ನನ್ನ ಬದಲು ಬಿಗ್ಬಾಸ್ ನಿರೂಪಣೆಗೆ 2-3 ಹೆಸರು ಕೇಳಿಬರುತ್ತಿದೆ: ಸುದೀಪ್
ಬಿಗ್ಬಾಸ್ ಕನ್ನಡ ಸೀಸನ್ 11 ಕಿಚ್ಚ ಸುದೀಪ್ ಪಾಲಿಗೆ ಕೊನೆಯ ಸೀಸನ್, ಬಿಗ್ಬಾಸ್ ಆರಂಭ ಆದಾಗಿನಿಂದಲೂ ಈ ಶೋ ನಡೆಸಿಕೊಂಡು ಬರುತ್ತಿರುವ ಸುದೀಪ್, ಈ ವರ್ಷ ಕೊನೆ ಮಾಡುತ್ತಿದ್ದಾರೆ. ಆದರೆ ಇಂದಿನ ಶೋನಲ್ಲಿ ತಮ್ಮ ನಂತರ ಯಾರು ಬಿಗ್ಬಾಸ್ ನಿರೂಪಣೆ ಮಾಡಲಿದ್ದಾರೆ ಎಂದು ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಮಾತನಾಡಿದರು.
ಕನ್ನಡ ಬಿಗ್ಬಾಸ್ ಪ್ರಾರಂಭವಾಗಿ ಒಂದು ದಶಕಕ್ಕೂ ಹೆಚ್ಚು ಸಮಯ ಆಗಿದೆ. ಈಗ 11ನೇ ಸೀಸನ್ ನಡೆಯುತ್ತಿದೆ. ಒಂದು ಒಟಿಟಿ ಸೀಸನ್ ಸಹ ನಡೆದಿದೆ. ಎಲ್ಲ ಶೋಗಳನ್ನೂ ನಡೆಸಿಕೊಟ್ಟಿರುವುದು ಸುದೀಪ್ ಅವರೆ. ಕನ್ನಡದಲ್ಲಿ ಬಿಗ್ಬಾಸ್ ಎಂದರೆ ಅದು ಸುದೀಪ್ ಎಂಬಂತೆ ಆಗಿದೆ. ಸುದೀಪ್ ಇಲ್ಲದ ಬಿಗ್ಬಾಸ್ ಅನ್ನು ಊಹಿಸಿಕೊಳ್ಳಲು ಸಹ ಕನ್ನಡಿಗರಿಗೆ ಸಾಧ್ಯವಿಲ್ಲದಂಥಹಾ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಈಗ ಸುದೀಪ್ ನಿರೂಪಣೆ ಅಂತ್ಯ ಮಾಡುತ್ತಿದ್ದಾರೆ. ‘ಇದು ನನ್ನ ಕೊನೆಯ ಸೀಸನ್’ ಎಂದು ಸುದೀಪ್ ಘೋಷಣೆ ಮಾಡಿದ್ದಾರೆ. ಆದರೆ ಇಂದು ತಮ್ಮ ನಂತರ ಯಾರು ಎಂಬ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಬಿಗ್ಬಾಸ್ ವೇದಿಕೆಯಲ್ಲಿ ಮಾತನಾಡಿದರು.
ತಾಯಿ ಅಗಲಿದ ಬಳಿಕ ಒಂದು ವಾರದ ಬ್ರೇಕ್ ತೆಗೆದುಕೊಂಡು ಬಿಗ್ಬಾಸ್ ವೇದಿಕೆಗೆ ಮರಳಿದ ಸುದೀಪ್, ಶನಿವಾರದ ಎಪಿಸೋಡ್ನಲ್ಲಿ ಮತ್ತೆ ಹಳೆಯ ರೀತಿಯಲ್ಲಿಯೇ ಖಡಕ್ ಆಗಿಯೇ ಸ್ಪರ್ಧಿಗಳಿಗೆ ಅವರ ತಪ್ಪು-ಸರಿಯನ್ನು ಎತ್ತಿ ತೋರಿಸಿದರು. ಅವಶ್ಯಕತೆ ಇದ್ದಲ್ಲಿ ಧ್ವನಿ ಏರಿಸಿ, ಇಲ್ಲದಲ್ಲಿ ತಗ್ಗಿಸಿ ಮಾತನಾಡಿದರು. ಸನ್ನಿವೇಶವೊಂದನ್ನು ವಿಶ್ಲೇಷಣೆ ಮಾಡುವಾಗ ತಮ್ಮನ್ನೇ ಉದಾಹರಣೆಯಾಗಿ ತೆಗೆದುಕೊಂಡರು ಸುದೀಪ್. ಆಗ ಸುದೀಪ್ ಆಡಿದ ಮಾತು ಎಲ್ಲರ ಚಪ್ಪಾಳೆಗೆ ಕಾರಣವಾಯ್ತು.
ಮನೆಯಲ್ಲಿರುವ ತ್ರಿವಿಕ್ರಮ್, ಮೋಕ್ಷಿತಾ ಹಾಗೂ ಇನ್ನೂ ಕೆಲವರು ಎಷ್ಟು ವಾರ ಮನೆಯಲ್ಲಿರುತ್ತಾರೆ ಎಂದು ಕಮೆಂಟ್ ಮಾಡಿದ್ದರಂತೆ. ಹೊರಗೆ ಇದ್ದಾಗ ಈ ಸೀಸನ್ಗೆ ಮನೆಗೆ ಬರುವ ಎಲ್ಲರ ಪ್ರೊಫೈಲ್ ನೋಡಿ ಸ್ಟಡಿ ಮಾಡಿ ಒಳಗೆ ಬಂದಿರುವುದಾಗಿ ಹೇಳಿಕೊಂಡಿದ್ದರು. ಕಳೆದ ವಾರ ಮೋಕ್ಷಿತಾರನ್ನು ನಾಮಿನೇಟ್ ಮಾಡಿದ್ದು ಮಾತ್ರವಲ್ಲದೆ, ಮನೆಯವರಲ್ಲಿ ಅವರ ವಿರುದ್ಧ ಅಭಿಪ್ರಾಯ ಹುಟ್ಟುಹಾಕಿದ್ದರು. ಇದರಿಂದಾಗಿ ಬಹುತೇಕ ಸೈಲೆಂಟ್ ಆಗಿದ್ದ ಮೋಕ್ಷಿತಾ ತ್ರಿವಿಕ್ರಮ್ ವಿರುದ್ಧ ಸಿಡಿದೆದಿದ್ದರು.
ಇದನ್ನೂ ಓದಿ:ಬಿಗ್ಬಾಸ್ ವೇದಿಕೆಯಲ್ಲಿ ಮತ್ತೆ ಹಳೆ ಖದರ್ ತೋರಿಸಿದ ಸುದೀಪ್
ಈ ಬಗ್ಗೆ ವಿಚಾರಣೆ ಮಾಡಿದ ಸುದೀಪ್, ಮೋಕ್ಷಿತಾ ಕುರಿತು, ನಿಮ್ಮ ಬಗ್ಗೆ ಅವರು ಏನೋ ಅಭಿಪ್ರಾಯ ಇಟ್ಟುಕೊಂಡಿದ್ದಾರೆ ಎಂದು ನೀವೇಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀರ? ತ್ರಿವಿಕ್ರಮ್ ನಿಮ್ಮ ಗೆಳೆಯರಾ? ನಿಮ್ಮ ಕುಟುಂಬದವರಾ? ಹಾಗಿದ್ದರೆ ಅವರು ಏನೋ ಮಾತನಾಡಿದ್ದಾರೆ ಅಂದರೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರ? ನಾನು ಈ ಬಿಗ್ಬಾಸ್ ಸಾಕು, ವರ್ಷಗಳಿಂದಲೂ ಮಾಡಿಕೊಂಡು ಬಂದಿದ್ದೇನೆ, ಈಗ ನಾನು ಬಿಡುತ್ತೇನೆ ಎಂದಿದ್ದೇನೆ. ಅದರ ಬೆನ್ನಲ್ಲೆ ಬಿಗ್ಬಾಸ್ ಯಾರು ನಡೆಸಬಹುದು ಎಂದು ಎರಡು-ಮೂರು ಹೆಸರುಗಳು ಓಡಾಡುತ್ತಿವೆ. ಅದನ್ನು ನೋಡುತ್ತಾ ಯೋಚನೆ ಮಾಡಿಕೊಂಡು ಕೂರಲಾ ಅಥವಾ ಈ ವೇದಿಕೆಗೆ ನನ್ನಿಂದ ಎಷ್ಟು ತೂಕ ಅಂತ ಕಾನ್ಫಿಡೆಂಟ್ ಆಗಿ ಇರಲಾ? ಎಂದು ಪ್ರಶ್ನೆ ಮಾಡಿದರು ಸುದೀಪ್.
ಬಿಗ್ಬಾಸ್ ಮನೆಯಲ್ಲಿ ನಿಮ್ಮ ಶಕ್ತಿ, ನಿಮ್ಮ ಯುಕ್ತಿ, ನಿಮ್ಮ ಹೋರಾಟ ನಿಮ್ಮದು. ಬೇರೆಯವರ ಅಭಿಪ್ರಾಯ, ಬೇರೆಯವರ ತಂತ್ರ-ಕುತಂತ್ರಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮ ಆಟವನ್ನು ನೀವು ಆಡುತ್ತಾ ಸಾಗಿ ಸಾಕು ಗೆಲುವು ನಿಮ್ಮದಾಗುತ್ತದೆ. ಒಳ್ಳೆಯ ಗೆಳೆಯರಿದ್ದರೆ ಜೀವನದಲ್ಲಿ ಗೆಲ್ಲಬಹುದು ಇತಿಹಾಸದಲ್ಲಿ ಹೆಸರು ಉಳಿಯಬೇಕೆಂದರೆ ಒಳ್ಳೆಯ ಶತ್ರು ಇರುವುದು ಸಹ ಮುಖ್ಯವಾಗುತ್ತದೆ ಎಂದರು ಸುದೀಪ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:08 pm, Sat, 2 November 24