ಅನೇಕ ಕಾರಣಗಳಿಂದಾಗಿ ‘ದಿ ಕೇರಳ ಸ್ಟೋರಿ’ ಸಿನಿಮಾ (The Kerala Story) ವಿವಾದ ಸೃಷ್ಟಿ ಮಾಡಿದೆ. ಹಿಂದೂಪರ ಸಂಘಟನೆಗಳು ಈ ಚಿತ್ರಕ್ಕೆ ಬೆಂಬಲ ಸೂಚಿಸಿವೆ. ಆದರೆ ಇದೊಂದು ಪ್ರೊಪೊಗಾಂಡ ಸಿನಿಮಾ ಎಂದು ಅನೇಕರು ಟೀಕಿಸಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ನೂರಾರು ಕೋಟಿ ರೂಪಾಯಿ ಗಳಿಸಿದೆ. ‘ದಿ ಕೇರಳ ಸ್ಟೋರಿ’ ಚಿತ್ರದ ಬಗ್ಗೆ ಕೊಲ್ಲೂರಿನಲ್ಲಿ ಪ್ರಚಾರ ಮಾಡಲಾಗುತ್ತಿದೆ. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ (Kollur Mookambika Temple) ಆವರಣದಲ್ಲಿ ಈ ಚಿತ್ರಕ್ಕೆ ಸಂಬಂಧಿಸಿದ ಬ್ಯಾನರ್ ಇರಿಸಲಾಗಿದೆ. ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಯಲ್ಲಿ ಬರೆದಿರುವ ಬ್ಯಾನರ್ಗಳನ್ನು ಇರಿಸಲಾಗಿದ್ದು, ಕೊಲ್ಲೂರಿಗೆ (Kollur) ಬರುವ ಪ್ರವಾಸಿಗರ ಗಮನ ಸೆಳೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಬ್ಯಾನರ್ಗಳು ವೈರಲ್ ಆಗಿವೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಪ್ರತಿದಿನ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಅದರಲ್ಲೂ ಕೇರಳದಿಂದ ಅನೇಕರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಮಲಯಾಳಿಗಳನ್ನೇ ಉದ್ದೇಶಿಸಿ ಈ ಬ್ಯಾನರ್ಗಳನ್ನು ಬರೆಸಲಾಗಿದೆ. ‘ನಿಮ್ಮ ಮುಂದಿನ ಜನಾಂಗ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬರಬೇಕೆಂದರೆ ಕೇರಳ ಸ್ಟೋರಿ ನೋಡಿ’ ಎಂದು ಇದರಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: Adah Sharma: ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾಗೆ ಅಪಘಾತ; ನಿರ್ದೇಶಕನಿಗೂ ಗಾಯ
ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಮೂಕಾಂಬಿಕಾ ದೇವಾಲಯದ ದ್ವಾರ ಹಾಗೂ ಆವರಣದಲ್ಲಿ ಬ್ಯಾನರ್ ಅಳವಡಿಸಿದ್ದಾರೆ. ವಿನೋದ್ ಕೊಲ್ಲೂರು, ವಿಜಯ ಬಳಗಾರ್, ಸಂತೋಷ್ ಭಟ್, ಪ್ರಕಾಶ್ ಹಳ್ಳಿ ಬೇರು, ಹರೀಶ್ ಶೆಟ್ಟಿ ನೇತೃತ್ವದಲ್ಲಿ ಈ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ಕೇರಳದಲ್ಲಿ ನಡೆದಿತ್ತು ಎನ್ನಲಾದ ಮತಾಂತರ ಮತ್ತು ಲವ್ ಜಿಹಾದ್ ಘಟನೆಗಳನ್ನು ಆಧರಿಸಿ ‘ದಿ ಕೇರಳ ಸ್ಟೋರಿ’ ಸಿನಿಮಾ ಮಾಡಲಾಗಿದೆ. ಟೀಸರ್ ಬಿಡುಗಡೆ ಆದಾಗಲೇ ಈ ಚಿತ್ರ ವಿವಾದ ಸೃಷ್ಟಿ ಮಾಡಿತ್ತು.
ಇದನ್ನೂ ಓದಿ: The Kerala Story: 136 ಕೋಟಿ ರೂಪಾಯಿಗೆ ಏರಿತು ‘ದಿ ಕೇರಳ ಸ್ಟೋರಿ’ ಕಲೆಕ್ಷನ್; 2ನೇ ಭಾನುವಾರ ಬರೋಬ್ಬರಿ 23 ಕೋಟಿ ರೂ. ಗಳಿಕೆ
‘ದಿ ಕೇರಳ ಸ್ಟೋರಿ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾದ ಬಾಕ್ಸ್ ಆಫೀಸ್ ಬೇಟೆ ಮುಂದುವರಿದಿದೆ. ಸತತ 11 ದಿನಗಳ ಕಾಲ ಈ ಚಿತ್ರ ಯಶಸ್ವಿ ಪ್ರದರ್ಶನ ಕಂಡಿದೆ. ಇಂದಿಗೂ ಕೂಡ ಹಲವು ಕಡೆಗಳಲ್ಲಿ ಹೌಸ್ಫುಲ್ ಆಗುತ್ತಿದೆ. ಅದರ ಪರಿಣಾಮವಾಗಿ ಚಿತ್ರಕ್ಕೆ ಉತ್ತಮ ಕಮಾಯಿ ಆಗಿದೆ. ಅಚ್ಚರಿ ಎಂದರೆ 2ನೇ ಭಾನುವಾರ ಈ ಸಿನಿಮಾಗೆ ಅತಿ ಹೆಚ್ಚು ಹಣ ಹರಿದುಬಂದಿದೆ. ಮೇ 14ರಂದು ಬರೋಬ್ಬರಿ 23 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ ಚಿತ್ರದ ಒಟ್ಟು ಕಲೆಕ್ಷನ್ 136.74 ಕೋಟಿ ರೂಪಾಯಿ ತಲುಪಿದೆ. ನಟಿ ಅದಾ ಶರ್ಮಾ ಅವರು ಈ ಸಿನಿಮಾದಿಂದ ಭಾರಿ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.