ಹೊಸ ಧಾರಾವಾಹಿ ‘ಶಾಂತಿ ನಿವಾಸ’ ಪ್ರಸಾರಕ್ಕೆ ಸಜ್ಜಾದ ಉದಯ ಟಿವಿ; ಕಥೆ ಬಗ್ಗೆ ಇಲ್ಲಿದೆ ಮಾಹಿತಿ

ಈಗಾಗಲೇ ಅನೇಕ ಧಾರಾವಾಹಿಗಳು ‘ಉದಯ’ ಟಿವಿ ಪ್ರೇಕ್ಷಕರ ಮನ ಗೆದ್ದಿವೆ. ಈಗ ಹೊಸ ಧಾರಾವಾಹಿಯ ಪ್ರಸಾರಕ್ಕೆ ಈ ವಾಹಿನಿ ಸಜ್ಜಾಗಿದೆ. ‘ಶಾಂತಿನಿವಾಸ’ ಶೀರ್ಷಿಕೆಯ ಹೊಸ ಸೀರಿಯಲ್​ ಜುಲೈ 22ರಂದು ಪ್ರಸಾರ ಆರಂಭಿಸಲಿದೆ. ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8.30ಕ್ಕೆ ಈ ಧಾರಾವಾಹಿ ಬಿತ್ತರ ಆಗಲಿದೆ. ‘ಶಾಂತಿ’ ನಿವಾಸದ ಕಥೆಯ ಬಗ್ಗೆ ಮಾಹಿತಿ ಇಲ್ಲಿದೆ..

ಹೊಸ ಧಾರಾವಾಹಿ ‘ಶಾಂತಿ ನಿವಾಸ’ ಪ್ರಸಾರಕ್ಕೆ ಸಜ್ಜಾದ ಉದಯ ಟಿವಿ; ಕಥೆ ಬಗ್ಗೆ ಇಲ್ಲಿದೆ ಮಾಹಿತಿ
‘ಶಾಂತಿ ನಿವಾಸ’ ಪಾತ್ರವರ್ಗ
Follow us
ಮದನ್​ ಕುಮಾರ್​
|

Updated on: Jul 16, 2024 | 9:48 PM

ಎಂದಿನಂತೆ ಒಂದು ಕುಟುಂಬದ ಕಥೆಯನ್ನು ‘ಶಾಂತಿ ನಿವಾಸ’ ಸೀರಿಯಲ್​ನಲ್ಲಿ ಹೇಳಲಾಗುತ್ತದೆ. ಕುಟುಂಬ ಎಂದರೆ ಇದು ಕೂಡು ಕುಟುಂಬ. ಇಲ್ಲಿ ಕಥಾನಾಯಕಿ ಶಾಂತಿಯೇ ಹೈಲೈಟ್​. ಆಕೆಯ ಸ್ವಭಾವವನ್ನು ಈ ರೀತಿ ವಿವರಿಸಬಹುದು. ಶಾಂತಿ ಎಂದರೆ ಬರೀ ಒಂದು ಹೆಸರಲ್ಲ. ಆಕೆ ಶಾಂತಿ ನಿವಾಸದ ಪ್ರತಿಯೊಬ್ಬರ ಉಸಿರು. ಗೋವರ್ಧನರಾಯರು ಹಾಗೂ ಭಾಮಿನಿಯ ಮುದ್ದಿನ ಸೊಸೆ ಈಕೆ. ಸುಶಾಂತನ ಮುದ್ದಿನ ಮಡದಿಯಾಗಿ, ಸಿದ್ದಾರ್ಥನ ನಾದಿನಿಯಾಗಿ, ಸಾಧನಾಳ ತಂಗಿಯಾಗಿ, ಸುಕೃತಾಳ ಅತ್ತಿಗೆಯಾಗಿ, ವರ್ಷಾಳ ಮುದ್ದು ಚಿಕ್ಕಮ್ಮನಾಗಿ, ರಾಘವನ ಹೆತ್ತಮ್ಮನಾಗಿ ಶಾಂತಿ ಹಲವು ಪಾತ್ರಗಳನ್ನು ನಿಭಾಯಿಸುತ್ತಾಳೆ. ಒಂದೇ ಮಾತಲ್ಲಿ ಹೇಳಬೇಕು ಎಂದರೆ ಆಕೆಯೇ ಮನೆಯ ನಂದಾದೀಪ. ಇದಿಷ್ಟು ಆಕೆಯ ಪಾತ್ರ ಪರಿಚಯ.

ಪ್ರತಿಯೊಬ್ಬರ ಮನಸ್ಸನ್ನುಅರಿತುಕೊಂಡು ನಡೆಯುತ್ತಾಳೆ ಶಾಂತಿ. ಎಲ್ಲರ ಬೇಕು ಬೇಡಗಳನ್ನು ಮುಂಚೆಯೇ ಅರ್ಥ ಮಾಡಿಕೊಳ್ಳುತ್ತಾಳೆ. ಆಕೆ ಅಷ್ಟೇನೂ ಓದು ಬರಹ ಕಲಿಯದಿದ್ದರೂ ಸಂಸ್ಕಾರದಲ್ಲಿ ಮತ್ತು ಅತಿಥಿ ಸತ್ಕಾರದಲ್ಲಿ ಹುಟ್ಟಿನಿಂದಲೇ ಪದವೀಧರೆ! ಕುಟುಂಬದಲ್ಲಿ ಆಕೆ ಅಜಾತಶತ್ರು. ಹಾಗಾದರೆ ಈ ಕಥೆಯಲ್ಲಿ ಟ್ವಿಸ್ಟ್​ ಬರುವುದು ಯಾವಾಗ? ಮಂಥರ ಬಂದಾಗ.

ಹೌದು, ಜಗತ್ತಿನಲ್ಲಿ ಎಲ್ಲರಿಗೂ ಶತ್ರುಗಳು ಇದ್ದೇ ಇರುತ್ತಾರೆ. ಅದೇ ರೀತಿ ಶಾಂತಿಗೂ ಮಂಥರಾ ಎಂಬ ಒಬ್ಬಳು ಶತ್ರು ಇದ್ದಾಳೆ. ತಾನೇ ಮಾಡಿದ ತಪ್ಪಿನಿಂದ ಶಿಕ್ಷೆ ಅನುಭವಿಸಿ, ಜೈಲಿನಲ್ಲಿ ಇದ್ದಷ್ಟು ದಿನವೂ ಶಾಂತಿಯ ವಿರುದ್ಧ ಸೇಡು ತೀರಿಸಿಕೊಳ್ಳುವ ಹಠ ತೊಟ್ಟವರು ಈ ಮಂಥರಾ. ಜೈಲಿನಿಂದ ಹೊರಬಂದ ಆಕೆ ತನ್ನ ಗೆಳತಿ ಗಗನಾ ಜೊತೆ ಸೇರಿಕೊಂಡು ಶಾಂತಿಯನ್ನು ಹುಡುಕಲು ಆರಂಭಿಸುತ್ತಾಳೆ. ಹಲವು ಪ್ರಯತ್ನಗಳ ಬಳಿಕ ಶಾಂತಿಯ ಭೇಟಿ ಆಗುತ್ತದೆ. ಶಾಂತಿಯ ಕುಟುಂಬವನ್ನು ನೋಡಿ ಮಂಥರಾಳ ದ್ವೇಷ ಇನ್ನಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಪ್ರತಿಷ್ಠಿತ ‘ಎಮ್ಮಿ ಅವಾರ್ಡ್’ ಪಡೆದ ಖ್ಯಾತ ಸೀರಿಯಲ್​ ನಿರ್ಮಾಪಕಿ ಏಕ್ತಾ ಕಪೂರ್​

ಶಾಂತಿಯ ಕುಟುಂಬದೊಳಗೆ ತಾನು ಪ್ರವೇಶಿಸಬೇಕು ಎಂಬ ಸಂಚು ಮಂಥರಾಳದ್ದು. ಅದರಂತೆ, ನಿಧಾನವಾಗಿ ಶಾಂತಿ ನಿವಾಸದ ಒಳಗೆ ಕಾಲು ಇಡುತ್ತಾಳೆ. ಆಕೆಯ ಕುತಂತ್ರ ಬುದ್ಧಿಯ ಬಗ್ಗೆ ಶಾಂತಿಗೆ ಅನುಮಾನ ಇಲ್ಲ. ಅವಳನ್ನು ತನ್ನ ಕುಟುಂಬದಲ್ಲೊಬ್ಬಳಾಗಿ ನೋಡಿಕೊಳ್ಳುತ್ತಾಳೆ. ಆದರೆ ಇನ್ನುಳಿದ ಮನೆಯ ಸದಸ್ಯರಿಗೆ ಮಂಥರಾ ಬಗ್ಗೆ ಅನುಮಾನ ನುಸುಳುತ್ತದೆ. ಅವರ ಮಾತನ್ನು ಶಾಂತಿ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅಂತಿಮವಾಗಿ ಮಂಥರಾ ಸೇಡು ತೀರಿಸಿಕೊಳ್ಳುತ್ತಾಳಾ? ಶಾಂತಿಯ ಬದುಕಿನಲ್ಲಿ ಮುಂದೇನು ಆಗುತ್ತದೆ? ಈ ಎಲ್ಲ ಕುತೂಹಲಗಳಿಗೆ ‘ಶಾಂತಿ ನಿವಾಸ’ ಎಪಿಸೋಡ್​ಗಳಲ್ಲಿ ಉತ್ತರ ಸಿಗಲಿದೆ.

‘ಉದಯ’ ಟಿವಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿರುವ ‘ಶಾಂತಿ ನಿವಾಸ’ ಸೀರಿಯಲ್​ನಲ್ಲಿ ರೋಚಕ ತಿರುವುಗಳು ಇರಲಿವೆ ಎಂದು ತಂಡ ಹೇಳಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 8.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.