ಈ ವರ್ಷ ಅತಿ ಹೆಚ್ಚು ಸೆನ್ಸೇಷನ್ ಸೃಷ್ಟಿ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಿನಿಮಾ ಎಂದರೆ ತಪ್ಪಾಗಲ್ಲ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಚಿತ್ರದಲ್ಲಿ ಅನೇಕ ವಿಚಾರಗಳನ್ನು ಚರ್ಚೆ ಮಾಡಲಾಗಿದೆ. ಹಿಂದಿಯಲ್ಲಿ ತಯಾರಾದ ಈ ಸಿನಿಮಾ ನಂತರ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಿತ್ತು. ಈಗ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರಕ್ಕೆ ಸಕಲ ಸಿದ್ಧತೆ ನಡೆದಿದೆ. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ (Independence Day) ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರಸಾರ ಆಗಲಿದೆ. ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರಿಗೆ ಈಗ ಕಿರುತೆರೆಯಲ್ಲಿ ವೀಕ್ಷಿಸಲು ಅವಕಾಶ ಸಿಗುತ್ತಿದೆ.
ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತಯಾರಾಗಿದೆ. ಅನುಪಮ್ ಖೇರ್, ದರ್ಶನ್ ಕಮಾರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ಪ್ರಕಾಶ್ ಬೆಳವಾಡಿ, ಪುನೀತ್ ಇಸಾರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ನಿರ್ಮಾಣವಾದ ಈ ಸಿನಿಮಾವನ್ನು ಅನೇಕ ರಾಜಕಾರಣಿಗಳು ನೋಡಿ ಮೆಚ್ಚಿಕೊಂಡಿದ್ದರು. ನರೇಂದ್ರ ಮೋದಿ, ಬಸವರಾಜ ಬೊಮ್ಮಾಯಿ ಮುಂತಾದವರು ಮೆಚ್ಚುಗೆ ಮಾತುಗಳನ್ನು ಆಡಿದ್ದರು.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ತಯಾರಾಗಿದ್ದು 15ರಿಂದ 20 ಕೋಟಿ ರೂಪಾಯಿ ಬಜೆಟ್ನಲ್ಲಿ. ಆದರೆ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 252 ಕೋಟಿ ರೂಪಾಯಿ ಎಂಬುದು ಅಚ್ಚರಿಯ ಸಂಗತಿ. ಈ ಬೆಳವಣಿಗೆಯನ್ನು ಕಂಡು ಎಲ್ಲರೂ ಬೆರಗಾದರು. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಈ ರೀತಿಯ ಮ್ಯಾಜಿಕ್ ಮಾಡಿರಲಿಲ್ಲ.
ಈ ಸಿನಿಮಾ ಕೋಮುದ್ವೇಷವನ್ನು ಬಿತ್ತುತ್ತದೆ ಎಂಬ ಆರೋಪ ಕೂಡ ಹಲವರಿಂದ ಕೇಳಿಬಂತು. ಆ ಕಾರಣದಿಂದಲೂ ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿತ್ತು. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡಿದ ಅನೇಕರು ಎಮೋಷನಲ್ ಆಗಿದ್ದುಂಟು. ಪ್ರೇಕ್ಷಕರು ಕಣ್ಣೀರು ಹಾಕುತ್ತ ಥಿಯೇಟರ್ನಿಂದ ಹೊರಬರುತ್ತಿರುವ ಅನೇಕ ವಿಡಿಯೋಗಳು ವೈರಲ್ ಆಗಿದ್ದವು. ಒಟ್ಟಿನಲ್ಲಿ ಭಾರಿ ಸೆನ್ಸೇಷನ್ ಸೃಷ್ಟಿಸುವಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಯಶಸ್ವಿ ಆಯಿತು. ಈ ಸಿನಿಮಾದ ಯಶಸ್ಸಿನ ನಂತರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಬೇಡಿಕೆ ಹೆಚ್ಚಿತು. ಹಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರದ ಗೆಲುವನ್ನು ಶ್ಲಾಘಿಸಿದ್ದಾರೆ.
Published On - 10:24 am, Thu, 4 August 22