Lakshana Serial: ಬೀದಿಗೆ ಬಂದ ತುಕಾರಾಮ್ ಕುಟುಂಬಕ್ಕೆ ನೆರವಾಗಿ ನಿಂತಿದ್ದಾಳೆ ನಕ್ಷತ್ರ
Lakshana: ಇನ್ನಾದರೂ ತುಕರಾಮ್ ಮತ್ತು ಅಜ್ಜಿ ನಕ್ಷತ್ರಳನ್ನು ಕಪ್ಪು ಹುಡುಗಿ ಅಂತಾ ಹೀಯಾಳಿಸುವುದನ್ನು ನಿಲ್ಲಿಸುತ್ತಾರಾ ಹಾಗೂ ಶ್ವೇತಾಳ ದುರಹಂಕಾರಕ್ಕೆ ಬ್ರೇಕ್ ಬೀಳುತ್ತಾ ಎಂದು ಮುಂದೆ ಕಾದು ನೋಡಬೇಕಾಗಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಮಾತಿದೆ. ಆದರೆ ಇಲ್ಲಿ ಶ್ವೇತಾಳ ದುರಾಸೆಯಿಂದ ಆಕೆಯ ಕೈಗೆ ಚಿಪ್ಪು ಸಿಕ್ಕಿದೆ. ಮನೆಯನ್ನು ಮಾರಿ ಬಂದ 50 ಲಕ್ಷ ಹಣವನ್ನು ತನ್ನ ಸ್ನೇಹಿತೆಯ ಸಹಾಯದಿಂದ ಬೇರೊಬ್ಬರಿಗೆ ನೀಡಿ ಅದರ ಎರಡರಷ್ಟು ಬ್ಲಾಕ್ ಮನಿ ಪಡೆಯುತ್ತಾಳೆ. ಅದನ್ನು ತಗೊಂಡು ಖುಷಿಯಿಂದ ಬಂದವಳಿಗೆ ದೊಡ್ಡ ಆಘಾತವೇ ಕಾದಿತ್ತು. ಯಾಕೆಂದರೆ ಆ ಬ್ಯಾಗ್‌ನಲ್ಲಿ ಯಾವುದೇ ಹಣವಿರಲಿಲ್ಲ ಬದಲಾಗಿ ಬಿಳಿ ಹಾಳೆಗಿದ್ದವು. ಇದನ್ನು ಕಂಡು ಶಾಕ್ ಆದ ಶ್ವೇತಾ ನಾನು ಮೋಸ ಹೋದೆ ಅವಳನ್ನು ಸುಮ್ಮನೆ ಬಿಡಲ್ಲ ಅಂತ ಚೀರಾಡುತ್ತಾಳೆ.
ನಂತರ ಪೋಲಿಸ್ ಕಂಪ್ಲೇಂಟ್ ಕೊಡಬೇಕು ಎಂದಾಗ ಮಿಲ್ಲಿ ಆಕೆಯನ್ನು ತಡೆದು ನೀನೇನಾದರೂ ಕಂಪ್ಲೇಂಟ್ ಕೊಟ್ರೆ ಶಕುಂತಳಾ ದೇವಿಗೆ ನಿನ್ನ ಬಂಡವಾಳ ಎಲ್ಲಾ ಗೊತ್ತಾಗಿ ಬಿಡುತ್ತದೆ ಎಂದು ಭಯ ಪಡಿಸುತ್ತಾಳೆ. ಮಿಲ್ಲಿಯ ಮಾತಿನಿಂದ ಸುಮ್ಮನೆ ಕುಳಿತ ಶ್ವೇತಾ ಮನೆಯವರಿಗೆ ಏನು ಹೇಳಿ ಮ್ಯಾನೆಜ್ ಮಾಡುವುದು ಎಂಬ ಚಿಂತೆಯಲ್ಲಿರುತ್ತಾಳೆ.
ಶ್ವೇತಾಳ ಈ ಘನಂದಾರಿ ಕೆಲಸಕ್ಕೆ ತುಕಾರಾಮ್ ಮನೆಯನ್ನು ಒಡೆಯಲು ಮನೆ ಖರೀದಿ ಮಾಡಿದ ವ್ಯಕ್ತಿ ಜೆಸಿಬಿಯನ್ನು ಕರೆಸುತ್ತಾನೆ. ತುಕಾರಾಮ್ ಮನೆಯವರು ಎಷ್ಟೇ ಕೇಳಿಕೊಂಡರೂ ಆತ ನಾನು ಮನೆಯನ್ನು ಒಡೆದು ಹಾಕಿಯೇ ತೀರುತ್ತೇನೆ ಎಂದು ಪಟ್ಟು ಹಿಡಿಯುತ್ತಾನೆ. ಇನ್ನೇನು ಮನೆಯನ್ನು ಒಡೆಯುತ್ತಾರೆ ಅನ್ನುವಷ್ಟರಲ್ಲಿ ನಕ್ಷತ್ರ ಬಂದು ಅವರನ್ನು ತಡೆದು ನನ್ನ ತವರು ಮನೆಯು ಒಂದು ಇಟ್ಟಿಗೆ ಅಲ್ಲಾಡಿದರೂ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಹೇಳುತ್ತಾಳೆ. ನಕ್ಷತ್ರಳ ಆಗಮನ ಮನೆಯವರಿಗೆ ಸಮಾಧಾನ ತರುತ್ತದೆ.
ನೀನ್ಯಾರೂ, ನೀನು ಯಾವ ನಾಟಕವನ್ನು ಮಾಡಲು ಬಂದ್ದಿದ್ದೀಯಾ ಅಂತಾ ಮನೆ ಖರೀದಿ ಮಾಡಿದ ವ್ಯಕ್ತಿ ನಕ್ಷತ್ರಳನ್ನು ಪ್ರಶ್ನೆ ಮಾಡುತ್ತಾನೆ. ಅದಕ್ಕೆ ಉತ್ತರಿಸಿದ ನಕ್ಷತ್ರ ಇದು ನನ್ನ ತವರು ಮನೆ. ಇದಕ್ಕೆ ಯಾವುದೇ ತೊಂದರೆ ಆಗಲು ನಾನು ಬಿಡುವುದಿಲ್ಲ. ನಿಮ್ಮ ಐವತ್ತು ಲಕ್ಷ ನಿಮಗೆ ಬರುತ್ತದೆ ನಮಗೆ ಮನೆಯ ಪತ್ರವನ್ನು ಕೊಡಿ ಎಂದು ಹೇಳುತ್ತಾಳೆ. ಇವಳು ಹೇಳಿದ ತಕ್ಷಣ ನಾನು ಮನೆ ಪತ್ರವನ್ನು ಕೊಡಬೇಕಂತೆ ಎಂಬ ಕೊಂಕು ಮಾತುಗಳನ್ನಾಡಿ ಮನೆಯನ್ನು ಒಡೆದು ಹಾಕಲು ತನ್ನ ಆಳುಗಳಿಗೆ ಮನೆ ಖರೀದಿ ಮಾಡಿದ ವ್ಯಕ್ತಿ ಹೇಳುತ್ತಾನೆ.
ಇದನ್ನು ಓದಿ: ಹೊಂಗನಸು: ಜಗತಿ ವಾಪಸ್ ಬಂದ ಖುಷಿಯಲ್ಲಿ ಮಹೇಂದ್ರ ತೇಲುತ್ತಿದ್ರೆ, ಉರಿದು ಬೀಳ್ತಿದ್ದಾಳೆ ದೇವಯಾನಿ
ತಕ್ಷಣ ಎರಡು ಯೋಚನೆ ಮಾಡದ ನಕ್ಷತ್ರ ಒಂದು ಕೋಟಿ ಕೊಡುತ್ತೇನೆ ಅಂತ ಹೇಳಿದಾಗ ಅಲ್ಲಿದ್ದವರೆಲ್ಲಾ ಒಂದು ಕ್ಷಣ ದಂಗಾಗಿ ಬಿಡುತ್ತಾರೆ. ನಂತರ ಮನೆ ಖರೀದಿ ಮಾಡಿದ ವ್ಯಕ್ತಿ ನಕ್ಷತ್ರಳ ಮಾತನ್ನು ಹೀಯಾಳಿಸುತ್ತಾ ಒಂದು ಕೋಟಿ ಕೊಡುತ್ತಾಳಂತೆ, ಇವಳೇನು ಕುಬೇರನ ಮಗಳ ಎಂದು ಹೇಳಿ ಜೋರಾಗಿ ನಗುತ್ತಾನೆ. ಆಗ ನಕ್ಷತ್ರ ಚಂದ್ರಶೇಖರ್ ಮಗಳಿಗೆ ಒಂದು ಕೋಟಿ ಕೊಡುವುದು ದೊಡ್ಡ ವಿಷಯವಲ್ಲ ಎಂದು ಹೇಳಿದಾಗ ಆ ವ್ಯಕ್ತಿ ಒಂದು ಕ್ಷಣ ನಡುಗಿ ಹೋಗುತ್ತಾನೆ. ನೀವು ಚಂದ್ರಶೇಖರ್ ಮಗಳಾ ಎಂದು ಆಶ್ಚರ್ಯದಿಂದ ಕೇಳುತ್ತಾನೆ. ಈಗ ಚಂದ್ರಶೇಖರ್ ಕಾರಣದಿಂದ ತುಕರಾಮ್ ಕುಟುಂಬಕ್ಕೆ ಮನೆ ಪತ್ರ ವಾಪಸ್ ಸಿಗುವ ಭರವಸೆ ಮೂಡಿದೆ. ಇನ್ನಾದರೂ ತುಕಾರಾಮ್ ಮತ್ತು ಅಜ್ಜಿ ನಕ್ಷತ್ರಳನ್ನು ಕಪ್ಪು ಹುಡುಗಿ ಅಂತಾ ಹೀಯಾಳಿಸುವುದನ್ನು ನಿಲ್ಲಿಸುತ್ತಾರಾ ಹಾಗೂ ಶ್ವೇತಾಳ ದುರಹಂಕಾರಕ್ಕೆ ಬ್ರೇಕ್ ಬೀಳುತ್ತಾ ಎಂದು ಮುಂದೆ ಕಾದು ನೋಡಬೇಕಾಗಿದೆ.
Published On - 9:40 am, Tue, 4 October 22