
‘ರಾಮ ಶ್ಯಾಮ ಭಾಮ’ ಸಿನಿಮಾ ರಿಲೀಸ್ ಆಗಿ 20 ವರ್ಷಗಳು ತುಂಬುತ್ತಾ ಬಂದಿವೆ. ಈ ಚಿತ್ರ 2005ರ ಡಿಸೆಂಬರ್ನಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ರಮೇಶ್ ಅರವಿಂದ್, ಕಮಲ್ ಹಾಸನ್, ಊರ್ವಶಿ, ಶ್ರುತಿ, ಡೈಸಿ ಬೋಪಣ್ಣ ಮೊದಲಾದವರು ನಟಿಸಿದ್ದರು. ಈ ಚಿತ್ರವನ್ನು ರಮೇಶ್ ಅರವಿಂದ್ ಅವರೇ ನಿರ್ದೇಶನ ಮಾಡಿದ್ದರು. ಈ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಬಗ್ಗೆ ರಮೇಶ್ ಅರವಿಂದ್ ಅವರು ಮಾತನಾಡಿದ್ದಾರೆ. ‘ಜೀ ಕನ್ನಡ’ದ ‘ಸರೆಗಮಪ’ ವೇದಿಕೆ ಮೇಲೆ ಅವರು ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಹೇಳಿದ್ದಾರೆ.
ರಮೇಶ್ ಅರವಿಂದ್ ಅವರು ನಿರ್ದೇಶನ ಮಾಡುವಾಗ ಕಲಾವಿದರು ಹೇಳುವ ಮಾತನ್ನು ಕೇಳುತ್ತಾರೆ. ತಮ್ಮ ಮಾತೇ ಅಂತಿಮ ಎಂದು ಅವರು ನಿರ್ಧಾರಕ್ಕೆ ಬರೋದಿಲ್ಲ. ‘ರಾಮ ಶ್ಯಾಮ ಭಾಮ’ ಸಿನಿಮಾ ಶೂಟ್ ಸಂದರ್ಭದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಈ ಬಗ್ಗೆ ಅವರು ಹೇಳಿದ್ದಾರೆ. ಆ ಸಂದರ್ಭ ಯಾವ ರೀತಿ ಇತ್ತು, ಡೈಲಾಗ್ನ ಯಾವ ರೀತಿ ನೀಡಲಾಗಿತ್ತು ಎಂಬ ಬಗ್ಗೆ ಅವರು ಹೇಳಿದ್ದಾರೆ.
‘ರಾಮ ಶ್ಯಾಮ ಭಾಮ ಚಿತ್ರದ ಕ್ಲೈಮ್ಯಾಕ್ಸ್ ಶೂಟ್ ಮಾಡುತ್ತಿದ್ದೆವು. ಶಾಟ್ ಎಲ್ಲವೂ ಡಿಸೈಡ್ ಮಾಡಾಗಿತ್ತು. ಎಲ್ಲರಿಗೂ ಡೈಲಾಗ್ ಕೊಟ್ಟಾಗಿತ್ತು. ಆಗ ಊರ್ವಶಿ ಅವರು ಬಂದು ನಾನು ಡೈಲಾಗ್ ಹೇಳುವುದಿಲ್ಲ, ನಾಯಿ ರೀತಿ ಬೊಗಳುತ್ತೇನೆ ಎಂದರು. ಇಷ್ಟುದ್ದ ಡೈಲಾಗ್ ಬರೆದಿದ್ದೇನೆ. ಬೊಗಳುತ್ತೇನೆ ಎನ್ನುತ್ತೀರಲ್ಲ ಎಂದು ಅವರಿಗೆ ಕೇಳಿದೆ. ಕಮಲ್ ಹತ್ತಿರ ಹೋಗಿ ಊರ್ವಶಿ ನಾಯಿ ರೀತಿ ಬೊಗಳುತ್ತಾರಂತೆ ಎಂದೆ. ನಾನು ಹಾಗೆಯೇ ಬೊಗಳುತ್ತೇನೆ ಎಂದು ಕಮಲ್ ಹಾಸನ್ ಹೇಳಿದರು. ಈ ದೃಶ್ಯ ಹಿಟ್ ಆಗುತ್ತದೆ ಎಂದುಕೊಂಡೆ’ ಎಂದರು ರಮೇಶ್.
‘ಆ ಬಳಿಕ ದೃಶ್ಯ ಶುರುವಾಯ್ತು. ಸಿನಿಮಾ ಮಾಡುವಾಗ ಯಾವ ಕಿಟಕಿಯಿಂದ ಏನು ಹಾರಿ ಬರುತ್ತದೆ ಎಂದು ಹೇಳೋಕೆ ಆಗಲ್ಲ. ಹೀಗೆ ಹಾರಿ ಬಂದಾಗ ಅದನ್ನು ಹಿಡಿದುಕೊಳ್ಳಬೇಕು. ನಾನು ಪ್ರಿಪರ್ ಆಗಿದ್ದೇನೆ ಇದನ್ನೇ ಮಾಡುತ್ತೇನೆ ಎಂದು ಹೇಳೋಕೆ ಆಗಲ್ಲ. ಹೊಸ ವಿಚಾರ ಬಂದಿದೆ ಎಂದಾಗ ಅದನ್ನು ಮಾಡಲ್ಲ ಎಂದು ಹೇಳೋಕೆ ಆಗಲ್ಲ’ ಎಂದಿದ್ದಾರೆ ರಮೇಶ್ ಅರವಿಂದ್.
ಇದನ್ನೂ ಓದಿ: ತಮ್ಮ ಜೀವನದ ಪ್ರಮುಖ ಮಹಿಳೆಯರನ್ನು ಪರಿಚಯಿಸಿದ ರಮೇಶ್ ಅರವಿಂದ್
ರಮೇಶ್ ಅರವಿಂದ್ ಅವರು ಊರ್ವಶಿಯ ನಿರ್ಧಾರಕ್ಕೆ ಓಕೆ ಎಂದಿದ್ದಕ್ಕೆ ದೃಶ್ಯ ಅಷ್ಟು ಚೆನ್ನಾಗಿ ಮೂಡಿ ಬಂತು. ಸಿನಿಮಾ ಕೂಡ ಸೂಪರ್ ಹಿಟ್ ಆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.