ಪ್ರತಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 8.30ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಕ್ಷತ್ರಳ ಕಾರಣದಿಂದ ಬೀದಿಗೆ ಬೀಳುತ್ತಿದ್ದ ತುಕಾರಾಮ್ ಕುಟುಂಬ ಸಂಕಷ್ಟದಿಂದ ಪಾರಾಗಿದೆ. ನಕ್ಷತ್ರ ಬಾಲ್ಯವನ್ನು ಕಳೆದ ಮನೆ ವಾಪಸ್ ಅವರಿಗೆ ಸಿಕ್ಕಾಯಿತು. ಈಕೆಯ ಈ ಸಹಾಯಕ್ಕೆ ಸೃಷ್ಠಿ ಮತ್ತು ಆಕೆಯ ತಾಯಿ ಧನ್ಯವಾದಗಳನ್ನು ಹೇಳಿ ಇನ್ನಾದರೂ ನೆಮ್ಮದಿಯಿಂದ ಇರಬಹುದು ಎಂದು ನಿಟ್ಟುಸಿರು ಬಿಡುತ್ತಾರೆ.
ಆದರೆ ಮೊದಲಿನಿಂದಲೂ ನಕ್ಷತ್ರಳ ಮೇಲೆ ಕಿಡಿಕಾರುವ ತುಕರಾಮ್ ಮತ್ತು ಅಜ್ಜಿಗೆ ಹೊಟ್ಟೆ ಉರಿಯಾಗಿ ಈ ಅನಿಷ್ಟದಿಂದ ನಾವು ಸಹಾಯ ಪಡೆಯಬೇಕಾಯಿತಲ್ಲ ಅಂತ ಮನಸ್ಸಲ್ಲೇ ಗೊಣಗುತ್ತಾರೆ. ತಾನು ಹಣ ಪಡೆದು ಮನೆಯನ್ನು ಉಳಿಸಿಕೊಟ್ಟ ವಿಚಾರವನ್ನು ನಕ್ಷತ್ರ ಆಕೆಯ ಹೆತ್ತವರಿಗೆ ಹೇಳುತ್ತಾಳೆ. ಮಗಳ ಈ ಒಳ್ಳೆಯ ಕೆಲಸಕ್ಕೆ ಚಂದ್ರಶೇಖರ್ ಮತ್ತು ಆರತಿ ಹೆಮ್ಮೆ ಪಡುತ್ತಾರೆ. ನಂತರ ಆಕೆ ಜಯಮ್ಮನ ಕೈಯಾರೆ ಕೈತುತ್ತು ತಿನ್ನುವ ಬಯಕೆಯನ್ನು ವ್ಯಕ್ತ ಪಡಿಸುತ್ತಾಳೆ. ಜಯಮ್ಮ ನಕ್ಷತ್ರಳಿಗೆ ಕೈತುತ್ತು ನೀಡುತ್ತಾ ಅವರ ಮಧ್ಯೆ ಭಾವನಾತ್ಮಕ ಮಾತುಕತೆ ನಡೆಯುತ್ತದೆ.
ಅಷ್ಟರಲ್ಲಿ ಶ್ವೇತಾ ಮನೆಗೆ ಬರುತ್ತಾಳೆ. ಆಕೆಯನ್ನು ಕಂಡು ಕೆಂಡಾಮಂಡಲವಾದ ಸೃಷ್ಟಿಯು ಯಾವ ಬೀದಿಯಲ್ಲಿ ಬಿದ್ದಿದ್ದೇವೆ ಎಂದು ನೋಡಲು ಬಂದಿದ್ದೀಯಾ, ನಿನಗೆ ಸ್ವಲ್ಪನಾದರೂ ನಾಚಿಕೆ, ಮಾನ ಮರಿಯಾದೆ ಇದೆಯಾ ಎಂದು ಬೈತಾಳೆ. ಜಯಮ್ಮ ಕೂಡಾ ನೋವಿನಲ್ಲಿ ಯಾಕೆ ಹೀಗೆ ಮಾಡಿದ್ದೀಯಾ ಎಂದು ಅಳುತ್ತಾ ಶ್ವೇತಾಳಿಗೆ ಬುದ್ಧಿ ಹೇಳುತ್ತಾರೆ. ಇದರಿಂದ ಕೋಪಗೊಂಡ ಶ್ವೇತಾ ನಾನೇನು ನನ್ನನ್ನು ಈ ಕೊಂಪೆಯಲ್ಲಿ ಹುಟ್ಟಿಸಿ ಅಂತ ಕೇಳಿದ್ನಾ ಅಂತಾ ದುರಹಂಕಾರದ ಮಾತುಗಳನ್ನಾಡುತ್ತಾಳೆ.
ಇದನ್ನು ಓದಿ: ಕತ್ತಲೆ ಕೋಣೆಯಲ್ಲಿ ವಸೂಧರಾ-ರಿಷಿ ಒಟ್ಟಿಗೆ ಇರುವುದು ನೋಡಿ ಶಾಕ್ ಆದ ಗೌತಮ್
ಮಾಡಿದ ತಪ್ಪಿಗೆ ತೇಪೆ ಹಾಕುವ ಸಲುವಾಗಿ ನಿಮಗೆ ಹೊಸ ಮನೆಯನ್ನು ಕೊಡಿಸುವ ಸಲುವಾಗಿ ನಾನು ಮನೆ ಮಾರಿ ಇನ್ವೆಸ್ಟ್ ಮಾಡಿದೆ. ಆದರೆ ಅವರು ನನಗೆ ಮೋಸ ಮಾಡುತ್ತಾರೆ ಅಂತಾ ಗೊತ್ತಿರಲಿಲ್ಲ. ಇಲ್ಲಿ ನಿಜವಾಗಿಯೂ ಮೋಸ ಆಗಿರುವಂತಹದ್ದು ನನಗೆ ಎಂದು ಶ್ವೇತಾ ಉಡಾಫೆ ಉತ್ತರವನ್ನು ನೀಡುತ್ತಾಳೆ. ಕೆಟ್ಟು ಹೋದ ಮಗಳ ಈ ಬುದ್ಧಿಗೆ ಮರುಕ ಪಡುತ್ತಾ ಜಯಮ್ಮ, ಮನೆ ಮಾರುವ ಮೊದಲು ದೊಡ್ಡವರ ಬಳಿ ಒಂದು ಮಾತು ಕೆಳಬೇಕು ಎಂದೆನಿಸಲಿಲ್ಲವೆ ನಿನಗೆ, ಯಾಕೆ ನಮ್ಮ ಹೊಟ್ಟೆ ಉರಿಸುತ್ತಿಯಾ, ನೀನೂ ಇನ್ನಾದರೂ ಬದಲಾಗದಿದ್ದರೆ ಜೀವನದಲ್ಲಿ ಯಾವತ್ತು ಉದ್ಧಾರ ಆಗಲ್ಲ ಎಂದು ಹೇಳಿ ಜೋರಾಗಿ ಅಳುತ್ತಾರೆ.
ಅವಳು ಮಾಡಿದ ತಪ್ಪಿಗೆ ನೀವ್ಯಾಕೆ ಕಣ್ಣೀರು ಹಾಕುತ್ತೀರಾ ಅಮ್ಮ ಎಂದು ಹೇಳಿ, ತುಕರಾಮ್ ಮನೆಯನ್ನು ಜಯಮ್ಮನ ಹೆಸರಿಗೆ ಮಾಡುವ ನಿರ್ಧಾರನ್ನು ಮಾಡುತ್ತಾಳೆ ನಕ್ಷತ್ರ. ಶ್ವೇತಾಳಿಗೆ ವಾರ್ನಿಂಗ್ ಕೊಟ್ಟು ಇನ್ನು ಮುಂದೆಯೂ ಹಳೆ ಚಾಳಿ ಹೀಗೆಯೆ ಮುಂದುವರೆಸಿಕೊಂಡು ಹೋದರೆ ಪರಿಣಾಮ ನೆಟ್ಟಗಿರಲ್ಲ, ಅಪ್ಪಾ ನೀವು ಕೂಡಾ ಅಷ್ಟೆ ಮಗಳು ತಪ್ಪು ಮಾಡಿದರೆ ಬುದ್ಧಿ ಮಾತು ಹೇಳಿ ವಿನಃ ಕುರುಡು ಪ್ರೀತಿಯನ್ನು ಅವಳಿಗೆ ತೋರಿಸಬೇಡಿ ಎಂದು ನಕ್ಷತ್ರ ಹೇಳುತ್ತಾಳೆ. ಮನೆಯವರ ಬುದ್ಧಿ ಮಾತಿಗಾದರೂ ಶ್ವೇತಾ ಆಕೆಯ ಹಳೆಯ ಚಾಳಿಯನ್ನು ಬಿಡುತ್ತಾಳಾ ಅಂತಾ ಮುಂದೆ ನೋಡಬೇಕಾಗಿದೆ.
ಮಾಲಾಶ್ರೀ ಅಂಚನ್
Published On - 10:10 am, Wed, 5 October 22