ಕೋರ್ಟ್ ಆದೇಶದ ಬೆನ್ನಲ್ಲೆ ಬೆಂಗಳೂರಿನಲ್ಲಿ ಲೂಟಿಗಿಳಿದ ‘ಓಜಿ’, ಟಿಕೆಟ್ ಬೆಲೆ ಗಗನಕ್ಕೆ
OG Movie ticket price: ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಏಕರೂಪ ಟಿಕೆಟ್ ದರ ನಿಗದಿಪಡಿಸಿ ಕರ್ನಾಟಕ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಬೆನ್ನಲ್ಲೆ ‘ಓಜಿ’ ಸಿನಿಮಾ ತಂಡ ಬೆಂಗಳೂರಿನಲ್ಲಿ ಲೂಟಿಗಿಳಿದಂತೆ ಟಿಕೆಟ್ ದರಗಳನ್ನು ಏರಿಸಿದೆ.

ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿ ಮಾಡಿ ಸರ್ಕಾರದ ಆದೇಶಕ್ಕೆ ಹೈಕೋರ್ಟ್ (High Court) ಮಧ್ಯಂತರ ತಡೆ ನೀಡಿದೆ. ಎಲ್ಲ ಸಿನಿಮಾಗಳಿಗೂ, ಎಲ್ಲ ಚಿತ್ರಮಂದಿರಗಳಲ್ಲಿಯೂ 200 ರೂಪಾಯಿ ಮೀರದಂತೆ ಟಿಕೆಟ್ ದರ ಇರಬೇಕು ಎಂಬ ಜನಪರ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿತ್ತು, ಆದರೆ ಹೊಂಬಾಳೆ ಫಿಲಮ್ಸ್ ಸೇರಿದಂತೆ ಕೆಲ ‘ದೊಡ್ಡ’ ನಿರ್ಮಾಣ ಸಂಸ್ಥೆಗಳು ನ್ಯಾಯಾಲಯಕ್ಕೆ ಹೋಗಿ ಸರ್ಕಾರದ ಆದೇಶಕ್ಕೆ ತಡೆ ತಂದವು. ಅದರ ಬಿಸಿ ಇದೀಗ ಜನರಿಗೆ ಈಗ ತಟ್ಟುತ್ತಿದೆ. ಪವನ್ ಕಲ್ಯಾಣ್ ನಟನೆಯ ‘ಓಜಿ’ ಸಿನಿಮಾ ನಾಳೆ ಬಿಡುಗಡೆ ಆಗಲಿದ್ದು, ಬೆಂಗಳೂರಿನಲ್ಲಿ ಟಿಕೆಟ್ ದರವನ್ನು ಏರಿಸಲಾಗಿದೆ.
‘ಓಜಿ’ ಸಿನಿಮಾದ ಟಿಕೆಟ್ ದರ ಬೆಂಗಳೂರಿನಲ್ಲಂತೂ ಗಗನಕ್ಕೆ ಮುಟ್ಟಿದೆ. ಇಂದು (ಸೆಪ್ಟೆಂಬರ್ 24) ಹಲವೆಡೆ ಪ್ರೀಮಿಯರ್ ಶೋಗಳನ್ನು ಇರಿಸಲಾಗಿದ್ದು, ಪ್ರೀಮಿಯರ್ ಶೋ ಟಿಕೆಟ್ ದರಗಳು ಬಹಳ ಹೆಚ್ಚಿವೆ. ಪ್ರೀಮಿಯರ್ ಶೋ ಮಲ್ಟಿಪ್ಲೆಕ್ಸ್ಗಳಲ್ಲಿ 750 ರಿಂದ 900 ವರೆಗೆ ಇದೆ. ಅದರಲ್ಲೂ ಬುಕ್ಮೈಶೋ ನಲ್ಲಿ ಬುಕ್ ಮಾಡಿದರೆ ಪ್ರತಿ ಟಿಕೆಟ್ಗೆ ಸುಮಾರು 50 ರೂಪಾಯಿ ಹೆಚ್ಚುವರಿ ದರ ನೀಡಬೇಕಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್ ದರ ಕಡಿಮೆ ಏನಿಲ್ಲ. ಅಲ್ಲೂ ಸಹ 500 ರೂಪಾಯಿ ಪ್ರತಿ ಟಿಕೆಟ್ಗೆ ಬೆಲೆ ನಿಗದಿ ಪಡಿಸಲಾಗಿದೆ.
ಇದನ್ನೂ ಓದಿ:‘ಓಜಿ’ ಸಿನಿಮಾ ಟ್ರೇಲರ್ ಈವೆಂಟ್ನಲ್ಲಿ ಮಳೆಯಲ್ಲಿ ನೆನೆದು ಹಾಸಿಗೆ ಹಿಡಿದ ಪವನ್ ಕಲ್ಯಾಣ್
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರೆ ಕಡೆಗಳಲ್ಲಿಯೂ ಸಹ ವಿಶೇಷವಾಗಿ ತೆಲುಗು ಪ್ರಭಾವ ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಿನಿಮಾದ ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದು, ಅಲ್ಲಿಯೂ ಸಹ ಭಾರಿ ಟಿಕೆಟ್ ದರವನ್ನೇ ಇರಿಸಲಾಗಿದೆ. ದೊಡ್ಡಬಳ್ಳಾಪುರದಂಥಹಾ ನಗರದಲ್ಲಿ ಪ್ರೀಮಿಯರ್ ಶೋ ಟಿಕೆಟ್ ದರ 400 ಹಾಗೂ 500 ರೂಪಾಯಿಗಳಿದೆ.
ಇನ್ನು ನಾಳೆಯ (ಸೆಪ್ಟೆಂಬರ್ 25) ಶೋಗಳಿಗೂ ಸಹ ಟಿಕೆಟ್ ದರಗಳು ಕಡಿಮೆ ಏನಿಲ್ಲ. ಬೆಲೆ ಕಡಿಮೆ ಏನಿಲ್ಲ. ಬೆಂಗಳೂರಿನಲ್ಲಿ ಗುರುವಾದ ಶೋಗಳಿಗೆ ಟಿಕೆಟ್ ಬೆಲೆ ಸರಾಸರಿ 400 ರೂಪಾಯಿಗಳಿಗಿಂತಲೂ ಹೆಚ್ಚಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ 390 ರಿಂದ 900 ರವರೆಗೂ ಟಿಕೆಟ್ ದರ ನಿಗದಿಪಡಿಸಲಾಗಿದೆ. ಬೆಂಗಳೂರಿನ ಯಾವ ಮಲ್ಟಿಪ್ಲೆಕ್ಸ್ಗಳಲ್ಲಿಯೂ 350 ಕ್ಕಿಂತಲೂ ಕಡಿಮೆ ಟಿಕೆಟ್ ದರ ಇಲ್ಲವೇ ಇಲ್ಲ.
ಆದರೆ ನಾಳಿನ ಶೋಗೆ ಬೆಂಗಳೂರಿನ ಕೆಲ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 200 ರೂಪಾಯಿ ಟಿಕೆಟ್ ನಿಗದಿಪಡಿಸಲಾಗಿದೆ. ಜಿಎಸ್ಟಿ ಕಡಿಮೆ ಆಗಿರುವುದರಿಂದ ಟಿಕೆಟ್ ಬೆಲೆಗಳು ಅದರಲ್ಲೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ತುಸು ಕಡಿಮೆ ಇದೆ.
‘ಓಜಿ’ ಸಿನಿಮಾವನ್ನು ಸುಜಿತ್ ನಿರ್ದೇಶನ ಮಾಡಿದ್ದು, ಪವನ್ ಕಲ್ಯಾಣ್ ನಟಿಸಿದ್ದಾರೆ. ಸಿನಿಮಾನಲ್ಲಿ ಬಾಲಿವುಡ್ ನಟ ಇಮ್ರಾನ್ ಹಾಶ್ಮಿ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾಕ್ಕೆ ಎಸ್ ತಮನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




