ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ

ಖ್ಯಾತ ನಟ, ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ವೈಯಕ್ತಿಕ ವಿಚಾರ ಇಟ್ಟುಕೊಂಡು ವಿರೋಧಿಗಳು ರಾಜಕೀಯ ಮಾಡುತ್ತಿರುವುದನ್ನು ವಿಜಯ್ ಖಂಡಿಸಿದ್ದಾರೆ. ಇಂದು (ಏಪ್ರಿಲ್ 8) ನಡೆದ ಸಮಾವೇಶದಲ್ಲಿ ಅವರು ಈ ಬಗ್ಗೆ ಗರಂ ಆಗಿ ಮಾತನಾಡಿದರು.

ಚುನಾವಣೆ ಹತ್ತಿರ ಆದಾಗಲೇ ಡಿವೋರ್ಸ್ ವಿಷಯ ಬಹಿರಂಗ ಮಾಡಿದ್ದಕ್ಕೆ ದಳಪತಿ ವಿಜಯ್ ಗರಂ
Thalapathy Vijay
Image Credit source: Twitter/@VijayFansTrends

Updated on: Apr 08, 2026 | 5:36 PM

ತಮಿಳುನಾಡು ಚುನಾವಣೆಯ (Tamil Nadu Elections) ಕಾವು ಏರುತ್ತಿರುವ ಬೆನ್ನಲ್ಲೇ, ನಟ ಮತ್ತು ರಾಜಕಾರಣಿ ದಳಪತಿ ವಿಜಯ್ ಅವರು ಬುಧವಾರ (ಏಪ್ರಿಲ್ 8) ತಿರುನಲ್ವೇಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ವೈಯಕ್ತಿಕ ಜೀವನದ ಏರಿಳಿತಗಳು ಮತ್ತು ತಮ್ಮ ಕೊನೆಯ ಸಿನಿಮಾ ‘ಜನ ನಾಯಕನ್’ ಎದುರಿಸುತ್ತಿರುವ ಸೆನ್ಸಾರ್ ಸಮಸ್ಯೆಗಳ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಅವರು ಆರೋಪಿಸಿದ್ದಾರೆ. ವಿಚ್ಛೇದನದ ಸುದ್ದಿ ಹೊರಬಂದಿದ್ದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ದಳಪತಿ ವಿಜಯ್ (Thalapathy Vijay) ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಇನ್ನೂ ಪ್ರಮಾಣಪತ್ರ ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿದ ಅವರು, ‘ನನ್ನನ್ನು ಜನರಿಂದ ದೂರವಿಡಲು ವಿರೋಧಿಗಳು ಒಂದಲ್ಲ ಒಂದು ದಾರಿ ಹುಡುಕುತ್ತಿದ್ದಾರೆ. ಮೊದಲು ಕರೂರ್ ಘಟನೆಯನ್ನು ನನ್ನ ಮೇಲೆ ಹಾಕಲು ನೋಡಿದರು. ಈಗ ನನ್ನ ಸಿನಿಮಾದ ಬಿಡುಗಡೆಯನ್ನು ತಡೆಯುತ್ತಿದ್ದಾರೆ. ನಾನು ಜನರನ್ನು ಭೇಟಿ ಮಾಡಬಾರದು ಎಂದು ಹೊಸ ನಿಯಮಗಳನ್ನು ರೂಪಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಕೆಲವು ತಿಂಗಳುಗಳಿಂದ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದ್ದವು. ಅಷ್ಟೇ ಅಲ್ಲದೇ, ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ವಿಜಯ್ ಹೆಸರು ಕೇಳಿಬಂದಿತ್ತು. ಈ ಬಗ್ಗೆ ಮೌನ ಮುರಿದ ವಿಜಯ್, ‘ಚುನಾವಣೆಗೆ 30 ದಿನ ಬಾಕಿ ಇರುವಾಗ ನನ್ನ ಆಪ್ತರ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಏನೇ ಆದರೂ ನೀವು ನನ್ನನ್ನು ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

‘ನನ್ನ ಮೇಲೆ ಎಷ್ಟೇ ಆರೋಪಗಳನ್ನು ಹೊರಿಸಿದರೂ ಜನರು ನನ್ನ ಜೊತೆಗಿದ್ದಾರೆ. ಈ ಪವಾಡವನ್ನು ನೋಡಿ ವಿರೋಧಿಗಳಿಗೆ ತಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ವಿಜಯ್ ತಮ್ಮ ಭಾಷಣದಲ್ಲಿ ಗುಡುಗಿದ್ದಾರೆ. ವಿಜಯ್ ಅವರು ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರ ಅಭಿಮಾನಿಗಳಲ್ಲಿ ಕುತೂಹಲ ತೀವ್ರವಾಗಿದೆ.

ಇದನ್ನೂ ಓದಿ: ದಳಪತಿ ವಿಜಯ್ 603 ಕೋಟಿ ರೂಪಾಯಿ ಆಸ್ತಿ ವಿವರ ಬಹಿರಂಗ: ಪತ್ನಿ ಬಳಿ ಎಷ್ಟಿದೆ?

ಈ ವರ್ಷ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹೊರಬಂದಿತ್ತು. ಮಾರ್ಚ್ನಲ್ಲಿ ನಟಿ ತ್ರಿಶಾ ಅವರೊಂದಿಗೆ ವಿಜಯ್ ಮದುವೆಯೊಂದರಲ್ಲಿ ಕಾಣಿಸಿಕೊಂಡಿದ್ದರಿಂದ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಿತ್ತು. ಅವರ ವೈಯಕ್ತಿಕ ಜೀವನದ ವಿಚಾರವನ್ನು ರಾಜಕೀಯದಲ್ಲಿ ಎಳೆದುತಂದಿದ್ದಕ್ಕೆ ವಿಜಯ್ ಗರಂ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us