‘ಅಪ್ಪನನ್ನು ಕಳೆದುಕೊಂಡ ದಿನಾಂಕದಲ್ಲೇ ಮಗನನ್ನು ಪಡೆದುಕೊಂಡೆ’; ವೇದಿಕೆಯಲ್ಲಿ ಗಣೇಶ್ ಭಾವುಕ ನುಡಿ
Gaalipata 2 | Golden Star Ganesh: ಭರ್ಜರಿಯಾಗಿ ವೇದಿಕೆಗೆ ಎಂಟ್ರಿ ನೀಡಿದ ಪುತ್ರ ವಿಹಾನ್ ಕಂಡು ‘ಗೋಲ್ಡನ್ ಸ್ಟಾರ್’ ಗಣೇಶ್ ಖುಷಿಪಟ್ಟಿದ್ದಾರೆ. ಮಗನ ಬಗ್ಗೆ ಅವರು ವೇದಿಕೆಯಲ್ಲಿ ಮನಸಾರೆ ಮಾತನಾಡಿದ್ದಾರೆ.
ನಟ ‘ಗೋಲ್ಡನ್ ಸ್ಟಾರ್’ ಗಣೇಶ್ (Golden Star Ganesh) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಬಳಿಕ ಅವರು ಕುಟುಂಬಕ್ಕೆ ಹೆಚ್ಚು ಸಮಯ ನೀಡುತ್ತಾರೆ. ಪತ್ನಿ ಶಿಲ್ಪಾ ಮತ್ತು ಮಕ್ಕಳಾದ ವಿಹಾನ್ ಹಾಗೂ ಚಾರಿತ್ರ್ಯ ಜೊತೆ ಗಣೇಶ್ ಕಾಲ ಕಳೆಯುತ್ತಾರೆ. ಸೋಶಿಯಲ್ ಮೀಡಿಯಾಲ್ಲಿ ಅವರ ಕುಟುಂಬದ ಅನೇಕ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತವೆ. ಶಿಲ್ಪಾ ಗಣೇಶ್ ಕೂಡ ಮಕ್ಕಳ ಹಲವು ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಈಗಾಗಲೇ ವಿಹಾನ್ (Ganesh Son Vihaan) ಚಿತ್ರರಂಗಕ್ಕೆ ಬಾಲ ನಟನಾಗಿ ಕಾಲಿಟ್ಟಿದ್ದಾನೆ. ಈಗ ‘ಗಾಳಿಪಟ 2’ (Gaalipata 2) ಚಿತ್ರದ ಬಿಡುಗಡೆಯ ಹೊಸ್ತಿಲಿನಲ್ಲಿ ‘ಜೀ ಕನ್ನಡ’ ವಾಹಿನಿಯ ವಿಶೇಷ ಕಾರ್ಯಕ್ರಮದ ವೇದಿಕೆಗೆ ಆತ ಭರ್ಜರಿಯಾಗಿ ಎಂಟ್ರಿ ನೀಡಿದ್ದಾನೆ. ಅವನ ಬಗ್ಗೆ ಗಣೇಶ್ ಅವರು ಮನಸಾರೆ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ತಂದೆಯನ್ನು ನೆನೆದು ಭಾವುಕರಾಗಿದ್ದಾರೆ ‘ಗೋಲ್ಡನ್ ಸ್ಟಾರ್’.
ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ‘ಗಾಳಿಪಟ 2’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ. ಭರ್ಜರಿಯಾಗಿಯೇ ಚಿತ್ರತಂಡ ಪ್ರಚಾರ ಮಾಡುತ್ತಿದೆ. ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಜೀ ಕನ್ನಡ ವಾಹಿನಿಯು ‘ಗಾಳಿಪಟ 2’ ತಂಡದ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಅದರಲ್ಲಿ ವಿಹಾನ್ ಕೂಡ ಭಾಗಿ ಆಗಿದ್ದಾನೆ.
ಈ ಸ್ಪೆಷಲ್ ಕಾರ್ಯಕ್ರಮದ ಪ್ರೋಮೋ ಗಮನ ಸೆಳೆಯುತ್ತಿದೆ. ಭರ್ಜರಿಯಾಗಿ ವೇದಿಕೆಗೆ ಎಂಟ್ರಿ ನೀಡಿದ ಮಗನನ್ನು ಕಂಡು ಗಣೇಶ್ ಖುಷಿಪಟ್ಟಿದ್ದಾರೆ. ಪುತ್ರನ ಬಗ್ಗೆ ಅವರು ವೇದಿಕೆಯಲ್ಲಿ ಮನಸಾರೆ ಮಾತನಾಡಿದ್ದಾರೆ. ‘ಆಗಸ್ಟ್ 27ರಂದು ಅಪ್ಪನನ್ನು ಕಳೆದುಕೊಂಡೆ. ಇವನು ಹುಟ್ಟಿದ ಡೇಟ್ ಕೂಡ ಆಗಸ್ಟ್ 27. ಇವನು ನನಗೆ ಅಪ್ಪನ ಥರ. ಇವನನ್ನು ನೋಡಿದಾಗಲೆಲ್ಲ ಅಪ್ಪನ ನೆನಪಾಗುತ್ತದೆ. ಇವನೆಂದರೆ ಒಂಥರಾ ಎಮೋಷನ್’ ಎಂದು ಗಣೇಶ್ ಹೇಳಿದ್ದಾರೆ.
ಈ ಕಾರ್ಯಕ್ರಮವನ್ನು ನಿರೂಪಕಿ ಅನುಶ್ರೀ ನಡೆಸಿಕೊಟ್ಟಿದ್ದಾರೆ. ‘ಮನೆಯಲ್ಲಿ ಅಮ್ಮ ಹೀರೋನಾ ಅಥವಾ ಅಪ್ಪ ಹೀರೋನಾ’ ಎಂದು ಅವರು ಕೇಳಿದ ಪ್ರಶ್ನೆಗೆ ‘ಅಪ್ಪನೇ ಹೀರೋ’ ಎಂದು ವಿಹಾನ್ ಉತ್ತರಿಸಿದ್ದಾನೆ. ‘ಮನೆಗೆ ಹೋಗು ಮಗನೆ.. ಇಬ್ಬರಿಗೂ ಮನೆಯಲ್ಲಿ ಕಾದಿದೆ ಹೋಗು’ ಎಂದು ಯೋಗರಾಜ್ ಭಟ್ ನಗೆ ಚಟಾಕಿ ಹಾರಿಸಿದ್ದಾರೆ. ಈ ಮಸ್ತಿಯ ಕ್ಷಣಗಳು ಕೂಡ ಪ್ರೋಮೋದಲ್ಲಿ ಹೈಲೈಟ್ ಆಗಿವೆ.
ಪೂರ್ತಿ ಎಪಿಸೋಡ್ ನೋಡಲು ವೀಕ್ಷರು ಕಾದಿದ್ದಾರೆ. ಶುಕ್ರವಾರ (ಆಗಸ್ಟ್ 5) ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ನಟಿ ವೈಭವಿ ಶಾಂಡಿಲ್ಯ, ಜಯಂತ ಕಾಯ್ಕಿಣಿ ಮುಂತಾದವರು ಕೂಡ ಈ ಶೋನಲ್ಲಿ ಭಾಗಿ ಆಗಿದ್ದಾರೆ. ‘ಗಾಳಿಪಟ 2’ ಚಿತ್ರಕ್ಕೆ ರಮೇಶ್ ರೆಡ್ಡಿ ಬಂಡವಾಳ ಹೂಡಿದ್ದಾರೆ. ಆಗಸ್ಟ್ 12ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
Published On - 12:07 pm, Wed, 3 August 22