Thalapathy Vijay: ಸೈಕಲ್​ನಲ್ಲಿ ಬಂದು ಮತದಾನ ಮಾಡಿದ ದಳಪತಿ ವಿಜಯ್​! ಪೆಟ್ರೋಲ್​ ಬೆಲೆ ಏರಿಕೆಗೆ ನಟನ ತಿರುಗೇಟು?

Tamil Nadu Assembly Election 2021: ಸಿನಿಮಾ ಮಾತ್ರವಲ್ಲದೆ ತಮ್ಮ ಸಿದ್ಧಾಂತಗಳ ಮೂಲಕವೂ ನಟ ವಿಜಯ್​ ಆಗಾಗ ಸುದ್ದಿ ಆಗುತ್ತಿರುತ್ತಾರೆ. ಈಗ ಅವರು ಮತದಾನ ಮಾಡಲು ಸೈಕಲ್​ನಲ್ಲಿ ಬಂದಿರುವುದು ಚರ್ಚೆ ಆಗುತ್ತಿದೆ.

Thalapathy Vijay: ಸೈಕಲ್​ನಲ್ಲಿ ಬಂದು ಮತದಾನ ಮಾಡಿದ ದಳಪತಿ ವಿಜಯ್​! ಪೆಟ್ರೋಲ್​ ಬೆಲೆ ಏರಿಕೆಗೆ ನಟನ ತಿರುಗೇಟು?
ದಳಪತಿ ವಿಜಯ್​
Edited By:

Updated on: Apr 06, 2021 | 1:41 PM

ತಮಿಳುನಾಡು ಚುನಾವಣೆ ದೇಶಾದ್ಯಂತ ಗಮನ ಸೆಳೆದಿದೆ. ಹಲವು ದಿನಗಳಿಂದ ರಾಷ್ಟ್ರಮಟ್ಟದಲ್ಲಿ ಅಲ್ಲಿನ ರಾಜಕೀಯ ಸಂಗತಿಗಳು ಹೈಲೈಟ್​ ಆಗುತ್ತಿವೆ. ಇಂದು (ಮಾ.6) ತಮಿಳುನಾಡಿನಲ್ಲಿ ಚುನಾವಣೆ ನಡೆದಿದ್ದು, ತಮಿಳು ಚಿತ್ರರಂಗದ ಸೆಲೆಬ್ರಿಟಿಗಳೆಲ್ಲ ಮತದಾನ ಮಾಡಿದ್ದಾರೆ. ಅವರೆಲ್ಲರ ನಡುವೆ ದಳಪತಿ ವಿಜಯ್​ ಹೆಚ್ಚು ಗಮನ ಸೆಳೆದಿದ್ದಾರೆ. ಮತದಾನದ ಕೇಂದ್ರಕ್ಕೆ ಅವರು ಸೈಕಲ್​ ತುಳಿದುಕೊಂಡು ಬಂದಿರುವುದೇ ಅದಕ್ಕೆ ಕಾರಣ!

ಚೆನ್ನೈನ ನೀಲಾಂಕರೈನಲ್ಲಿ ನಟ ದಳಪತಿ ವಿಜಯ್​ ಮತದಾನ ಮಾಡಿದರು. ಅಲ್ಲಿಗೆ ಬರುವಾಗ ಅವರು ಯಾವುದೇ ಐಷಾರಾಮಿ ಕಾರು ಬಳಸಿಲ್ಲ. ಸ್ಟೈಲಿಶ್​ ಬೈಕ್​ ಕೂಡ ಮುಟ್ಟಿಲ್ಲ. ಬದಲಿಗೆ ಸಿಂಪಲ್​ ಆಗಿ ಸೈಕಲ್​ ಏರಿ ಬಂದಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ವಿಜಯ್​ ಸೈಕಲ್​ ಓಡಿಸುತ್ತಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅವರು ಹೀಗೆ ಸೈಕಲ್​ ತುಳಿದುಕೊಂಡು ಬಂದಿರುವುದರ ಹಿಂದೆ ದೊಡ್ಡ ಅರ್ಥವಿದೆ ಎಂದು ಎಲ್ಲೆಡೆ ಚರ್ಚೆ ಆಗುತ್ತಿದೆ.

ಸಿನಿಮಾ ಮಾತ್ರವಲ್ಲದೆ ತಮ್ಮ ಸಿದ್ಧಾಂತದ ಕಾರಣಕ್ಕಾಗಿಯೂ ವಿಜಯ್​ ಅವರು ಆಗಾಗ ಸುದ್ದಿ ಆಗುತ್ತಿರುತ್ತಾರೆ. ಸರ್ಕಾರದ ನಡೆಯ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ಅವರು ಸಿನಿಮಾಗಳ ಮೂಲಕವೂ ವ್ಯಕ್ತಪಡಿಸಿದ್ದುಂಟು. ಈಗ ದೇಶದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ಜಾಸ್ತಿ ಆಗಿರುವುದನ್ನು ಟೀಕಿಸುವ ಸಲುವಾಗಿಯೇ ವಿಜಯ್​ ಸೈಕಲ್​ ಏರಿ ಬಂದಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಈ ಮೂಲಕ ಕೇಂದ್ರ ಸರ್ಕಾರವನ್ನು ಅವರು ವ್ಯಂಗ್ಯ ಮಾಡಿದ್ದಾರೆ ಎನ್ನಲಾಗುತ್ತಿದೆ.

2017ರಲ್ಲಿ ವಿಜಯ್​ ನಟನೆಯ ‘ಮೆರ್ಸೆಲ್​’ ಸಿನಿಮಾ ತೆರೆಕಂಡಿತ್ತು. ಆ ಚಿತ್ರಕ್ಕೆ ಅಟ್ಲಿ ಕುಮಾರ್​ ನಿರ್ದೇಶನ ಮಾಡಿದ್ದರು. ಮೆರ್ಸೆಲ್​ ಚಿತ್ರದಲ್ಲಿ ಕೇಂದ್ರ ಸರ್ಕಾರದ ಜಿಎಸ್​ಟಿ ಬಗ್ಗೆ ಟೀಕೆಗಳಿದ್ದವು. ಹಾಗಾಗಿ ಬಿಜೆಪಿ ಬೆಂಬಲಿಗರನ್ನು ಈ ಸಿನಿಮಾ ಕೆರಳಿಸಿತ್ತು. ಈಗಲೂ ಕೂಡ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಏರಿಕೆಯ ವಿಷಯಯನ್ನು ಟೀಕಿಸುವ ಸಲುವಾಗಿಯೇ ವಿಜಯ್​ ಅವರು ಸೈಕಲ್​ ತುಳಿದುಕೊಂಡು ಬಂದು ಮತದಾನ ಮಾಡಿದ್ದಾರೆ ಎಂಬ ಅಭಿಪ್ರಾಯ ಅನೇಕರದ್ದು.

ಇನ್ನು, ಕಾಲಿವುಡ್​ನ ಸ್ಟಾರ್​ ನಟರಾದ ರಜನಿಕಾಂತ್​, ಕಮಲ್​ ಹಾಸನ್​, ಅಜಿತ್​ ಕುಮಾರ್​ ಮುಂತಾದವರು ಕೂಡ ಕುಟುಂಬದವರ ಜೊತೆ ಆಗಮಿಸಿ ಮತದಾನ ಮಾಡಿದ್ದಾರೆ. ಆ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ವಿಜಯ್​ ಸೈಕಲ್​ನಲ್ಲಿ ಬಂದ ವಿಡಿಯೋವನ್ನು ಅವರ ಅಭಿಮಾನಿಗಳು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Tamil Nadu Election 2021 Voting LIVE: ಕುತೂಹಲ ಮೂಡಿಸಿದ ತಮಿಳುನಾಡು ವಿಧಾನಸಭಾ ಚುನಾವಣೆ

Viral Video: ಚೆನ್ನೈನಲ್ಲಿ ಆಟೋದಲ್ಲಿ ಪ್ರಯಾಣಿಸಿದ ಸ್ಟಾರ್​ ನಟನ ಸರಳತೆ ನೋಡಿ ಅಭಿಮಾನಿಗಳು ಫುಲ್​ ಖುಷ್​

 

(Tamil Nadu Election: Master Actor Vijay Cycles to Polling Booth to criticize petrol price hike)

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us