ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ

Rajinikanth: ಗಿಲ್ಲಿ ಹೆಸರಲ್ಲಿ ಬಿರಿಯಾನಿ ಸಹ ಇದೆಯೆಂಬುದು ನಿಮಗೆ ಗೊತ್ತೆ? ಆದರೆ ಈ ‘ಗಿಲ್ಲಿ ಬಿರಿಯಾನಿ’ ಸಿಗುವುದು ಬೆಂಗಳೂರಲ್ಲಿ ಅಲ್ಲ ಬದಲಿಗೆ ಚೆನ್ನೈನಲ್ಲಿ. ಆದರೆ ಬಿಗ್​​ಬಾಸ್ ಗಿಲ್ಲಿಗೂ, ಚೆನ್ನೈನ ಗಿಲ್ಲಿ ಬಿರಿಯಾನಿಗೂ ಸಂಬಂಧವಿಲ್ಲ, ಆದರೆ ಆ ಬಿರಿಯಾನಿ ಜೊತೆಗೆ ಸೂಪರ್ ಸ್ಟಾರ್ ರಜನೀಕಾಂತ್​​ಗೆ ನೇರ ಸಂಬಂಧ ಇದೆ. ಏನಿದು ಗಿಲ್ಲಿ ಬಿರಿಯಾನಿ, ಆ ಬಿರಿಯಾನಿಗೆ ಗಿಲ್ಲಿ ಎಂದೇಕೆ ಹೆಸರು ಕೊಟ್ಟರು? ಮಾಹಿತಿ ಇಲ್ಲಿದೆ ಓದಿ...

ರಜನೀಕಾಂತ್ ಮತ್ತು ಗಿಲ್ಲಿ: ಒಂದು ಬಿರಿಯಾನಿಯ ಕತೆ
Gilli Rajinikanth Biriyani

Updated on: Jan 15, 2026 | 10:35 AM

ಬಿಗ್​​ಬಾಸ್ (Bigg Boss) ಫಿನಾಲೆ ಹತ್ತಿರದಲ್ಲಿದೆ. ಮನೆಯಲ್ಲಿ ಆರು ಮಂದಿ ಸ್ಪರ್ಧಿಗಳಿದ್ದು, ಗಿಲ್ಲಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದ್ದಾರೆ. ಹೊರಗೆ ಗಿಲ್ಲಿಗೆ ದೊಡ್ಡ ಅಭಿಮಾನಿ ವರ್ಗವೇ ಸೃಷ್ಟಿಯಾಗಿದೆ. ಗಿಲ್ಲಿ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್​​ಗಳು, ಹಾಡುಗಳು ಸಹ ಹರಿದಾಡುತ್ತಿವೆ. ಗಿಲ್ಲಿ ಹೆಸರಲ್ಲಿ ಆಟೋ ಸೇವೆಯನ್ನು ಉಚಿತವಾಗಿ ಕೊಡುವುದಾಗಿ ಕೆಲ ಆಟೋ ಡ್ರೈವರ್​ಗಳು ಘೋಷಣೆ ಮಾಡಿದ್ದಾರೆ. ಒಟ್ಟಾರೆ ಗಿಲ್ಲಿ ಕ್ರೇಜ್ ಜೋರಾಗಿದೆ. ಅಂದಹಾಗೆ ಗಿಲ್ಲಿ ಹೆಸರಲ್ಲಿ ಬಿರಿಯಾನಿ ಸಹ ಇದೆಯೆಂಬುದು ನಿಮಗೆ ಗೊತ್ತೆ? ಆದರೆ ಈ ‘ಗಿಲ್ಲಿ ಬಿರಿಯಾನಿ’ ಸಿಗುವುದು ಬೆಂಗಳೂರಲ್ಲಿ ಅಲ್ಲ ಬದಲಿಗೆ ಚೆನ್ನೈನಲ್ಲಿ. ಆದರೆ ಬಿಗ್​​ಬಾಸ್ ಗಿಲ್ಲಿಗೂ, ಚೆನ್ನೈನ ಗಿಲ್ಲಿ ಬಿರಿಯಾನಿಗೂ ಸಂಬಂಧವಿಲ್ಲ, ಆದರೆ ಆ ಬಿರಿಯಾನಿ ಜೊತೆಗೆ ಸೂಪರ್ ಸ್ಟಾರ್ ರಜನೀಕಾಂತ್​​ಗೆ ನೇರ ಸಂಬಂಧ ಇದೆ. ಏನಿದು ಗಿಲ್ಲಿ ಬಿರಿಯಾನಿ, ಆ ಬಿರಿಯಾನಿಗೆ ಗಿಲ್ಲಿ ಎಂದೇಕೆ ಹೆಸರು ಕೊಟ್ಟರು? ಮಾಹಿತಿ ಇಲ್ಲಿದೆ ಓದಿ…

ಗಿಲ್ಲಿ ಬಿರಿಯಾನಿ ಎಂಬುದು ಚೆನ್ನೈನಲ್ಲಿ ಮಾತ್ರವೇ ಸಿಗುವ ವಿಭಿನ್ನ ಬಗೆಯ ಬಿರಿಯಾನಿ. ಚೆನ್ನೈನ ತಾಜ್ ಕೋರಮಂಡಲ್​​ನಲ್ಲಿ ಈ ಗಿಲ್ಲಿ ಬಿರಿಯಾನಿ ಸರ್ವ್ ಮಾಡಲಾಗುತ್ತದೆ. ಇತರೆ ಬಿರಿಯಾನಿ ರೀತಿ ಈ ಬಿರಿಯಾನಿ ಉದುರುರಾಗಿ ಅಥವಾ ಡ್ರೈ ಆಗಿ ಇರುವುದಿಲ್ಲ ಬದಲಿಗೆ ಬಿಸಿ ಬೇಳೆ ಬಾತ್ ರೀತಿ ಇರುತ್ತದೆ ಆದರೆ ಬಿರಿಯಾನಿ ರೀತಿಯ ರುಚಿಯೇ ಇದರಲ್ಲಿ ಇರುತ್ತದೆ. ತಾಜ್ ಕೋರಮಂಡಲ್​​​ನಲ್ಲಿ ಈ ಬಿರಿಯಾನಿಯನ್ನು 1990ರ ದಶಕದಲ್ಲಿ ಮೊದಲ ಬಾರಿಗೆ ಅನ್ವೇಷಿಸಲಾಯ್ತು. ಈ ಅನ್ವೇಷಣೆಗೆ ಕಾರಣವಾಗಿದ್ದು ಸೂಪರ್ ಸ್ಟಾರ್ ರಜನೀಕಾಂತ್.

ತಾಜ್​​ನಲ್ಲಿ ಆಗ ಶೆಫ್ ಆಗಿದ್ದ ರಾಮ್ ಮೋಹನ್ ಎಂಬುವರು ರಜನೀಕಾಂತ್ ಅವರಿಗಾಗಿ ಈ ಗಿಲ್ಲಿ ಬಿರಿಯಾನಿಯನ್ನು ಮಾಡಿದ್ದರು. ಅವರೇ ಹೇಳಿಕೊಂಡಿರುವಂತೆ ರಜನೀಕಾಂತ್ ಅವರು ಆಗ ತಾಜ್ ಕೋರಮಂಡಲ್​​ಗೆ ಬಹಳ ಬರುತ್ತಿದ್ದರಂತೆ. ವಿಶೇಷವಾಗಿ ಅವರ ರಾತ್ರಿ ಊಟ ಅಲ್ಲೇ ಆಗುತ್ತಿತ್ತಂತೆ. ರಜನೀಕಾಂತ್ ಅಲ್ಲಿಗೆ ಹೋದಾಗೆಲ್ಲ ಸಾಮಾನ್ಯವಾಗಿ ಪೂರಿ ಮತ್ತು ಅದರ ಜೊತೆಗೆ ಚಿಕನ್ ಅಥವಾ ಮಟನ್ ಗ್ರೇವಿ ತಿನ್ನುತ್ತಿದ್ದರಂತೆ. ಆದರೆ ಒಂದು ದಿನ ರಾತ್ರಿ ಸುಮಾರು ಒಂದು ಗಂಟೆ ವೇಳೆಗೆ ಬಂದ ರಜನೀಕಾಂತ್, ‘ನನಗೆ ಬಿರಿಯಾನಿ ತಿನ್ನುವ ಮನಸ್ಸಾಗಿದೆ’ ಎಂದು ಶೆಫ್ ರಾಮ್ ಮೋಹನ್ ಬಳಿ ಹೇಳಿದ್ದಾರೆ. ಆದರೆ ಬಿರಿಯಾನಿ ಹೆವಿ ಆಗಿರುವುದು ಬೇಡ, ತಡರಾತ್ರಿ ತಿನ್ನುತ್ತಿರುವ ಕಾರಣ ಸುಲಭವಾಗಿ ಜೀರ್ಣವಾಗುವಂಥಹ ಬಿರಿಯಾನಿ ಮಾಡಿಕೊಂಡು ಬಾ’ ಎಂದರಂತೆ.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್?

ಶೆಫ್ ರಾಮ್ ಮೋಹನ್​​ಗೆ ಇದು ಸವಾಲಾಗಿ ಪರಿಣಮಿಸಿದೆ. ಬಿರಿಯಾನಿ ಉದುರಾಗಿ ಇರುವುದರಿಂದ ಅದು ಸುಲಭವಾಗಿ ಜೀರ್ಣವಾಗುವುದಿಲ್ಲ ಎಂದು ಅರಿತಿದ್ದ ಶೆಫ್, ಬಿರಿಯಾನಿಗೆ ತೆಳುವಾದ, ಹೆಚ್ಚು ಖಾರವಿಲ್ಲದ ಮಟನ್ ಗ್ರೇವಿಯನ್ನು ಬೆರೆಸಿ ಅದನ್ನು ಸ್ಟೀಂ ಮಾಡಿದರಂತೆ. ಅದನ್ನು ರಜನೀಕಾಂತ್ ಅವರಿಗೆ ಸರ್ವ್ ಮಾಡಿದ್ದಾರೆ. ರಜನೀಕಾಂತ್​​ಗೆ ಅದು ಬಹಳ ಹಿಡಿಸಿದೆ. ಬಳಿಕ ರಜನೀಕಾಂತ್ ಅವರು ಬಂದಾಗೆಲ್ಲ ಅದೇ ಬಿರಿಯಾನಿ ಕೇಳುತ್ತಿದ್ದರಂತೆ. ಆ ಬಳಿಕ ಅವರ ಗೆಳೆಯರೂ ಕೆಲವರಿಗೆ ಅದು ಹಿಡಿಸಿ ಬಳಿಕ ಅದನ್ನು ತಾಜ್​ನವರು ಮೆನ್ಯುಗೆ ಸೇರಿಸಿದ್ದಾರೆ.

ಅಂದಹಾಗೆ ಆ ಬಿರಿಯಾನಿಗೆ ಗಿಲ್ಲಿ ಹೆಸರು ಬಂದಿದ್ದು ತುಸು ವಿಚಿತ್ರ. ಬಿರಿಯಾನಿಗೆ ಗ್ರೇವಿ ಬೆರೆಸುವ ಕಾರಣ ಅದನ್ನು ‘ಗೀಲಾ ಬಿರಿಯಾನಿ’ ಎಂದು ಕೆಲವರು ಕರೆದರಂತೆ. ಗೀಲಾ ಎಂದರೆ ಹಿಂದಿಯಲ್ಲಿ ಒದ್ದೆ ಎಂದರ್ಥ. ಆದರೆ ಬಳಿಕ ಗೀಲಾ ಎಂಬುದು ಗಿಲ್ಲಿ ಆಗಿ, ‘ಗಿಲ್ಲಿ ಬಿರಿಯಾನಿ’ ಆಗಿದೆ. 30 ವರ್ಷಗಳ ಈಗಲೂ ತಾಜ್ ಕೋರಮಂಡಲ್​​ನಲ್ಲಿ ಗಿಲ್ಲಿ ಬಿರಿಯಾನಿ ಸರ್ವ್ ಆಗುತ್ತದೆ. ಈಗ ಒಂದು ಪ್ಲೇಟ್ ಗಿಲ್ಲಿ ಬಿರಿಯಾನಿಯ ಬೆಲೆ 1300 ರೂಪಾಯಿಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ