ಮನದಲ್ಲಿ ಬೆಟ್ಟದಷ್ಟು ನೋವು ಇದ್ದರೂ ನಗುತ್ತಾ ಬಿಗ್ ಬಾಸ್ ಶೋ ನಡೆಸಿಕೊಟ್ಟ ಸುದೀಪ್
ನಟ ಕಿಚ್ಚ ಸುದೀಪ್ ಅವರು ತಾಯಿಯನ್ನು ಕಳೆದುಕೊಂಡು ಕೆಲವೇ ದಿನಗಳು ಆಗಿವೆ. ಒಂದು ವಾರ ಅವರು ಶೋ ನಡೆಸಿಕೊಡಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ವಾರಕ್ಕೆ ಅವರು ತಾಯಿಯ ಅಗಲಿಕೆಯ ನೋವನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಬಿಗ್ ಬಾಸ್ನ ವೇದಿಕೆಗೆ ಬಂದಿದ್ದಾರೆ. ಎದೆಯಲ್ಲಿ ನೋವು ಇದ್ದರೂ ಕೂಡ ಎಲ್ಲರನ್ನೂ ನಗಿಸುತ್ತಾ ಅವರು ಶೋ ನಿರೂಪಣೆ ಮಾಡಿದ್ದಾರೆ.
ಸತತ 11ನೇ ಸೀಸನ್ನಲ್ಲಿ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಅನಾರೋಗ್ಯದಿಂದ ಅಕ್ಟೋಬರ್ 20ರಂದು ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ನಿಧನರಾಗಿದ್ದು ನೋವಿನ ಸಂಗತಿ. ಆ ಘಟನೆ ಬಳಿಕ ಸುದೀಪ್ ಅವರು ಬ್ರೇಕ್ ತೆಗೆದುಕೊಂಡರು. ಹಾಗಾಗಿ ಅ.26 ಮತ್ತು ಅ.27ರ ಸಂಚಿಕೆಯನ್ನು ನಡೆಸಿಕೊಡಲು ಅವರಿಗೆ ಸಾಧ್ಯವಾಗಿರಲಿಲ್ಲ. ಆದರೆ ಈ ವಾರ (ನವೆಂಬರ್ 2 ಮತ್ತು 3) ವೀಕೆಂಡ್ ಸಂಚಿಕೆಗೆ ಅವರು ನಿರೂಪಣೆ ಮಾಡಿದ್ದಾರೆ. ನಗುನಗುತ್ತಲೇ ಅವರು ಭಾನುವಾರದ (ನ.3) ಎಪಿಸೋಡ್ ನಡೆಸಿಕೊಟ್ಟಿದ್ದಾರೆ.
ಶನಿವಾರದ ಸಂಚಿಕೆ ಸ್ವಲ್ಪ ಎಮೋಷನಲ್ ಆಗಿತ್ತು. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಅವರ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಹಾಡಿನ ಮೂಲಕ ವಾಸುಕಿ ವೈಭವ್ ಅವರು ಸರೋಜಾ ಸಂಜೀವ್ ಅವರಿಗೆ ನಮನ ಸಲ್ಲಿಸಿದರು. ಆ ಕ್ಷಣದಲ್ಲಿ ಸುದೀಪ್ ಭಾವುಕರಾದರು. ದೊಡ್ಮನೆಯೊಳಗೆ ಇರುವ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದರು. ಆದರೆ ಭಾನುವಾರ ವಾತಾವರಣ ಬದಲಾಯಿತು.
ತಾಯಿಯನ್ನು ಕಳೆದುಕೊಂಡ ನೋವು ಸುದೀಪ್ ಅವರ ಮನದಲ್ಲಿ ಇದೆ. ಆ ನೋವನ್ನು ಮರೆಯುಲು ಸಾಧ್ಯವಿಲ್ಲ. ಹಾಗಂತ ತಮ್ಮ ಕೆಲಸದ ಮೇಲೆ ಆ ನೋವಿನಿಂದ ಪರಿಣಾಮ ಬೀರುವುದು ಸುದೀಪ್ ಅವರಿಗೂ ಇಷ್ಟವಿಲ್ಲ. ಎದೆಯೊಳಗೆ ಬೆಟ್ಟದಷ್ಟು ನೋವು ಇದ್ದರೂ ಕೂಡ ಅವರು ಭಾನುವಾರದ ಎಪಿಸೋಡ್ ಅನ್ನು ನಗುವಿನ ಮೂಲಕ ತುಂಬಿದ್ದಾರೆ. ಇಂದಿನ ಸಂಚಿಕೆಯಲ್ಲಿ ನಗೋಣ, ನಗಿಸೋಣ ಎನ್ನುತ್ತಲೇ ಅವರು ಎಪಿಸೋಡ್ ಆರಂಭಿಸಿದರು.
ಇದನ್ನೂ ಓದಿ: ಕಿಚ್ಚ ಸುದೀಪ್ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ ಪತ್ರ ಬರೆದ ನರೇಂದ್ರ ಮೋದಿ
ದೊಡ್ಮನೆಯೊಳಗೆ ಎಲ್ಲರಿಗೂ ನಗು ಮೂಡಿಸುವ ರೀತಿಯ ಕೆಲಸ ಟಾಸ್ಕ್ಗಳನ್ನು ಸುದೀಪ್ ಅವರು ನೀಡಿದರು. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಟೆನ್ಷನ್ ಇದ್ದರೂ ಕೂಡ ಅದನ್ನು ಮರೆಯುವ ರೀತಿಯಲ್ಲಿ ನಗು ತುಂಬಿಸಿದರು ಸುದೀಪ್. ಧನರಾಜ್, ಹನುಮಂತ, ಉಗ್ರಂ ಮಂಜು ಮುಂತಾದವರಿಂದ ಕಾಮಿಡಿ ಮಾಡಿಸಿದರು. ಹನುಮಂತ ಮತ್ತು ಚೈತ್ರಾ ಕುಂದಾಪುರ ಅವರಿಂದಲೂ ಸುದೀಪ್ ಡ್ಯಾನ್ಸ್ ಮಾಡಿಸಿದರು. ಒಟ್ಟಾರೆ ಸಂಚಿಕೆ ಸಿಕ್ಕಾಪಟ್ಟೆ ಫನ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.