
ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸ್ಟಾರ್ ನಟ. ಅವರ ಸಿನಿಮಾಗಳು ಮೊದಲ ದಿನವೇ ಕೋಟ್ಯಂತರ ರೂಪಾಯಿ ಗಳಿಕೆ ಮಾಡುತ್ತವೆ. ವಿಜಯ್ ಅವರ ಕೆಟ್ಟ ಸಿನಿಮಾಗಳೂ ಸಹ 200 ರಿಂದ 300 ಕೋಟಿ ಗಳಿಸುತ್ತವೆ. ಆದರೆ ವಿಜಯ್ ಅವರು ಇದೀಗ ಸಿನಿಮಾಕ್ಕೆ ಗುಡ್ಬೈ ಹೇಳಿದ್ದಾರೆ. ಈಗ ಅವರು ನಟಿಸುತ್ತಿರುವ ‘ಜನ ನಾಯಗನ್’ ವಿಜಯ್ ಅವರ ಕೊನೆಯ ಸಿನಿಮಾ ಆಗಲಿದೆ. ವಿಜಯ್ ರಾಜಕೀಯಕ್ಕೆ ಎಂಟ್ರಿ ನೀಡಿದ್ದು, ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗೆ ರೆಡಿಯಾಗುತ್ತಿದ್ದಾರೆ. ಇದಕ್ಕಾಗಿ ಅವರು ಜನರಿಗೆ ಭರ್ಜರಿ ಭರವಸೆಯನ್ನೇ ನೀಡಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿರುವ ವಿಜಯ್ ಅವರು, ಇತ್ತೀಚೆಗೆ ಮಾತನಾಡುತ್ತಾ ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷದ ಉದ್ದೇಶಗಳ ಬಗ್ಗೆ ಮಾತನಾಡಿದರು. ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪ್ರಣಾಳಿಕೆಯನ್ನು ತಯಾರು ಮಾಡುತ್ತಿದ್ದು ಮುಂದಿನ ವರ್ಷ ಅದನ್ನು ಬಿಡುಗಡೆ ಮಾಡುವುದಾಗಿ ವಿಜಯ್ ಹೇಳಿದರು. ಆದರೆ ಪ್ರಣಾಳಿಕೆಯಲ್ಲಿ ಇರಬಹುದಾದ ಕೆಲವು ವಿಷಯಗಳನ್ನು ಮುಂದಾಗಿ ಅವರು ಹಂಚಿಕೊಂಡರು.
‘ನಾವು ಅಧಿಕಾರಕ್ಕೆ ಬಂದರೆ, ಖಂಡಿತ ಬರುತ್ತೇವೆ, ಜನ, ಜನರಿಗಾಗಿ ನಮ್ಮನ್ನು ಅಧಿಕಾರಕ್ಕೆ ತರಲಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಜನರಿಗಾಗಿ ಮಾಡಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಅದನ್ನೆಲ್ಲ ಪ್ರಣಾಳಿಕೆಯಲ್ಲಿ ನಾವು ವಿವರಿಸಲಿದ್ದೇವೆ ಆದರೆ ಅದಕ್ಕೆ ಮುಂಚಿತವಾಗಿಯೇ ಕೆಲ ವಿಷಯಗಳನ್ನು ನಾನು ಜನರ ಮುಂದಿಡಲು ಬಯಸುತ್ತೇನೆ. ನಾವು ಅಧಿಕಾರಕ್ಕೆ ಬಂದರೆ ಪ್ರತಿ ವ್ಯಕ್ತಿಗೂ ಇರಲು ಮನೆ ಹಾಗೂ ಆ ಮನೆಯಲ್ಲಿ ಮೊಟಾರ್ ಬೈಕ್ ಇರುವಂತೆ ಮಾಡುತ್ತೇವೆ. ಕಾರು ನೀಡುವ ಗುರಿಯನ್ನೂ ಸಹ ನಾವು ಹೊಂದಿದ್ದೇವೆ’ ಎಂದಿದ್ದಾರೆ ವಿಜಯ್.
ಇದನ್ನೂ ಓದಿ:ನಟ, ರಾಜಕಾರಣಿ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ
ಮುಂದುವರೆದು, ‘ಪ್ರತಿ ಮಗುವು ಶಿಕ್ಷಿತರಾಗಬೇಕು, ಕನಿಷ್ಟ ಪದವಿ ವರೆಗೆ ಅವರು ಓದಬೇಕು, ಜೊತೆಗೆ ಪ್ರತಿ ಮನೆಯಲ್ಲಿ ಒಬ್ಬ ವ್ಯಕ್ತಿಯಾದರೂ ಗ್ಯಾರೆಂಟಿ ಆದಾಯವನ್ನು ಹೊಂದಿರುವಂತೆ ಮಾಡುತ್ತೇವೆ. ಉದ್ಯೋಗ ಸೃಷ್ಟಿ ಮಾಡುತ್ತೇವೆ. ಸರ್ಕಾರಿ ಆಸ್ಪತ್ರೆಗಳ ಚಿತ್ರಣವನ್ನು ಬದಲಾಯಿಸುತ್ತೇವೆ. ಜನರು ಸರ್ಕಾರಿ ಆಸ್ಪತ್ರೆಗಳನ್ನು ನಂಬುವಂತೆ ಮಾಡುತ್ತೇವೆ’ ಎಂದು ವಿಜಯ್ ಭರವಸೆ ನೀಡಿದ್ದಾರೆ.
ವಿಜಯ್ ಅವರು ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಸ್ಥಾಪನೆ ಮಾಡಿದ್ದು, ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಪ್ರಚಾರ ಆರಂಭ ಮಾಡಿದ್ದಾರೆ. ಆದರೆ ಇತ್ತೀಚೆಗಷ್ಟೆ ವಿಜಯ್ ಅವರು ಕರೂರಿನಲ್ಲಿ ಪ್ರಚಾರ ಮಾಡುವಾಗ ಕಾಲ್ತುಳಿತ ನಡೆದಿದ್ದು, ಸುಮಾರು 41 ಮಂದಿ ನಿಧನ ಹೊಂದಿದ್ದರು. ಇದು ವಿಜಯ್ ಅವರ ಪ್ರಚಾರಕ್ಕೆ ತೀವ್ರ ಹಿನ್ನೆಡೆ ಉಂಟು ಮಾಡಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ