‘ಸುದೀಪ್ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್ ಬಾಸ್ನಲ್ಲಿ ಜಗದೀಶ್ ನಿರ್ಧಾರ
‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಜಗದೀಶ್ ಸಿಕ್ಕಾಪಟ್ಟೆ ಹೈಲೈಟ್ ಆಗಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಅವರ ವರ್ತನೆ. ಕೋಪ ಬಂದಾಗ ಜಗದೀಶ್ ತೀರಾ ಖರಾಬ್ ಆಗಿ ನಡೆದುಕೊಳ್ಳುತ್ತಾರೆ. ಈಗ ತಮ್ಮ ಕೋಪಕ್ಕೆ ಬ್ರೇಕ್ ಹಾಕಿಕೊಳ್ಳಲು ಅವರು ನಿರ್ಧರಿಸಿದ್ದಾರೆ. ಸುದೀಪ್ ಮಾತಿಗೆ ಬೆಲೆ ನೀಡಿ ತಾವು ಈ ನಿರ್ಧಾರಕ್ಕೆ ಬಂದಿರುವುದಾಗಿ ಜಗದೀಶ್ ಹೇಳಿದ್ದಾರೆ.
ಲಾಯರ್ ಎಂದು ಹೇಳಿಕೊಂಡಿರುವ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಕೋಪ ಮಾಡಿಕೊಂಡು ಸುದ್ದಿ ಆಗಿದ್ದಾರೆ. ಅವರ ಕೋಪದಿಂದಾಗಿ ಅನೇಕ ಜಗಳಗಳು ಆಗಿವೆ. ಶನಿವಾರದ (ಅ.5) ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಜಗದೀಶ್ಗೆ ಬುದ್ಧಿವಾದ ಹೇಳಿದ್ದರು. ಅದರ ಪರಿಣಾಮವಾಗಿ ಸಂಪೂರ್ಣ ಬದಲಾಗುವುದಾಗಿ ಜಗದೀಶ್ ತೀರ್ಮಾನಿಸಿದ್ದಾರೆ. ಅವರು ಈ ಮಾತಿಗೆ ಎಷ್ಟು ದಿನ ಬದ್ಧರಾಗಿ ಇರುತ್ತಾರೆ ಎಂಬುದನ್ನು ಕಾದುನೋಡಬೇಕು. ಜಗದೀಶ್ ಖಂಡಿತವಾಗಿಯೂ ಮಾತಿನ ಮೇಲೆ ನಿಲ್ಲುವುದಿಲ್ಲ ಎಂಬುದು ಬಿಗ್ ಬಾಸ್ ಮನೆಯ ಎಲ್ಲರಿಗೂ ಗೊತ್ತಾಗಿದೆ.
ಮೊದಲ ವಾರದಲ್ಲೇ ಜಗದೀಶ್ ಮಾಡಿದ ಅವಾಂತರಗಳು ಒಂದೆರಡಲ್ಲ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಇರುವ ಮಹಿಳಾ ಸ್ಪರ್ಧಿಗಳಿಗೆ ಕಿರಿಕಿರಿ ಆಗುವ ರೀತಿಯಲ್ಲಿ ಪದ ಪ್ರಯೋಗ ಮಾಡಿದ್ದರು. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅವಮಾನ ಮಾಡುವ ರೀತಿಯಲ್ಲಿ ಅವರು ಕ್ಯಾಮೆರಾ ಎದುರಿನಲ್ಲೇ ಮಾತನಾಡಿದರು. ಬೇಕುಬೇಕಂತಲೇ ನಿಯಮಗಳನ್ನು ಮುರಿದ್ದರು. ಅದಕ್ಕೆಲ್ಲ ಸುದೀಪ್ ಕ್ಲಾಸ್ ತೆಗೆದುಕೊಂಡರು.
ಭಾನುವಾರದ (ಅಕ್ಟೋಬರ್ 6) ಸಂಚಿಕೆಯಲ್ಲಿ ಧನರಾಜ್ ಜೊತೆ ಜಗದೀಶ್ ಮಾತನಾಡುತ್ತಿದ್ದರು. ‘ಇನ್ಮೇಲೆ ನಾನು ಕೋಪ ಮಾಡಿಕೊಳ್ಳುವುದೇ ಇಲ್ಲ. ಸುದೀಪ್ ಅವರು ಅಷ್ಟೆಲ್ಲ ನನಗೆ ಹೇಳಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿ ಹೇಳಿದ್ದಕ್ಕೆ ಗೌರವ ನೀಡುತ್ತೇನೆ’ ಎಂದು ಜಗದೀಶ್ ಹೇಳಿದರು. ಆದರೆ ಅವರು ಹೇಳಿದ ರೀತಿಯಲ್ಲೇ ನಡೆದುಕೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸುವುದು ತುಂಬ ಕಷ್ಟ. ಆರಂಭದಲ್ಲಿ ಜಗದೀಶ್ ಅವರಿಗೆ ಎಲ್ಲರೂ ಗೌರವ ನೀಡುತ್ತಿದ್ದರು. ಆದರೆ ಅವರ ವಿಚಿತ್ರ ವರ್ತನೆಗಳನ್ನು ನೋಡಿದ ಬಳಿಕ ಕೆಲವರು ಏಕವಚನದಲ್ಲಿ ಮಾತನಾಡಿದ್ದು ಕೂಡ ಇದೆ.
ಇದನ್ನೂ ಓದಿ: ಜಗದೀಶ್ ವಿರುದ್ಧ ಬೆಂಗಳೂರು ವಕೀಲರ ಸಂಘ ಗರಂ; ಕಲರ್ಸ್ ವಾಹಿನಿಗೆ ಬರೆದ ಪತ್ರದಲ್ಲಿ ಏನಿದೆ?
ಜಗದೀಶ್ ಅವರು ಕ್ಷಣಕ್ಷಣಕ್ಕೂ ಮಾತು ಬದಲಿಸುತ್ತಾರೆ. ಹಿಂದಿನ ರಾತ್ರಿ ಬಿಗ್ ಬಾಸ್ ಬಗ್ಗೆ ಹಗುರವಾಗಿ ಮಾತನಾಡಿ, ಬೆಳಗ್ಗೆ ಎದ್ದು ಕ್ಷಮೆ ಕೇಳುತ್ತಾರೆ. ಮತ್ತೆ ಇನ್ನೇನೋ ಮಾತನಾಡಿ ಕಿರಿಕ್ ಮಾಡಿಕೊಳ್ಳುತ್ತಾರೆ. ‘ಹಂಸಾ ಹೆಸರಿಗೆ ಮಾತ್ರ ಕ್ಯಾಪ್ಟನ್. ಆದರೆ ಆಟ ನಡೆಯುವುದು ನನ್ನದು’ ಎಂದು ಜಗದೀಶ್ ಅವರು ಹೇಳಿದ್ದಾರೆ. ಒಟ್ಟು 17 ಜನರು ಬಿಗ್ ಬಾಸ್ ಮನೆಯಲ್ಲಿ ಆಟ ಆರಂಭಿಸಿದರು. ಅವರ ಪೈಕಿ ಒಬ್ಬರ ಆಟ ಇಂದು (ಅ.6) ಅಂತ್ಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.