ಹಿರಿಯ ನಟಿ ಯಮುನಾ ಶ್ರೀನಿಧಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಸ್ಪರ್ಧಿಸಿ ಬಂದಿದ್ದಾರೆ. ಒಂದೇ ವಾರದಲ್ಲಿ ಅವರು ಎಲಿಮಿನೇಟ್ ಆಗಿದ್ದಾರೆ. ಇದ್ದಷ್ಟು ದಿನವೂ ಪಟಪಟನೆ ಮಾತನಾಡುತ್ತಾ ಆ್ಯಕ್ಟೀವ್ ಆಗಿದ್ದ ಅವರು ಇಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಆದರೆ ಕಡಿಮೆ ವೋಟ್ ಬಂದಿದ್ದರಿಂದ ಅವರು ಎಲಿಮಿನೇಟ್ ಆಗುವುದು ಅನಿವಾರ್ಯ ಆಯಿತು. ಈಗ ಅವರು ‘ಟಿವಿ9 ಕನ್ನಡ’ ಜೊತೆ ಆ ಬಗ್ಗೆ ಮಾತನಾಡಿದ್ದಾರೆ. ಸಂಭಾವನೆ ವಿಚಾರವಾಗಿ ಎದುರಾದ ಪ್ರಶ್ನೆಗೂ ಪ್ರತಿಕ್ರಿಯಿಸಿದ್ದಾರೆ.
‘ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಭಾವನೆ ಕೊಡುತ್ತಾರೆ. ಅದು ಅವರ ಸೀನಿಯಾರಿಟಿ ಮೇಲೆ ನಿರ್ಧಾರ ಆಗಿರಬಹುದು. ಆದರೆ ಅದರ ಬಗ್ಗೆ ನಾವು ಹೊರಗೆ ಎಲ್ಲಿಯೂ ಪ್ರಸ್ತಾಪ ಮಾಡುವಂತೆಯೇ ಇಲ್ಲ. ಹಾಗಾಗಿ ದಯವಿಟ್ಟು ಕ್ಷಮಿಸಿ’ ಎಂದು ಯಮುನಾ ಶ್ರೀನಿಧಿ ಅವರು ಹೇಳಿದ್ದಾರೆ. ಬಿಗ್ ಬಾಸ್ನಲ್ಲಿನ ಒಂದು ವಾರದ ಜರ್ನಿಯಿಂದ ಹೆಚ್ಚೇನೂ ವ್ಯತ್ಯಾಸ ಆಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ‘ಸುದೀಪ್ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್ ಬಾಸ್ನಲ್ಲಿ ಜಗದೀಶ್ ನಿರ್ಧಾರ
‘ಕಡಿಮೆ ಓಟ್ ಬಂದಿದ್ದಕ್ಕೆ ಕಾರಣ ಏನು ಎಂಬುದನ್ನು ಹೇಗೆ ಗುರುತಿಸುವುದೋ ಗೊತ್ತಿಲ್ಲ. ಈಗತಾನೇ ಧಾರಾವಾಹಿ ಮುಗಿಸಿದ ಹೆಣ್ಣು ಮಕ್ಕಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ಗಟ್ಟಲೆ ಫಾಲೋವರ್ಸ್ ಇದ್ದಾರೆ. ಅಂಥವರಲ್ಲಿ ಅರ್ಧದಷ್ಟು ಜನರು ವೋಟ್ ಮಾಡಿದರೂ ಅವರಿಗೆ ಸಹಾಯ ಆಗುತ್ತದೆ. ಆದರೆ ನಮಗೆ ಇರುವ 20 ಸಾವಿರ ಫಾಲೋವರ್ಸ್ ಪೈಕಿ ಪೂರ್ತಿ ಜನರು ವೋಟ್ ಹಾಕಿದರೂ ಅದು ಅರ್ಧ ಮಿಲಿಯನ್ಗೆ ಸಮ ಆಗುವುದಿಲ್ಲ’ ಎಂದು ಯಮುನಾ ಅವರು ಹೇಳಿದ್ದಾರೆ.
‘ದೊಡ್ಡ ಸಮೂಹಕ್ಕೆ ತಲುಪಬೇಕು ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಇರಲೇಬೇಕು. ಬಿಗ್ ಬಾಸ್ನಿಂದ ನಾನು ಏನಲ್ಲೂ ಕಳೆದುಕೊಂಡಿಲ್ಲ. ಹಲವು ಅಂಶಗಳನ್ನು ಪಡೆದುಕೊಂಡಿದ್ದೇನೆ. ನನಗೆ ಎಷ್ಟು ತಾಳ್ಮೆ ಇದೆ ಎಂಬುದು ಆ ಮನೆಯಿಂದಲೇ ಗೊತ್ತಾಗಿದ್ದು. ಫೋನ್ ಇಲ್ಲದೇ ನಾನು ಒಂದು ವಾರ ಇದ್ದೆ ಎಂಬುದೇ ಸಾಧನೆ. ಮೊದಲ ವಾರ ಕೆಲವರು ಹೊರಗೆ ಹೋಗಬಹುದು ಎಂದುಕೊಂಡಿದ್ದೆ. ಐಶ್ವರ್ಯಾ ಮೋಕ್ಷಿತಾ, ಹಂಸಾ, ಧನರಾಜ್ ನನ್ನ ಮನಸ್ಸಿನಲ್ಲಿ ಇದ್ದರು’ ಎಂದು ಯಮುನಾ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.