ಸಖತ್​ ಬೇಡಿಕೆ ಇದ್ದರೂ ಸಮಂತಾ ಯಾಕಿನ್ನೂ ಬಾಲಿವುಡ್​ಗೆ ಕಾಲಿಟ್ಟಿಲ್ಲ? ನಾಗಾರ್ಜುನ ಸೊಸೆಗೆ ಕಾಡುತ್ತಿದೆ ಭಯ

Samantha Akkineni: ಹಿಂದಿ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಸಮಂತಾಗೆ ಖಂಡಿತವಾಗಿ ಇದೆ. ಯಾರ ಜೊತೆ ನಟಿಸಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ರಣಬೀರ್​ ಕಪೂರ್ ಹೆಸರನ್ನು ಹೇಳಿದ್ದಾರೆ ಸಮಂತಾ.

ಸಖತ್​ ಬೇಡಿಕೆ ಇದ್ದರೂ ಸಮಂತಾ ಯಾಕಿನ್ನೂ ಬಾಲಿವುಡ್​ಗೆ ಕಾಲಿಟ್ಟಿಲ್ಲ? ನಾಗಾರ್ಜುನ ಸೊಸೆಗೆ ಕಾಡುತ್ತಿದೆ ಭಯ
ಸಮಂತಾ ಅಕ್ಕಿನೇನಿ

Updated on: May 25, 2021 | 11:29 AM

ನಟಿ ಸಮಂತಾ ಅಕ್ಕಿನೇನಿ ಅವರು ದಕ್ಷಿಣ ಭಾರತದಲ್ಲಿ ಸ್ಟಾರ್​ ಕಲಾವಿದೆಯಾಗಿ ಮೆರೆಯುತ್ತಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ನಟ ನಾಗಚೈತನ್ಯ ಜೊತೆ ಮದುವೆ ಆದ ಬಳಿಕವೂ ಅವರು ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಮೊದಲಿಗಿಂತಲೂ ಒಳ್ಳೊಳ್ಳೆಯ ಪಾತ್ರಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈಗ ಅವರು ವೆಬ್​ ಸಿರೀಸ್​ ಲೋಕಕ್ಕೂ ಕಾಲಿಟ್ಟಿದ್ದಾರೆ. ಸಮಂತಾ ನಟನೆಯ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಜೂ.4ರಂದು ಅಮೇಜಾನ್​ ಪ್ರೈಮ್​ನಲ್ಲಿ ಪ್ರಸಾರ ಆಗಲಿದೆ. ಇಷ್ಟೆಲ್ಲ ಚಾರ್ಮ್​ ಇರುವ ಸಮಂತಾ ಇನ್ನೂ ಯಾಕೆ ಬಾಲಿವುಡ್​ ಕದ ತಟ್ಟಿಲ್ಲ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಮನೋಜ್ ಬಾಜಪೇಯ್​ ಜೊತೆ ನಟಿಸಿರುವ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ ಪ್ರಚಾರದ ಸಲುವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಸಮಂತಾ ಮಾತನಾಡಿದ್ದಾರೆ. ತಾವು ಈವರೆಗೂ ಬಾಲಿವುಡ್​ಗೆ ಕಾಲಿಡದೇ ಇರಲು ಒಂದು ಭಯವೇ ಕಾರಣ ಎಂದು ಅವರು ಹೇಳಿದ್ದಾರೆ. ‘ಬಾಲಿವುಡ್​ನಲ್ಲಿ ತುಂಬ ಪ್ರತಿಭಾವಂತ ಕಲಾವಿದರಿದ್ದಾರೆ. ಹಾಗಾಗಿ ನನಗೆ ಹೆದರಿಕೆ ಆಗುತ್ತದೆ’ ಎಂದು ಅವರು ಹೇಳಿರುವುದು ಅಚ್ಚರಿ ಮೂಡಿಸಿದೆ.

ಹಿಂದಿ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ಸಮಂತಾಗೆ ಖಂಡಿತವಾಗಿ ಇದೆ. ಯಾರ ಜೊತೆ ನಟಿಸಲು ಬಯಸುತ್ತೀರಿ ಎಂದು ಕೇಳಿದ್ದಕ್ಕೆ ರಣಬೀರ್​ ಕಪೂರ್ ಹೆಸರನ್ನು ಹೇಳಿದ್ದಾರೆ ಸಮಂತಾ. ಆದಷ್ಟು ಬೇಗ ಅವರು ಹಿಂದಿ ಸಿನಿಮಾದಲ್ಲಿ ನಟಿಸುವಂತಾಗಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.

ಈಗ ‘ದಿ ಫ್ಯಾಮಿಲಿ ಮ್ಯಾನ್​ 2’ ಮೂಲಕ ಹಿಂದಿ ಪ್ರೇಕ್ಷಕರಿಗೆ ಸಮಂತಾ ಹತ್ತಿರ ಆಗುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್​ ಕಂಡು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿದೆ. ರಾಜ್​ ಮತ್ತು ಡಿಕೆ ಈ ವೆಬ್​ ಸಿರೀಸ್​ಗೆ ನಿರ್ದೇಶನ ಮಾಡಿದ್ದಾರೆ. ಉಗ್ರಗಾಮಿ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿರುವುದು ವಿಶೇಷ. ಇದರಲ್ಲಿ ತಮಿಳರನ್ನು ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ ಎಂಬ ಕಾರಣಕ್ಕೆ ತಮಿಳುನಾಡಿನಾದ್ಯಂತ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಬ್ಯಾನ್​ ಮಾಡಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ.

ಇದನ್ನೂ ಓದಿ:

ತೆರೆಮೇಲೆ ಒಂದಾಗುತ್ತಿದ್ದಾರೆ ಗಂಡ-ಹೆಂಡತಿ; ಶೀಘ್ರವೇ ಸೆಟ್ಟೇರಲಿದೆ ನಾಗಚೈತನ್ಯ-ಸಮಂತಾ ಸಿನಿಮಾ?

ತಮಿಳರ ಕೋಪಕ್ಕೆ ಕಾರಣವಾದ ಸಮಂತಾ; ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​​ನಲ್ಲಿ ಅವರು ಮಾಡಿದ ತಪ್ಪೇನು?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us