ಕಂಗನಾ ರಣಾವತ್ ಇದ್ದಲ್ಲಿ ಕಿರಿಕ್ ಇರಲೇಬೇಕು. ಇಂಥ ಒಂದು ಅಲಿಖಿತ ನಿಯಮ ಚಿತ್ರರಂಗದಲ್ಲಿ ಜಾರಿ ಆದಂತಿದೆ. ಈಗ ಕಂಗನಾ ನಟನೆಯ ತಲೈವಿ ಚಿತ್ರಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ‘ತಲೈವಿ’ ಚಿತ್ರಕ್ಕೆ ಸ್ವತಃ ಜಯಲಲಿತಾ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ವಿವಾದವು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ ತಲೈವಿ ಚಿತ್ರತಂಡದ ಪರವಾಗಿ ಕೋರ್ಟ್ ತೀರ್ಪು ನೀಡಿದೆ.
ಜಯಲಲಿತಾ ಅವರ ಸಂಬಂಧಿ ಜೆ. ದೀಪಾ ಅವರು ‘ತಲೈವಿ’ ಚಿತ್ರದ ವಿರುದ್ಧ ತಕರಾರು ತೆಗೆದಿದ್ದರು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆಯುವಾಗ ನಿರ್ದೇಶಕ ಎ.ಎಲ್. ವಿಜಯ್ ಅವರು ನಮ್ಮ ಅನುಮತಿ ಪಡೆದುಕೊಂಡಿಲ್ಲ. ಈ ಸಿನಿಮಾದಲ್ಲಿ ಜಯಲಲಿತಾ ಅವರ ಖಾಸಗಿ ಜೀವನವನ್ನು ನೆಗೆಟಿವ್ ಆಗಿ ತೋರಿಸಿರಬಹುದು. ಇದರಿಂದ ನಮ್ಮ ಕುಟುಂಬದ ಖಾಸಗಿತನಕ್ಕೆ ಧಕ್ಕೆ ಆಗಲಿದೆ. ಹಾಗಾಗಿ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ದೀಪಾ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ದೀಪಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ದೀಪಾ ಅವರ ಆರೋಪಕ್ಕೆ ನಿರ್ದೇಶಕ ಎ.ಎಲ್. ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. ವಾಸಂತಿ ಬರೆದ ತಲೈವಿ ಪುಸ್ತಕವನ್ನು ಆಧರಿಸಿ ನಾವು ಈ ಸಿನಿಮಾ ಮಾಡಿದ್ದೇವೆ. ಜಯಲಲಿತಾ ಅವರ ಜೀವನವನ್ನು ಒಳ್ಳೆಯ ರೀತಿಯಲ್ಲಿ ತೋರಿಸಿದ್ದೇವೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನೇ ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.
ಚಿತ್ರವನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ತಮ್ಮ ಎದುರು ಒಮ್ಮೆ ಪ್ರದರ್ಶನ ಮಾಡಬೇಕು ಎಂದು ದೀಪಾ ಒತ್ತಾಯ ಮಾಡಿದ್ದರು. ಸೆನ್ಸಾರ್ ಮಂಡಳಿಯಿಂದ ಈಗಾಗಲೇ ಚಿತ್ರಕ್ಕೆ ಪ್ರಮಾಣಪತ್ರ ಸಿಕ್ಕಿರುವುದರಿಂದ ಬೇರೆ ಯಾರಿಗೂ ಸಿನಿಮಾ ತೋರಿಸುವ ಅವಶ್ಯಕತೆ ಇಲ್ಲ ಎಂದಿರುವ ನಿರ್ದೇಶಕರು ದೀಪಾ ಮನವಿಯನ್ನು ತಿರಸ್ಕರಿಸಿದ್ದಾರೆ.
ಏ.23ರಂದು ತಲೈವಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದಾರೆ. ಎಂ.ಜಿ.ಆರ್. ಪಾತ್ರದಲ್ಲಿ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ತಮಿಳು, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಚಿತ್ರ ಸಿದ್ಧವಾಗಿದೆ.
ಇದನ್ನೂ ಓದಿ: ತಮಿಳುನಾಡು ಚುನಾವಣೆ ಹೊಸಿಲಲ್ಲೇ ‘ತಲೈವಿ’ ಟ್ರೇಲರ್ ಬಿಡುಗಡೆ: ಮತದಾರರಿಗೆ ನೆನಪಾಗ್ತಾರಾ ಜಯಲಲಿತಾ?