ಚಿತ್ರರಂಗದಲ್ಲಿ ನಟಿಯರಿಗೆ ಇರುವ ಬೇಡಿಕೆ ಬಹುಬೇಗ ಕಡಿಮೆ ಆಗಿ ಬಿಡುತ್ತದೆ. ಕೆಲ ಹೀರೋಯಿನ್ಗಳಿಗೆ ವಯಸ್ಸಾಗುತ್ತಾ ಬಂದಂತೆ ಪ್ರಾಮುಖ್ಯತೆ ಇಲ್ಲದ ಪೋಷಕ ಪಾತ್ರಗಳಲ್ಲಿ ನಟಿಸೋಕೆ ಆಹ್ವಾನ ಕೊಡುತ್ತಾರೆ. ಈಗ ಹಿರಿಯ ನಟಿ ರೇಣುಕಾ ಶಹಾನೆಗೂ ಇದೇ ರೀತಿ ಆಗಿದೆ. ಹಿಂದಿ, ತೆಲುಗು, ಮರಾಠಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅವರಿಗೆ ಇತ್ತೀಚೆಗೆ ಇದೇ ರೀತಿಯ ಪ್ರಾಜೆಕ್ಟ್ಗಳು ಬರೋಕೆ ಆರಂಭವಾಗಿದೆ. ‘ನಿಮ್ಮ ಪಾತ್ರಕ್ಕೆ ಒಂದು ಅತ್ಯಾಚಾರ ದೃಶ್ಯ ಕೂಡ ಇದೆ. ಅದರಿಂದ ಸಿನಿಮಾ ಪ್ರಮುಖ ತಿರುವು ಪಡೆದುಕೊಳ್ಳಲಿದೆ’ ಎಂದು ಕೆಲ ನಿರ್ದೇಶಕರು ರೇಣುಕಾಗೆ ಹೇಳಿದ್ದಾರೆ. ಇದು ಅವರಿಗೆ ಬೇಸರ ಮೂಡಿಸಿದೆ.
‘ನೀವು ಅತ್ತಿಗೆ ಪಾತ್ರಕ್ಕೆ ಒಪ್ಪುತ್ತೀರಿ ಎಂದು ಕೆಲವರು ಹೇಳುತ್ತಾರೆ. ಇದು ತಪ್ಪಲ್ಲ. ಆದರೆ, ಹೀರೋನ ತಂಗಿ ಪಾತ್ರ ನಿಮ್ಮದು ಎಂದಾಗ ಬೇಸರವಾಗುತ್ತದೆ. ‘ಹೀರೋನ ಸಹೋದರಿಯಾದರೂ ನಿಮ್ಮ ಪಾತ್ರಕ್ಕೆ ತುಂಬಾನೇ ಪ್ರಾಮುಖ್ಯತೆ ಇದೆ. ಸಿನಿಮಾದಲ್ಲಿ ನೀವು ಅತ್ಯಾಚಾರಕ್ಕೆ ಒಳಗಾಗುತ್ತೀರಿ. ಆಗ ಹೀರೋ ವಿಲನ್ಗಳಿಗೆ ಹೊಡೆಯುತ್ತಾನೆ’ ಎಂದು ನಿರ್ದೇಶಕರು ಹೇಳುತ್ತಾರೆ’ ಎಂದು ತಮಗೆ ಬರುತ್ತಿರುವ ಪಾತ್ರಗಳ ಬಗ್ಗೆ ಬೇಸರ ಹೊರ ಹಾಕಿದ್ದಾರೆ ರೇಣುಕಾ.
‘ಅತ್ಯಾಚಾರಕ್ಕೆ ಒಳಗಾಗುವಂತಹ ಪಾತ್ರಗಳಲ್ಲಿ ನಟಿಸೋಕೆ ನನಗೆ ಇಷ್ಟವಿಲ್ಲ. ಆ ರೀತಿಯ ಪರಿಸ್ಥಿತಿಯನ್ನು ಸೆಟ್ನಲ್ಲಿ ಕಲ್ಪಿಸಿಕೊಳ್ಳೋಕೂ ನನಗೆ ಇಷ್ಟವಿಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ನಟಿಸುತ್ತೇನೆ’ ಎಂದಿದ್ದಾರೆ ಅವರು.
ಸಿನಿಮಾ ಮಾತ್ರವಲ್ಲದೆ, ಕಿರುತೆರೆಯಲ್ಲೂ ರೇಣುಕಾ ಗುರುತಿಸಿಕೊಂಡಿದ್ದಾರೆ. ಅವರು ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹಿಂದಿ ಹಾಗೂ ಮರಾಠಿ ಕಿರುತೆರೆಯಲ್ಲಿ ಅವರು ಮನೆ ಮಾತಾಗಿದ್ದಾರೆ. ಚಿತ್ರರಂಗ ಹಾಗೂ ಧಾರಾವಾಹಿ ಕೆಲಸಗಳನ್ನು ಒಟ್ಟೊಟ್ಟಿಗೆ ನಿರ್ವಹಿಸಿಕೊಂಡು ಹೋದ ಖ್ಯಾತಿ ಅವರಿಗೆ ಇದೆ. 2020ರಲ್ಲಿ ರೇಣುಕಾ ‘ದಿ ಕಪಿಲ್ ಶರ್ಮಾ ಶೋ’ಗೆ ಅತಿಥಿಯಾಗಿ ಆಗಮಿಸಿದ್ದರು. 2019ರಲ್ಲಿ ನಡೆದ ‘ಕೌನ್ ಬನೇಗಾ ಕರೋಡ್ಪತಿ 12’ಗೂ ಅವರು ಅತಿಥಿಯಾಗಿ ಬಂದಿದ್ದರು. ಕಾಜೋಲ್ ನಟನೆಯ ‘ತ್ರಿಭಂಗ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್-ಪ್ರಿಯಾಂಕಾ ತಿಮ್ಮೇಶ್ ಅಭಿನಯದ ‘ಅರ್ಜುನ್ ಗೌಡ’ ಸಿನಿಮಾ ಹೇಗಿದೆ?
‘ನಾನು ತಪ್ಪು ಆಯ್ಕೆಗಳನ್ನು ಮಾಡುತ್ತಲೇ ಇದ್ದೆ’; ಸಮಂತಾ ಹೀಗೆ ಮರುಗಿದ್ದೇಕೆ?