ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ (Bengaluru Rave Party) ಮಾಡಿದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ತೆಲುಗು ನಟಿ ಹೇಮಾ (Telugu Actress Hema) ಅವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಇಂದು (ಜೂನ್ 3) ಹೇಮಾ ಅವರ ಬಂಧನ (Hema Arrest) ಆಗಿದೆ. ಡ್ರಗ್ಸ್ ಹಾಗೂ ರೇವ್ ಪಾರ್ಟಿ ಆಯೋಜನೆಯಲ್ಲಿ ಹೇಮಾ ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ಆದರೆ ಫಾರ್ಮ್ ಹೌಸ್ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ವಿಡಿಯೋ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಹೇಮಾ ಪ್ರಯತ್ನಿಸಿದ್ದರು.
ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ ಬಳಿಕ ಆರೋಪಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರ ವರದಿ ಬಂದಿದ್ದು, ನಟಿ ಹೇಮಾ ಡ್ರಗ್ಸ್ ಸೇವಿಸಿದ್ದು ದೃಢಪಟ್ಟಿದೆ. ಈ ಕುರಿತಂತೆ ಎರಡು ಸಲ ನೋಟಿಸ್ ನೀಡಿದ್ದರೂ ಸಿಸಿಬಿ ಎದುರು ವಿಚಾರಣೆಗೆ ಹೇಮಾ ಹಾಜರಾಗಿರಲಿಲ್ಲ. ಹೀಗಾಗಿ ಸಿಸಿಬಿ ಪೊಲೀಸರು ಹೇಮಾರನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ರೇವ್ ಪಾರ್ಟಿ ಕೇಸ್: ನಟಿ ಹೇಮಾಗೆ ನೋಟಿಸ್ ಬೆನ್ನಲ್ಲೇ ಸಿಸಿಬಿಗೆ ರಾಜಕಾರಣಿಗಳಿಂದ ಒತ್ತಡ
ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಹೇಮಾಗೆ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ನಾಳೆ ಬೆಳಗ್ಗೆ ಅವರನ್ನು ಆನೇಕಲ್ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಲಿದ್ದಾರೆ. ಈ ಪ್ರಕರಣದಲ್ಲಿ ಮೊದಲಿನಿಂದಲೂ ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೇಮಾ ಪ್ರಯತ್ನಿಸುತ್ತಿದ್ದರು. ಇಂದು (ಜೂನ್ 3) ಕೂಡ ವಿಚಾರಣೆಗೆ ಬರುವಾಗ ಅವರು ಬುರ್ಕಾ ಧರಿಸಿದ್ದರು!
ಟಾಲಿವುಡ್ ಸೆಲೆಬ್ರಿಟಿಗಳು ನಡೆಸಿದ್ದ ಬೆಂಗಳೂರಿನ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಓರ್ವ ಡ್ರಗ್ ಪೆಡ್ಲರ್ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಡಿ.ಜೆ. ಹಳ್ಳಿ ನಿವಾಸಿಯಾಗಿದ್ದು ಇಮಾರ್ ಶರೀಫ್ ಎಂದು ಗುರುತಿಸಲಾಗಿದೆ. ಈತ ಪಾರ್ಟಿಯಲ್ಲಿ ಡ್ರಗ್ಸ್ ಸಪ್ಲೈ ಮಾಡಿದ್ದ. ಈತನ ಬಳಿ 40 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿವೆ. ಸದ್ಯ ಶರೀಫ್ನನ್ನು ಬಂಧಿಸಿ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:29 pm, Mon, 3 June 24