ಸಿಂಗರ್ ಹನುಮಂತ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದಾರೆ. ಅವರ ಆಟವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ ಟ್ರೋಫಿ ಹನುಮಂತ ಅವರ ಕೈಯಲ್ಲೇ ಇದೆ ಎಂಬ ರೀತಿಯಲ್ಲಿ ಕೆಲವರಿಗೆ ಕಾಣುತ್ತಿದೆ. ಅಷ್ಟರಮಟ್ಟಿಗೆ ಅನೇಕರು ಹನುಮಂತನ ಮೇಲೆ ಭರವಸೆ ಇಟ್ಟಿದ್ದಾರೆ. ಕಳೆದ ವಾರ ಹನುಮಂತ ಅವರು ತುಂಬ ಚೆನ್ನಾಗಿ ಆಡಿದರು. ಹಾಗಾಗಿ ಅವರಿಗೆ ಫಿನಾಲೆ ಟಿಕೆಟ್ ಸಿಕ್ಕಿತು. ಇನ್ನೇನು ಟ್ರೋಫಿ ಗೆಲ್ಲುವುದು ಮಾತ್ರ ಬಾಕಿ. ಒಂದು ವೇಳೆ ಟ್ರೋಫಿ ಗೆದ್ದರೆ ಹನುಮಂತನ ಮುಂದಿನ ನಡೆ ಏನಾಗಿರಲಿದೆ ಎಂಬುದನ್ನು ಅವರು ಹೇಳಿದ್ದಾರೆ.
ಧನರಾಜ್ ಆಚಾರ್ ಮತ್ತು ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಒಟ್ಟಿಗೆ ಕುಳಿತು ಮಾತನಾಡುತ್ತಾರೆ. ಈ ವಾರ ಹನುಮಂತ ಅವರು ಧನರಾಜ್ ಜೊತೆ ಒಂದು ವಿಷಯವನ್ನು ಚರ್ಚೆ ಮಾಡಿದ್ದಾರೆ. ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ತಾವು ಆಟ ಆಡಿರುವುದರ ಬಗ್ಗೆ ತಮಗೆ ನೆಮ್ಮದಿ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಮುಂದಿನ ಪ್ಲ್ಯಾನ್ ಬಗ್ಗೆಯೂ ಮಾತನಾಡಿದ್ದಾರೆ.
‘ಇಷ್ಟು ದಿನ ಚೆನ್ನಾಗಿ ಆಡಿದ್ದೇನೆ. ಒಂದು ವೇಳೆ ಔಟ್ ಆದರೂ ಖುಷಿಯಿಂದ ಹೊರಗೆ ಹೋಗುತ್ತೇನೆ. ಗೆದ್ದರೆ ನಮ್ಮ ಅತ್ತೆ ಮನೆಯ ಮುಂದೆ ಹೋಗಿ ನಿಲ್ಲುತ್ತೇನೆ. ಹುಡುಗಿ ಯಾಕೆ ಕೊಡಲ್ಲ ಅಂತ ಕೇಳುತ್ತೇನೆ’ ಎಂದು ಹನುಮಂತ ಪ್ಲ್ಯಾನ್ ತಿಳಿಸಿದ್ದಾರೆ. ಅವರ ಆಸೆ ಈಡೇರುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಎಲ್ಲರಿಗೂ ಇದೆ. ಕೆಲವು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ಹನುಮಂತ ಅವರ ತಂದೆ-ತಾಯಿ ಬಂದಿದ್ದರು. ಆಗ ತಮ್ಮ ಸೊಸೆ ಹೇಗೆ ಇರಬೇಕು ಎಂದು ಹನುಮಂತ ಅವರ ತಾಯಿ ಹೇಳಿದ್ದರು.
ಇದನ್ನೂ ಓದಿ: ಹನುಮಂತನ ಕೈಯಲ್ಲೇ ಇದೆಯಾ ‘ಬಿಗ್ ಬಾಸ್ ಕನ್ನಡ 11’ ಟ್ರೋಫಿ?
ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚೇನೂ ಕಿರಿಕ್ ಮಾಡಿಕೊಂಡಿಲ್ಲ. ಅವರನ್ನು ಯಾರೂ ಕೂಡ ದ್ವೇಷಿಸುತ್ತಿಲ್ಲ. ಹನುಮಂತ ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ಅಚ್ಚರಿ ಮೂಡಿಸುತ್ತವೆ. ಎಂದಿಗೂ ಅವರು ಪಕ್ಷಪಾತ ಮಾಡಿಲ್ಲ. ಕಿಚ್ಚ ಸುದೀಪ್ ಅವರಿಂದಲೂ ಹನುಮಂತ ಶಹಭಾಷ್ ಎನಿಸಿಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಅವರಿಗೆ ವೀಕ್ಷಕರಿಂದ ಹೆಚ್ಚಿನ ವೋಟ್ ಬರುವ ನಿರೀಕ್ಷೆ ಇದೆ. ಫಿನಾಲೆ ವಾರದ ರೋಚಕತೆ ಜಾಸ್ತಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.