ದ ಪದ ಬಳಕೆಯ ಬಗ್ಗೆ ಭೋವಿ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಷಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ