ಬಿಗ್ಬಾಸ್ ಮನೆಯಲ್ಲಿ ಗಿಲ್ಲಿಗೆ ಹೊಡೆಯಲು ಯತ್ನಿಸಿದ್ದ ಡಾಗ್ ಸತೀಶ್?
Bigg Boss Kannada 12: ಈ ಬಾರಿ ಬಿಗ್ಬಾಸ್ ಮನೆಗೆ ಹೋಗಿ ಕೆಲ ವಾರವಷ್ಟೆ ಇದ್ದು ಹೊರಗೆ ಬಂದ ಡಾಗ್ ಸತೀಶ್ ಅವರು ಹೊರಗೆ ಬಂದಾಗಿನಿಂದಲೂ ಶೋ ಬಗ್ಗೆ, ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳಾಗಿದ್ದವರ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಗಿಲ್ಲಿ ಬಗ್ಗೆ ಟೀಕೆ, ನಿಂದನೆ ಮಾಡುತ್ತಿದ್ದಾರೆ. ಇದೀಗ, ಬಿಗ್ಬಾಸ್ ಮನೆಯಲ್ಲಿ ಗಿಲ್ಲಿಯನ್ನು ಹೊಡೆಯಲು ಹೋಗಿದ್ದೆ ಎಂದು ಡಾಗ್ ಸತೀಶ್ ಹೇಳಿಕೊಂಡಿದ್ದಾರೆ.

ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada) ಮುಗಿಯುತ್ತಾ ಬಂದಿದೆ. ಆರಂಭದಲ್ಲಿ ಹಲವು ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದರು ನಿಯಮದಂತೆ ಒಬ್ಬೊಬ್ಬರಾಗಿ ಎಲ್ಲರೂ ಹೊರಗೆ ಹೋಗಿ ಈಗ ಏಳು ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಬಿಗ್ಬಾಸ್ ಮನೆಗೆ ಹೋಗಿ ಬಂದವರು ಸಖತ್ ಜನಪ್ರಿಯತೆ ಗಳಿಸುತ್ತಾರೆ ಆದರೆ ಹೀಗೆ ಆಚೆ ಬಂದವರು ಬಿಗ್ಬಾಸ್ ವಿರುದ್ಧವಾಗಿ ಮಾತನಾಡಿರುವುದು ಕಡಿಮೆ. ಆದರೆ ಈ ಬಾರಿ ಬಿಗ್ಬಾಸ್ ಮನೆಗೆ ಹೋಗಿ ಕೆಲ ವಾರವಷ್ಟೆ ಇದ್ದು ಹೊರಗೆ ಬಂದ ಡಾಗ್ ಸತೀಶ್ ಅವರು ಹೊರಗೆ ಬಂದಾಗಿನಿಂದಲೂ ಶೋ ಬಗ್ಗೆ, ಶೋನಲ್ಲಿ ತಮ್ಮ ಸಹ ಸ್ಪರ್ಧಿಗಳಾಗಿದ್ದವರ ಬಗ್ಗೆ ದೂರುಗಳನ್ನು ಹೇಳುತ್ತಿದ್ದಾರೆ. ಅದರ ಜೊತೆಗೆ ತಮ್ಮ ಬಗ್ಗೆ ಬಹುವಾಗಿ ಸ್ವಯಂ ಹೊಗಳಿಕೆ ಮಾತುಗಳನ್ನು ಆಡಿಕೊಳ್ಳುತ್ತಿದ್ದಾರೆ.
ಬಿಗ್ಬಾಸ್ನಿಂದ ಬಂದ ಬಳಿಕ ಒಂದರ ಮೇಲೊಂದು ಸಂದರ್ಶನಗಳನ್ನು ನೀಡುತ್ತಾ ತಮ್ಮ ಜನಪ್ರಿಯತೆ ಹೆಚ್ಚು ಮಾಡಿಕೊಳ್ಳುತ್ತಲೇ ಇರುವ ಡಾಗ್ ಸತೀಶ್ ಅವರನ್ನು ಇದೇ ಸೀಸನ್ಗೆ ಅತಿಥಿಯಾಗಿ ಹೋಗಿ ಕೆಲ ವಾರ ಇದ್ದ ಹಾಗೂ ಈ ಹಿಂದಿನ ಸೀಸನ್ನಲ್ಲೂ ಶೋಗೆ ಹೋಗಿದ್ದ ರಜತ್ ಅವರು ಸಂದರ್ಶನ ಮಾಡಿದ್ದಾರೆ. ಈ ವೇಳೆ ಗಿಲ್ಲಿ ಬಗ್ಗೆ ಬಲು ತಾತ್ಸಾರವಾಗಿ, ನಿಂದನಾತ್ಮಕವಾಗಿ ಡಾಗ್ ಸತೀಶ್ ಮಾತನಾಡಿದ್ದಾರೆ.
ಗಿಲ್ಲಿ ಬಗ್ಗೆ ರಜತ್ ಕೇಳಿದಾಗ, ಗಿಲ್ಲಿಯನ್ನು ಕಳ್ಳ, ಸುಳ್ಳ, ಕೊಳಕ ಎಂದೆಲ್ಲ ಸತೀಶ್ ಹೇಳಿದ್ದಾರೆ. ಮನೆಯಲ್ಲಿ ಎಲ್ಲರನ್ನೂ ಕಂಡಮ್ ಮಾಡುತ್ತಿದ್ದ, ಕೆಟ್ಟದಾಗಿ ಮಾತನಾಡುತ್ತಿದ್ದ, ಚೀಪ್ ಆಡಿಕೊಂಡು ನಗುತ್ತಿದ್ದ. ಆದರೆ ಯಾರಿಗೂ ಅವನೆಂದರೆ ಇಷ್ಟ ಇಲ್ಲ. ಬಿಗ್ಬಾಸ್ ಮನೆಯಿಂದ ಹೊರಗೆ ಬಂದವರು ಅವನ ಜನಪ್ರಿಯತೆ ನೋಡಿ ಅವನ ಬಗ್ಗೆ ಮಾತನಾಡದೆ ಸುಮ್ಮನಾಗುತ್ತಿದ್ದಾರೆ. ಆದರೆ ನಾನು ಹಾಗಲ್ಲ, ನನಗೆ ಅನ್ನಿಸಿದ್ದು ನಾನು ಹೇಳುತ್ತೀನಿ, ಅವನೊಬ್ಬ ಕಳ್ಳ, ಸುಳ್ಳ, ಕೊಳಕ, ಅವನಿಂದಲೇ ನಾನು ಬಿಗ್ಬಾಸ್ ಮನೆಯಲ್ಲಿ ಸೈಲೆಂಟ್ ಆದೆ ಎಂದಿದ್ದಾರೆ ಡಾಗ್ ಸತೀಶ್.
ಇದನ್ನೂ ಓದಿ:ಬಿಗ್ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
‘ಬಿಗ್ಬಾಸ್ ಮನೆಯಲ್ಲಿ ನೀವು ಸಹ ಅವನಿಗೆ ಎದುರುತ್ತರ ಕೊಡಬೇಕಿತ್ತಲ್ಲ’ ಎಂಬ ಪ್ರಶ್ನೆಗೆ, ಡಾಗ್ ಸತೀಶ್, ‘ನಾನು ಸಾಕಷ್ಟು ಸಲ ಮಾತನಾಡಿದ್ದೀನಿ, ಅಶ್ಲೀಲ ಪದ ಬಳಸಿ ಬೈದಿದ್ದೀನಿ, ಒಮ್ಮೆ ಅಂತೂ ಹೊಡೆಯಲು ಸಹ ಹೋಗಿದ್ದೆ ಆದರೆ ಅದನ್ನೆಲ್ಲ ಕಟ್ ಮಾಡಿಬಿಟ್ಟಿದ್ದಾರೆ. ಅದು ಯಾವುದನ್ನೂ ತೋರಿಸಿಲ್ಲ. ಅವನು ಹೊರಗೆ ಬಂದ ಮೇಲೂ ಸಹ ಅವನ್ನು ಯಾವುದಕ್ಕೂ ನನ್ನ ಹತ್ತಿರ ಸಹ ಸೇರಿಸಲ್ಲ’ ಎಂದಿದ್ದಾರೆ ಡಾಗ್ ಸತೀಶ್.
ಗಿಲ್ಲಿ ಅಭಿಮಾನಿಗಳು ಈಗಾಗಲೇ ಡಾಗ್ ಸತೀಶ್ ಅನ್ನು ಸಖತ್ ಟ್ರೋಲ್ ಮಾಡುತ್ತಿದ್ದಾರೆ. ಗಿಲ್ಲಿ ಫಿನಾಲೆ ಎಂಟ್ರಿ ಆಗಿದ್ದು, ಒಂದೊಮ್ಮೆ ಗಿಲ್ಲಿ ಗೆದ್ದರೆ ಡಾಗ್ ಸತೀಶ್ ಇನ್ನಷ್ಟು ಟ್ರೋಲ್ ಆಗುವುದಂತೂ ಗ್ಯಾರೆಂಟಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Wed, 14 January 26




