
ಬಿಗ್ ಬಾಸ್ ಹೊಸ ಸೀಸನ್ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಹಿಂದಿಯಲ್ಲಿ ‘ಬಿಗ್ ಬಾಸ್ 19’ (Bigg Boss 19) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಎಂದಿನಂತೆ ಸಲ್ಮಾನ್ ಖಾನ್ (Salman Khan) ಅವರು ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 24ರಿಂದ ಬಿಗ್ ಬಾಸ್ ಪ್ರಸಾರ ಆಗಲಿದೆ. ‘ಜಿಯೋ ಹಾಟ್ ಸ್ಟಾರ್’ ಮತ್ತು ‘ಕಲರ್ಸ್’ ವಾಹಿನಿ ಮೂಲಕ ವೀಕ್ಷಕರು ಈ ಶೋ ನೋಡಬಹುದು. ಶೋ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಇದರ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ ಬಿಗ್ ಬಾಸ್ (Bigg Boss) ಕಾರ್ಯಕ್ರಮದ ಥೀಮ್ ಏನು ಎಂಬುದನ್ನು ಟ್ರೇಲರ್ ಮೂಲಕ ರಿವೀಲ್ ಮಾಡಲಾಗಿದೆ.
ಪ್ರತಿ ಸೀಸನ್ನಲ್ಲಿ ಬಿಗ್ ಬಾಸ್ ಶೋ ಆಯೋಜಕರಿಗೆ ಮತ್ತು ನಿರೂಪಕರಿಗೆ ಹೆಚ್ಚು ಅಧಿಕಾರ ಇರುತ್ತಿತ್ತು. ಅವರೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ಹೇಳಿದಂತೆ ಮನೆಯವರು ಕೇಳಬೇಕಿತ್ತು. ಆದರೆ ಈ ಬಾರಿ ಬದಲಾವಣೆ ಆಗುತ್ತಿದೆ. ಮನೆಯೊಳಗಿನ ಎಲ್ಲ ಸಣ್ಣ-ಪುಟ್ಟ ಹಾಗೂ ದೊಡ್ಡ ನಿರ್ಧಾರವನ್ನು ಸ್ಪರ್ಧಿಗಳೇ ತೆಗೆದುಕೊಳ್ಳಲಿದ್ದಾರೆ!
‘ಈ ಬಾರಿ ಮನೆಯವರದ್ದೇ ಸರ್ಕಾರ’ ಎಂಬ ಟ್ಯಾಗ್ಲೈನ್ನೊಂದಿಗೆ ‘ಬಿಗ್ ಬಾಸ್ 19’ ಶೋ ಆರಂಭ ಆಗುತ್ತಿದೆ. ರಾಜಕೀಯದ ಥೀಮ್ ಇರಲಿದೆ. ಆ ಮೂಲಕ ವೀಕ್ಷಕರಲ್ಲಿ ಕುತೂಹಲ ಹೆಚ್ಚುವಂತಾಗಿದೆ. ಯಾವೆಲ್ಲ ಸ್ಪರ್ಧಿಗಳಿಗೆ ಈ ಬಾರಿ ಚಾನ್ಸ್ ಸಿಗಲಿದೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರರಾಗಿದ್ದಾರೆ. ಅನೇಕ ಹೊಸ ಅಂಶಗಳನ್ನು ಈ ಬಾರಿ ಪರಿಚಯಿಸಲಾಗುತ್ತಿದೆ.
ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅವರು ರಾಜಕಾರಣಿಯ ರೀತಿ ವೇಷ ಧರಿಸಿದ್ದಾರೆ. ಅವರ ಗೆಟಪ್ ನೋಡಿ ಅಭಿಮಾನಿಗಳು ಕಣ್ಣರಳಿಸಿದ್ದಾರೆ. ರಾಜಕೀಯ ಎಂದರೆ ಕಿತ್ತಾಟ, ಹೋರಾಟ ಇದ್ದೇ ಇರುತ್ತದೆ. ಹಾಗಾಗಿ ‘ಬಿಗ್ ಬಾಸ್ 19’ ಶೋ ಸಿಕ್ಕಾಪಟ್ಟೆ ಕ್ರೇಜಿ ಆಗಿರಲಿದೆ ಎಂಬುದು ಖಚಿತ. ಅಲ್ಲದೇ ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದ ಅವಧಿ ಕೂಡ ಹೆಚ್ಚಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: ಈ ಬಾರಿ ಬಿಗ್ ಬಾಸ್ ನಿರೂಪಣೆ ಮಾಡೋದು ಒಬ್ಬರಲ್ಲ, ಮೂವರು ಸೆಲೆಬ್ರಿಟಿಗಳು
‘ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಆಗುತ್ತದೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದಾರೆ. ಆ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಸಿನಿಮಾ ಕೆಲಸಗಳ ನಡುವೆಯೇ ಅವರು ಬಿಗ್ ಬಾಸ್ ಶೋ ನಡೆಸಿಕೊಡಬೇಕಿದೆ. ಒಂದು ವೇಳೆ ಶೋ ಅವಧಿ ಹೆಚ್ಚಾದರೆ ನಡುವೆ ಬೇರೆ ನಿರೂಪಕರು ಕೂಡ ಶೋ ನಡೆಸಿಕೊಡುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.