ಹೊಂಗನಸು: ಜಗತಿ ವಾಪಸ್ ಬಂದ ಖುಷಿಯಲ್ಲಿ ಮಹೇಂದ್ರ ತೇಲುತ್ತಿದ್ರೆ, ಉರಿದು ಬೀಳ್ತಿದ್ದಾಳೆ ದೇವಯಾನಿ
Honganasu Serial Update: ಮನೆಗೆ ಜಗತಿ ಬಂದಿದ್ದನ್ನು ಸಹಿಸದ ದೇವಯಾನಿ ದೊಡ್ಡ ರಂಪ ಮಾಡಿದ್ದಾಳೆ. ಒಟ್ಟಿನಲ್ಲಿ ಮನೆಯ ವಾತಾವರಣ ಬದಲಾಗಿದೆ. ಮುಂದೇನಾಗುತ್ತೆ ಎಂಬ ಕೌತುಕ ಮೂಡಿದೆ.
‘ಸ್ಟಾರ್ ಸುವರ್ಣ’ (Star Suvarna) ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಹೊಂಗನಸು’ ಧಾರಾವಾಹಿಯ (Honganasu Serial) ರಿಷಿಗೆ ತನ್ನ ತಂದೆಯ ಸಂತೋಷವೇ ಮುಖ್ಯ. ಅಪ್ಪನ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಪತ್ನಿಯಿಂದ ದೂರ ಆಗಿ ನೋವು ಅನುಭವಿಸುತ್ತಿದ್ದ ಮಹೇಂದ್ರನಿಗೆ ಪುತ್ರ ದೊಡ್ಡ ಸರ್ಪ್ರೈಸ್ ನೀಡಿದ್ದಾನೆ. ತಾನೇ ಮನೆಯಿಂದ ಹೊರಹಾಕಿದ್ದ ತಾಯಿಯನ್ನು ಈಗ ಆತ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದರಿಂದ ಮಹೇಂದ್ರನಿಗೆ ಅಚ್ಚರಿ ಜೊತೆಗೆ ಸಂತೋಷವೂ ಆಗಿದೆ. ಪತ್ನಿ ಬಂದ ಖುಷಿಯಲ್ಲಿ ತೇಲುತ್ತಿದ್ದಾನೆ ಮಹೇಂದ್ರ. ಆದರೆ, ಮಹೇಂದ್ರನ ಅತ್ತಿಗೆ ದೇವಯಾನಿ ಶಾಕ್‌ನಲ್ಲಿದ್ದಾಳೆ. ದೇವಯಾನಿಯೇ ಪಿತೂರಿ ಮಾಡಿ ಜಗತಿಯನ್ನು ಮನೆಯಿಂದ ಹೊರ ಹಾಕಿಸಿದ್ದಳು. 27 ವರ್ಷಗಳ ಕಾಲ ಜಗತಿ ತನ್ನ ಗಂಡ, ಮಗ, ಮನೆಯಿಂದ ದೂರ ಇದ್ದಳು. ಇದೀಗ ಪುತ್ರನೇ ಮನೆಗೆ ಕರೆದುಕೊಂಡು ಬಂದಿರುವುದು ದೇವಯಾನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.
ದೇವಯಾನಿ ಇದ್ದ ರೂಮಿಗೆ ರಿಷಿ ಮತ್ತು ವಸೂಧರಾ ಎಂಟ್ರಿ ಕೊಟ್ಟರು. ಇಬ್ಬರೂ ಒಟ್ಟಿಗೆ ಬಂದಿದ್ದನ್ನು ನೋಡಿ ದೇವಯಾನಿ ಸಹಿಸಲಿಲ್ಲ. ವಸೂಧರಾಳ ಕಾಲಿಗೆ ಒದ್ದು ಆಕೆ ಮುಂದೆ ಹೋದಳು. ಪಕ್ಕದಲ್ಲೇ ಇದ್ದ ಬ್ಯಾಗ್ ವಸೂಧರಾ ಕಾಲು ಮೇಲೆ ಬಿದ್ದು ಏಟಾಯಿತು. ಕಾಲು ನೋವು ಎಂದು ವಸು ಜೋರಾಗಿ ಕೂಗಿದಳು. ಓಡಿ ಬಂದ ರಿಷಿ ಏನಾಯಿತು ಎಂದು ವಿಚಾರಿಸಿದ. ಅಲ್ಲೇ ಇದ್ದ ದೇವಯಾನಿ ಯಾವುದೇ ಮಾತನಾಡದೆ ಅಲ್ಲಿಂದ ಹೊರಟಳು. ಬಳಿಕ ರಿಷಿ ವೈದ್ಯರನ್ನು ಮನೆಗೆ ಕರೆಸಿ ವಸೂಧರಾಗೆ ಚಿಕಿತ್ಸೆ ಕೊಡಿಸಿದ.
‘ಹೇಗೆ ಏಟಾಯಿತು’ ಎಂದು ವಸು ಬಳಿ ಜಗತಿ ಪ್ರಶ್ನೆ ಮಾಡಿದಳು. ಆದರೆ ರಿಷಿ ಆ ವಿಚಾರ ಈಗ್ಯಾಕೆ ಎಂದು ಹೇಳಿ ಜಗತಿಯ ಬಾಯಿ ಮುಚ್ಚಿಸಿದ. ವೈದ್ಯರು ವಸುಗೆ ಕೆಲವು ದಿನಗಳು ವಿಶ್ರಾಂತಿ ಮಾಡಲು ಹೇಳಿ ಹೋದರು. ಬಳಿಕ ವಸು ಈ ಮನೆಯಿಂದ ಹೋಗುತ್ತೀನಿ ಎಂದು ಪಟ್ಟು ಹಿಡಿದಳು. ಆದರೆ ತನ್ನ ಮನೆಯಲ್ಲೇ ಇರಬೇಕು, ಎಲ್ಲಿಗೂ ಹೋಗಬಾರದು ಎಂದು ರಿಷಿ ಹೇಳಿದ. ಆತನ ಮಾತು ದೇವಯಾನಿಯ ಕೋಪ ನೆತ್ತಿಗೇರುವಂತೆ ಮಾಡಿತು.
ತನ್ನ ಕಾಲಿಗೆ ಏಟಾಗಿದ್ದರೂ ವಸೂಧರಾ ಮನೆ ಮುಂದೆ ರಂಗೋಲಿ ಹಾಕಬೇಕು. ಅದಕ್ಕೆ ಬೇಕಾಗುವ ಪದಾರ್ಥಗಳನ್ನು ತೆಗೆದುಕೊಂಡು ಬನ್ನಿ ಎಂದು ರಿಷಿ ಬಳಿ ಹೇಳಿದಳು. ನಂತರ ರಿಷಿ ಮತ್ತು ಗೌತಮ್ ಜೊತೆ ವಸೂಧರಾ ಕುಳಿತು ರಂಗೋಲಿ ಬಗ್ಗೆ ಮಾತನಾಡಿದಳು. ರಂಗೋಲಿ ಹಾಕಲು ಹಸು ಸಗಣಿ ಬೇಕು, ನಿಮ್ಮಬ್ಬರಲ್ಲಿ ಯಾರು ಹಸು ಸಗಣಿ ಬೇಗ ತರ್ತೀರಾ ಅವರಿಗೆ ದೊಡ್ಡ ಬಹುಮಾನ ಕೊಡುವುದಾಗಿ ಹೇಳಿದಳು. ವಸೂಧರಾ ಮಾತು ಕೇಳಿ ಗೌತಮ್ ತಾನೇ ಮೊದಲು ತರೋದು ಎಂದು ಓಡಿದ. ಗೌತಮ್ ಎಲ್ಲಿ ಬೇಗ ತಂದು ಕೊಡುತ್ತಾನೋ ಎಂದು ರಿಷಿ ಕೂಡ ಸೈಕಲ್ ಹತ್ತಿ ಹೊರಟ.
ಇತ್ತ ಜಗತಿ ಮನೆಗೆ ಬಂದಿದ್ದನ್ನು ಸಹಿಸದ ದೇವಯಾನಿ ದೊಡ್ಡ ರಂಪ ಮಾಡಿದಳು. ಇದರಿಂದ ಆಕೆಯ ಪತಿಗೆ ಕೋಪ ಬಂತು. ಒಟ್ಟಿನಲ್ಲಿ ಮನೆಯ ವಾತಾವರಣ ಬದಲಾಗಿದೆ. ದೇವಯಾನಿ ಅಸಮಾಧಾನದಿಂದ ಕುದಿಯುತ್ತಿದ್ದಾಳೆ. ಜಗತಿಯನ್ನು ಮನೆಯಿಂದ ಓಡಿಸುವವರೆಗೂ ಆಕೆಗೆ ಸಮಾಧಾನವಿಲ್ಲ. ದೇವಯಾನಿ ಜಗತಿಯನ್ನು ಮತ್ತೆ ಮನೆಯಿಂದ ಹೊರಹಾಕುತ್ತಾಳಾ? ಕಾದು ನೋಡಬೇಕು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.