ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ

ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಕುಂಕುಮ್ ಭಾಗ್ಯ' ಖ್ಯಾತಿಯ ನಟಿ ಸಂಚಿತಾ ಉಗಾಳೆ 30ನೇ ವಯಸ್ಸಿನಲ್ಲಿ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ನಿವಾಸದಲ್ಲಿ ಶವ ಪತ್ತೆಯಾಗಿದ್ದು, ಯಾವುದೇ ಡೆತ್ ನೋಟ್ ಸಿಕ್ಕಿಲ್ಲ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆತ್ಮಹತ್ಯೆ ಕೆಲವೇ ಗಂಟೆಗಳ ಮೊದಲು ಖುಷಿಯಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ಹಂಚಿಕೊಂಡಿದ್ದರು.

ಆತ್ಮಹತ್ಯೆ ಮಾಡಿಕೊಂಡ ಸಂಚಿತಾ ಉಗಾಲೆ; ಸಾವಿಗೂ ಮುನ್ನ ರೀಲ್ಸ್ ಮಾಡಿದ್ದ ಕಿರುತೆರೆ ನಟಿ
ಸಂಚಿತಾ ಉಗಾಳೆ
Image Credit source: Sanchita Ugale Instagram

Updated on: Jun 15, 2026 | 2:34 PM

ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಕುಂಕುಮ್ ಭಾಗ್ಯ’ ಖ್ಯಾತಿಯ ಯುವ ನಟಿ ಸಂಚಿತಾ ಉಗಾಳೆ ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಭಾನುವಾರ (ಜೂನ್ 14) ಸಂಜೆ ಮುಂಬೈ ಸಮೀಪದ ನಲಸೋಪಾರಾದಲ್ಲಿ ಅವರು ತಮ್ಮ ಜೀವ ಕೊನೆ ಮಾಡಿಕೊಂಡಿದ್ದು, ಬೆಡ್‌ರೂಮ್‌ನಲ್ಲಿ ಅವರ ಶವ ಸಿಕ್ಕಿದೆ. ಸೋಮವಾರ ಈ ವಿಷಯ ಅಧಿಕೃತವಾಗಿ ಬೆಳಕಿಗೆ ಬಂದಿದೆ. ಈ ಸುದ್ದಿ ಕಿರುತೆರೆ ಲೋಕಕ್ಕೆ ಭಾರಿ ಆಘಾತವನ್ನು ನೀಡಿದೆ.

ಪೊಲೀಸ್ ಮೂಲಗಳ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಸಂಚಿತಾ ಮನೆಯಲ್ಲಿ ಒಬ್ಬರೇ ಇದ್ದರು ಎನ್ನಲಾಗಿದೆ. ಇದರಿಂದ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಸುಲಭವಾಯಿತು. ಕುಟುಂಬಸ್ಥರು ಮನೆಗೆ ಬಂದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಸದ್ಯಕ್ಕೆ ಘಟನಾ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸಂಚಿತಾ ಆತ್ಮಹತ್ಯೆ ಮಾಡಿಕೊಳ್ಳುವ ಕೇಲವೇ ಗಂಟೆಗಳ ಮುನ್ನವಷ್ಟೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅತ್ಯಂತ ಖುಷಿಯಾಗಿ ನಗುತ್ತಾ ಕಾಣಿಸಿಕೊಂಡಿದ್ದ ನಟಿ, ಇದ್ದಕ್ಕಿದ್ದಂತೆ ಇಂತಹ ನಿರ್ಧಾರ ಕೈಗೊಂಡಿರುವುದನ್ನು ಕಂಡು ಅಭಿಮಾನಿಗಳು ಮತ್ತು ಆಕೆಯ ಸಹ-ಕಲಾವಿದರು ತೀವ್ರ ಆಶ್ಚರ್ಯ ಹಾಗೂ ಕಣ್ಣೀರು ಹಾಕುತ್ತಿದ್ದಾರೆ.

ಕಿರುತೆರೆಯಿಂದ ಬೆಳ್ಳಿಪರದೆಯವರೆಗೆ ಸಂಚಿತಾ ಜರ್ನಿ

ಬಹಳ ಸಣ್ಣ ಕುಟುಂಬದಿಂದ ಬಂದು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಂಚಿತಾ ತೀವ್ರ ಹೋರಾಟ ನಡೆಸಿದ್ದರು. ಜೀ ಟಿವಿಯ ಸೂಪರ್ ಹಿಟ್ ಶೋ ‘ಕುಂಕುಮ್ ಭಾಗ್ಯ’ದಲ್ಲಿ ದಿಯಾ ಟಂಡನ್ ಪಾತ್ರದ ಮೂಲಕ ಅವರು ಭಾರಿ ಜನಪ್ರಿಯತೆ ಗಳಿಸಿದ್ದರು. ಇದರೊಂದಿಗೆ ‘ವಾಗ್ಲೆ ಕಿ ದುನಿಯಾ’ ಮತ್ತು ನಾಯಕಿಯಾಗಿ ‘ದಿಲ್ವಾಲಿ ದುಲ್ಹಾ ಲೇ ಜಾಯೇಗಿ’ ಧಾರಾವಾಹಿಗಳಲ್ಲಿ ನಟಿಸಿದ್ದರು.ಕೇವಲ ಕಿರುತೆರೆ ಅಷ್ಟೇ ಅಲ್ಲದೆ, ಮನೋಜ್ ಬಾಜಪೇಯಿ ಅವರ ‘ಸೈಲೆನ್ಸ್ 2’, ವಿಕ್ಕಿ ಕೌಶಲ್ ಅವರ ಮುಂಬರಲಿರುವ ಐತಿಹಾಸಿಕ ಸಿನಿಮಾ ‘ಛಾವಾ’ದಲ್ಲೂ ಅವರು ನಟಿಸಿದ್ದರು.

ಇದನ್ನೂ ಓದಿ: ಹೊಸ ಸೀರಿಯಲ್ ಮೂಲಕ ಕಿರುತೆರೆಗೆ ಕವಿತಾ ಗೌಡ ಕಂಬ್ಯಾಕ್?

ಕಳೆದ ವರ್ಷವಷ್ಟೇ ನೀಡಿದ್ದ ಸಂದರ್ಶನದಲ್ಲಿ, ದಿನಕ್ಕೆ 17-18 ಗಂಟೆಗಳ ಶೂಟಿಂಗ್ ಇರುವುದರಿಂದ ವೈಯಕ್ತಿಕ ಜೀವನ ಮತ್ತು ಆರೋಗ್ಯದ ಕಡೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಸಂಚಿತಾ ಹೇಳಿಕೊಂಡಿದ್ದರು. ಸದ್ಯ ಅವರ ಸಾವಿಗೆ ನಿಖರ ಕಾರಣ ಏನೆಂಬುದು ತನಿಖೆಯಿಂದಷ್ಟೇ ತಿಳಿಯಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us