ಬಿಗ್ಬಾಸ್ (BiggBoss) ಕನ್ನಡ ಸೀಸನ್ 10ರ ಫಿನಾಲೆಯ ಮೊದಲ ಎಲಿಮಿನೇಷನ್ ನಡೆದಿದೆ. ಮನೆಯಲ್ಲಿ ಉಳಿದಿದ್ದ ಆರು ಮಂದಿಯಲ್ಲಿ ಫಿನಾಲೆ ದಿನಕ್ಕೆ ಮುನ್ನ ತುಕಾಲಿ ಸಂತು ಎಲಿಮಿನೇಟ್ ಆಗಿದ್ದಾರೆ. ಎಲ್ಲರನ್ನೂ ನಗಿಸುತ್ತಾ, ಚಾಣಾಕ್ಷ ಆಟವಾಡುತ್ತಾ ಫಿನಾಲೆ ವರೆಗೂ ಬಂದಿದ್ದ ತುಕಾಲಿ ಸಂತು, ಹೊರಡುವಾಗಲೂ ನಗುತ್ತಲೇ ಹೊರಬಂದಿದ್ದಾರೆ. ಸಂತು-ಪಂತು ಒಟ್ಟಿಗೆ ಮನೆಯಿಂದ ಹೊರಗೆ ಬರುತ್ತಾರೆ ಎಂದು ಹಲವರು ಅಂದುಕೊಂಡಿದ್ದರು, ಆದರೆ ಆಪ್ತ ಗೆಳೆಯ ವರ್ತೂರು ಸಂತುವನ್ನು ಅಲ್ಲಿಯೇ ಉಳಿಸಿ, ತುಕಾಲಿ ಮಾತ್ರವೇ ಹೊರಗೆ ಬಂದಿದ್ದಾರೆ.
ಫಿನಾಲೆಯ ಆರಂಭದಿಂದಲೂ ಸುದೀಪ್ ಅವರು ಎವಿಕ್ಷನ್ ಬಗ್ಗೆ ಮಾತನ್ನೇ ಆಡಿರಲಿಲ್ಲ. ಫಿನಾಲೆಯ ಮೊದಲ ದಿನವನ್ನು ನಗು-ನಗುತ್ತಲೇ ನಡೆಸಿಕೊಡುತ್ತಿದ್ದರು. ಆದರೆ ಅಂತಿಮವಾಗಿ ಎಲಿಮಿನೇಷನ್ ಸಮಯ ಬಂದಾಗ ತುಕಾಲಿ ಸಂತು ಸೇರಿದಂತೆ ಮನೆಯಲ್ಲಿರುವವ ಆರು ಸದಸ್ಯರು ಈ ವಾರ ಗಳಿಸಿರುವ ಮತಗಳನ್ನು ತೋರಿಸಲಾಯಿತು. ಸುದೀಪ್ ಅವರು ಹೇಳಿದಂತೆ ಮೊದಲ ಐದು ಸದಸ್ಯರು ಗಳಿಸಿರುವ ಮತಗಳ ಸಂಖ್ಯೆ ಒಂದು ಕೋಟಿಗೂ ಹೆಚ್ಚಿತ್ತು. ಅದರಲ್ಲಿ ತುಕಾಲಿ ಸಂತು ಗಳಿಸಿರುವ ಮತಗಳ ಸಂಖ್ಯೆ ಮಾತ್ರ ತುಸು ಕಡಿಮೆ ಇದ್ದಿದ್ದರಿಂದ ಅವರನ್ನು ಎವಿಕ್ಟ್ ಮಾಡಲಾಯ್ತು.
ಕಳೆದ ಬಾರಿ ಎಲಿಮಿನೇಷನ್ ಹಂತಕ್ಕೆ ತಲುಪಿದ್ದಾಗ ಅತ್ತು ಕಣ್ಣೀರು ಸುರಿಸಿದ್ದ ತುಕಾಲಿ ಸಂತು, ಈ ಬಾರಿ ಮಾತ್ರ ಖುಷಿಯಿಂದಲೇ ಹೊರಗೆ ಬಂದರು. ಹೊರಗೆ ಬರುವ ಮುಂಚೆ ‘ಹುಟ್ಟಿದ ಊರನ್ನು ಬಿಟ್ಟು ಬಂದಾ ಮೇಲೆ’ ಎಂದು ಹಾಡು ಹಾಡುತ್ತಾ ಹೊರಗೆ ಬಂದರು. ಪ್ರತಿ ಬಾರಿ ಯಾರೇ ಎಲಿಮಿನೇಷನ್ ಆಗುವಾಗಲೂ ತುಕಾಲಿ ಸಂತುಗೆ ಎಂದು ಘೋಷಣೆ ಕೂಗಲಾಗುತ್ತಿತ್ತು, ಮನೆಯ ಸದಸ್ಯರು ಥೂ ಎನ್ನುತ್ತಿದ್ದರು. ಆದರೆ ಈ ಬಾರಿ ಸಂಗೀತಾ ಸೇರಿದಂತೆ ಎಲ್ಲರೂ ತುಕಾಲಿ ಸಂತುಗೆ ಜೈ ಎನ್ನುತ್ತಾ ಮನೆಯಿಂದ ಹೊರಗೆ ಕಳಿಸಿಕೊಟ್ಟರು.
ಇದನ್ನೂ ಓದಿ:ಬಿಗ್ಬಾಸ್ಗೆ ತುಕಾಲಿ ಸಂತು ಕೊಟ್ಟರು ಒಂದು ಬ್ರಿಲಿಯಂಟ್ ಐಡಿಯಾ
ಹೊರಗೆ ಬಂದು ಸುದೀಪ್ ಅವರನ್ನು ಭೇಟಿಯಾದ ತುಕಾಲಿ ಸಂತು, ‘ನಾನು ಸೋತಿಲ್ಲ, ಗೆದ್ದಿದ್ದೇನೆ. ಇಷ್ಟು ದಿನ ನಾನು ಇಲ್ಲಿವರೆಗೆ ಬಂದಿರುವುದೇ ನನ್ನ ಅತಿ ದೊಡ್ಡ ಗೆಲುವು’ ಎಂದರು. ಬಿಗ್ಬಾಸ್ ಮನೆ ನನಗೆ ಸಾಕಷ್ಟು ಕಲಿಸಿದೆ. ಹಸಿವು, ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು, ಅವಶ್ಯಕತೆ ಬಿದ್ದಾಗ ಮಾತನಾಡುವುದು ಎಲ್ಲವನ್ನು ಕಲಿಸಿದೆ ಎಂದರು. ನನ್ನ ಪತ್ನಿಯನ್ನು ಸರಿಯಾಗಿ ನೋಡಿಕೊಂಡಿರಲಿಲ್ಲ. ಇನ್ನು ಮೇಲಿನಿಂದ ಆ ತಪ್ಪು ಮಾಡುವುದಿಲ್ಲ. ಅವಳಿಗೆ ಒಳ್ಳೆಯ ಬಟ್ಟೆ, ಊಟ ಕೊಡಿಸುತ್ತೀನಿ ಎಂದರು. ಪತಿ-ಪತ್ನಿ ಸೇರಿ ಸುದೀಪ್ ಅವರ ಆಶೀರ್ವಾದ ಪಡೆದರು.
ಇದೀಗ ಮನೆಯಲ್ಲಿ ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ವಿನಯ್ ಗೌಡ, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಉಳಿದಿದ್ದಾರೆ. ಇವರಲ್ಲಿ ಯಾರು ವಿಜೇತರಾಗುತ್ತಾರೆ ಎಂಬುದು ಭಾನುವಾರದ ಎಪಿಸೋಡ್ನಲ್ಲಿ ತಿಳಿದು ಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ