10 ವರ್ಷ ಪ್ರೀತಿಸಿ, ಬಳಿಕ ಮದುವೆ ಆಗಿ ನಂತರ ನಾಲ್ಕೇ ವರ್ಷಗಳಲ್ಲಿ ಸಂಬಂಧ ಮುರಿದು ಬೀಳುತ್ತದೆ ಎಂದರೆ ಅದು ತುಂಬಾನೇ ನೋವಿನ ಸಂಗತಿ. ಸಮಂತಾ ಅಕ್ಕಿನೇನಿ ಈಗ ಹೀಗೊಂದು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಅನೇಕರು ಅವರ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ. ಸಮಂತಾ ಬಗ್ಗೆ ಹುಟ್ಟಿಕೊಂಡ ವದಂತಿಗಳು ಒಂದೆರಡಲ್ಲ. ಕೆಲ ಯೂಟ್ಯೂಬ್ ಚಾನೆಲ್ಗಳು ಈ ಬಗ್ಗೆ ಇಲ್ಲಸಲ್ಲದ ವಿಚಾರವನ್ನು ಹಬ್ಬಿಸಿದ್ದಾರೆ. ಇದಕ್ಕೆ ಸಮಂತಾ ಅಕ್ಕಿನೇನಿ ಸ್ಪಷ್ಟನೆ ನೀಡಿದ್ದಾರೆ. ದುಃಖದ ಸಾಲುಗಳನ್ನು ಅವರು ಬರೆದುಕೊಂಡಿದ್ದಾರೆ.
ಸಮಂತಾಗೆ ಮಕ್ಕಳನ್ನು ಮಾಡಿಕೊಳ್ಳಲು ಇಷ್ಟವಿರಲಿಲ್ಲ, ಅವರು ಬೇರೆ ಸಂಬಂಧ ಇಟ್ಟುಕೊಂಡಿದ್ದರು, ಅಬಾರ್ಷನ್ಗೆ ಒಳಗಾಗಿದ್ದರು.. ಹೀಗೆ ಸಾಲು ಸಾಲು ವದಂತಿಗಳು ಹುಟ್ಟಿಕೊಳ್ಳುತ್ತಲೇ ಇವೆ. ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದು ಒಂದು ವಾರ ಆಗುತ್ತಾ ಬಂದಿದೆ. ಇಲ್ಲಿಯವರೆಗೆ ಈ ವದಂತಿಗಳ ಬಗ್ಗೆ ಅವರು ಮೌನ ವಹಿಸಿದ್ದರು. ಆದರೆ, ಈಗ ಅವರಿಂದ ಇದನ್ನು ಸಹಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ ಸಮಂತಾ ಈ ಬಗ್ಗೆ ಮೌನ ಮುರಿದಿದ್ದಾರೆ.
‘ನನ್ನ ವೈಯಕ್ತಿಕ ವಿಚಾರಕ್ಕೆ ನೀವು ಸ್ಪಂದಿಸಿರುವುದು ಖುಷಿ ನೀಡಿದೆ. ವದಂತಿಗಳ ವಿಚಾರದಲ್ಲಿ ನೀವು ನನ್ನ ಪರವಾಗಿ ನಿಂತಿರುವುದಕ್ಕೆ ಧನ್ಯವಾದಗಳು. ನನಗೆ ಬೇರೆ ಸಂಬಂಧವಿದೆ, ನಾನು ಮಕ್ಕಳನ್ನು ಪಡೆಯಲು ಬಯಸಲಿಲ್ಲ, ನಾನು ಅವಕಾಶವಾದಿ ಮತ್ತು ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎನ್ನುವ ಸುದ್ದಿ ಹರಿದಾಡುತ್ತಿದೆ. ವಿಚ್ಛೇದನ ಎನ್ನುವುದು ನೋವಿನ ಪ್ರಕ್ರಿಯೆ. ಇದು ಗುಣವಾಗಲು ಸಮಯ ನೀಡಿ. ಆದರೆ ನಾನು ಒಂದು ಪ್ರಾಮಿಸ್ ಮಾಡುತ್ತೇನೆ. ಈ ರೀತಿಯ ದಾಳಿಯಿಂಧ ನನ್ನನ್ನು ಮುರಿಯಲು ಸಾಧ್ಯವಿಲ್ಲ’ ಎಂದು ಸಮಂತಾ ಬರೆದುಕೊಂಡಿದ್ದಾರೆ.
ವಿಚ್ಛೇದನದ ನಂತರ ಸಮಂತಾ ಸಾಕಷ್ಟು ಅರ್ಥಪೂರ್ಣ ಸಾಲುಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಪ್ರತಿ ಸಾಲುಗಳಿಗೂ ನಾನಾ ಅರ್ಥಗಳು ಬರುವ ರೀತಿಯಲ್ಲಿದೆ. ಈಗ ಸಮಂತಾ ಹೊಸ ಸ್ಟೇಟಸ್ ಹಾಕಿದ್ದಾರೆ. ಈ ಸ್ಟೇಟಸ್ ನೋಡಿ ಸಾಕಷ್ಟು ರೀತಿಯಲ್ಲಿ ಅರ್ಥೈಸಲಾಗುತ್ತಿದೆ.
‘ಮಹಿಳೆಯರು ಏನೇ ಮಾಡಿದರೂ ಅದನ್ನು ನೈತಿಕವಾಗಿ ಪ್ರಶ್ನೆ ಮಾಡಲಾಗುತ್ತದೆ. ಆದರೆ, ಪುರುಷರು ಏನಾದರೂ ಮಾಡಿದಾಗ ಅದನ್ನು ನೈತಿಕ ಪ್ರಶ್ನೆ ಮಾಡುವುದಿಲ್ಲ ಎಂದಾದರೆ, ಅಂಥ ಸಮಾಜಕ್ಕೆ ನೈತಿಕತೆ ಇಲ್ಲ’ ಎನ್ನುವ ಸಾಲುಗಳನ್ನು ಸಮಂತಾ ಹಾಕಿದ್ದಾರೆ. ಸಮಾಜದಲ್ಲಿ ಪುರುಷರು ತಪ್ಪು ಮಾಡಿದಾಗ ಒಂದು ರೀತಿಯಲ್ಲಿ ನೋಡಿದರೆ, ಮಹಿಳೆಯರು ತಪ್ಪು ಮಾಡಿದಾಗ ಮತ್ತೊಂದು ರೀತಿಯಲ್ಲಿ ನೋಡಲಾಗುತ್ತದೆ. ಇದು ತಪ್ಪು ಎನ್ನುವುದನ್ನು ಸಮಂತಾ ಹೇಳ ಹೊರಟಿದ್ದಾರೆ. ಇನ್ನೂ ಕೆಲವರು, ಈ ಸಾಲುಗಳಿಗೆ ಸಮಂತಾ ಅವರ ವಿಚ್ಛೇದನ ಪ್ರಕರಣವನ್ನು ತಾಳೆ ಮಾಡಿ ನೋಡುತ್ತಿದ್ದಾರೆ.
ಇದನ್ನೂ ಓದಿ: ‘ಮಹಿಳೆಯರನ್ನು ಮಾತ್ರ ಪ್ರಶ್ನೆ ಮಾಡುವ ನಮ್ಮ ಸಮಾಜಕ್ಕೆ ನೈತಿಕತೆ ಇಲ್ಲ’; ಸಿಟ್ಟಾದ ಸಮಂತಾ