ಸಾಹಿತಿ ಎಸ್ಎಲ್ ಭೈರಪ್ಪ ಜೊತೆಗಿನ ಒಡನಾಟ ನೆನೆದ ಟಿಎನ್ ಸೀತಾರಾಮ್
TN Seetharam about SL Bhyrappa: ಖ್ಯಾತ ಕಾದಂಬರಿಕಾರ ಎಸ್ಎಲ್ ಭೈರಪ್ಪನವರು ಇಂದು (ಸೆಪ್ಟೆಂಬರ್ 24) ನಿಧನ ಹೊಂದಿದ್ದಾರೆ. ಅವರ ಹಲವು ಕಾದಂಬರಿಗಳು ಸಿನಿಮಾ ಮತ್ತು ಧಾರಾವಾಹಿಗಳಾಗಿವೆ. ಅವರ ಕಾದಂಬರಿಯನ್ನು ಸಿನಿಮಾ ಮಾಡಿದವರಲ್ಲಿ ನಿರ್ದೇಶಕ ಟಿಎನ್ ಸೀತಾರಾಮ್ ಸಹ ಒಬ್ಬರು. ಭೈರಪ್ಪನವರ ಜೊತೆಗಿನ ಒಡನಾಟದ ಬಗ್ಗೆ ಸೀತಾರಾಮ್ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಪದ್ಮಭೂಷಣ ಪುರಸ್ಕೃತ, ಖ್ಯಾತ ಕಾದಂಬರಿಕಾರ ಎಸ್ಎಲ್ ಭೈರಪ್ಪ ಅವರು ಇಂದು (ಸೆಪ್ಟೆಂಬರ್ 24) ನಿಧನ ಹೊಂದಿದ್ದಾರೆ. ಎಸ್ಎಲ್ ಭೈರಪ್ಪನವರು ತಮ್ಮ ಕಾದಂಬರಿಗಳಿಂದ ರಾಜ್ಯ, ದೇಶ, ವಿದೇಶಗಳ ಓದುಗರನ್ನು ಸಾಹಿತ್ಯದೆಡೆಗೆ ಸೆಳೆದಿದ್ದಾರೆ. ಭೈರಪ್ಪ ಅವರ ಹಲವು ಕಾದಂಬರಿಗಳು ಸಿನಿಮಾ, ಧಾರಾವಾಹಿ ಹಾಗೂ ನಾಟಕಗಳಾಗಿವೆ. ಖ್ಯಾತನಾಮ ನಿರ್ದೇಶಕರುಗಳು ಭೈರಪ್ಪ ಅವರ ಕಾದಂಬರಿಗಳನ್ನು ದೃಶ್ಯ ರೂಪಕ್ಕೆ ತಂದಿದ್ದಾರೆ. ಅವರಲ್ಲಿ ನಿರ್ದೇಶಕ ಟಿಎನ್ ಸೀತಾರಾಮ್ ಸಹ ಒಬ್ಬರು. ಭೈರಪ್ಪನವರ ‘ಮತದಾನ’ ಕಾದಂಬರಿಯನ್ನು ಅವರು ಅದೇ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಸಿನಿಮಾಕ್ಕೆ ರಾಷ್ಟ್ರ್ರಶಸ್ತಿ ಸಹ ಲಭಿಸಿತ್ತು. ಭೈರಪ್ಪನವರೊಂದಿಗಿನ ಒಡನಾಟದ ಬಗ್ಗೆ ಸೀತಾರಾಮ್ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ.
‘ನನಗೆ ಭೈರಪ್ಪನವರು ಮೊದಲಿಗೆ ಪರಿಚಯವಾಗಿದ್ದು ಅವರ ಕಾದಂಬರಿಗಳ ಮೂಲಕ. ‘ನಾಯಿ ನೆರಳು’ ಬಹುಷಃ ನಾನು ಓದಿದ ಮೊದಲ ಭೈರಪ್ಪನವರ ಕಾದಂಬರಿ. ನನ್ನ ಸಹೋದರಿ ಮೊದಲು ಓದಿ ನನಗೂ ಓದುವಂತೆ ಹೇಳಿದರು. ಆಗ ನಾನು ನಾಯಿ-ನೆರಳು ಓದಿದೆ. ಅದಾದ ಬಳಿಕ ಭೈರಪ್ಪನವರ ಹಲವಾರು ಕಾದಂಬರಿಗಳನ್ನು, ಹಲವಾರು ಬಾರಿ ಓದಿದೆ. ಓದುತ್ತಲೇ ಬಂದಿದ್ದೀನಿ’ ಎಂದರು.
‘ಮತದಾನ’ ಸಿನಿಮಾ ಆದ ಬಗೆಯನ್ನು ವಿವರಿಸಿದ ಸೀತಾರಾಮ್, ‘ನಾನು ‘ಮತದಾನ’ ಕತೆಯನ್ನು ಸಿನಿಮಾ ಮಾಡಲು ಮುಂದಾದಾಗ ಅವರಿಗೆ ಮೊದಲು ಫೋನ್ ಮಾಡಿದೆ. ಆಗ ಅವರು ನೀವು ಏನು ಮಾಡಿದ್ದೀರಿ ಎಂದು ಕೇಳಿದರು. ಆಗ ನಾನು ‘ಮಾಯಾಮೃಗ’ ಮಾಡಿದ್ದಾಗಿ ಹೇಳಿದೆ. ಕೂಡಲೇ ಅವರಿಗೆ ನೆನಪಿಗೆ ಬಂದು, ಖಂಡಿತ ನಿಮಗೆ ಸಿನಿಮಾ ಮಾಡಲು ಹಕ್ಕು ಕೊಡುವುದಾಗಿ ಹೇಳಿ, ಮನೆಗೆ ಆಹ್ವಾನಿಸಿದರು’ ಎಂದು ನೆನಪು ಮಾಡಿಕೊಂಡರು.
‘ಮೈಸೂರಿನ ಅವರ ಮನೆಗೆ ಹೋಗಿ ಮಾತುಕತೆ ಆಡಿದೆ. ಹಾಮಾ ನಾಯಕರು ಸಹ ಇದ್ದರು. ಕಾದಂಬರಿಯಲ್ಲಿ ಕತೆ 1950ರ ದಶಕದ ಕತೆಯಾಗಿತ್ತು, ನಾನು ಅದನ್ನು 70ರ ದಶಕದ ಕತೆ ಮಾಡಿಕೊಳ್ಳಲೇ ಎಂದು ಅನುಮತಿ ಕೇಳಿದ್ದೆ. ನಾನು ನಿಮಗೆ ಹಕ್ಕು ಕೊಟ್ಟಮೇಲೆ ಆ ಕತೆ ನಿಮ್ಮದು, ಕತೆಯ ಮೂಲ ಉದ್ದೇಶಕ್ಕೆ ಮುಕ್ಕು ಬರದಂತೆ ಬದಲಾವಣೆ ಮಾಡಿಕೊಳ್ಳಿ, ನೀವು ಕತೆಯ ಉದ್ದೇಶಕ್ಕೆ ಧಕ್ಕೆ ಮಾಡಲಾರಿರಿ ಎಂಬ ವಿಶ್ವಾಸ ನನಗೆ ಇದೆ’ ಎಂದು ಹೇಳಿದ್ದನ್ನು ಸೀತಾರಾಮ್ ನೆನಪು ಮಾಡಿಕೊಂಡರು.
ಇದನ್ನೂ ಓದಿ:ಸಾಹಿತ್ಯ ಲೋಕದ ಮಾಣಿಕ್ಯ,ಕನ್ನಡದ ಸರಸ್ವತಿ ಪುತ್ರ ಭೈರಪ್ಪ ಕಣ್ಮರೆ:ಕಾದಂಬರಿಗಳು ಅಜರಾಮರ
ಅದಾದ ಬಳಿಕ ‘ಮತದಾನ’ ಸಿನಿಮಾದ ಶೋ ಅನ್ನು ಕಾವೇರಿ ಚಿತ್ರಮಂದಿರದಲ್ಲಿ ಹಾಕಿದ್ದೆವು, ಸಿಎಂ ರಾಮಕೃಷ್ಣ ಹೆಗಡೆಯವರನ್ನು ಶೋಗೆ ಆಹ್ವಾನಿಸಿದ್ದೆ, ಭೈರಪ್ಪನವರೂ ಸಹ ಅಂದು ಸಿನಿಮಾ ನೋಡಿದರು. ಚೆನ್ನಾಗಿದೆ ಎಂದರು. ಆ ಬಳಿಕ ಅವರ ಕೆಲವು ಗೆಳೆಯರೊಡನೆ ಮೈಸೂರಿನಲ್ಲಿ ಸಿನಿಮಾ ನೋಡಿದರು. ಸ್ವಲ್ಪ ಬದಲಾವಣೆ ಮಾಡಿದ್ದೀರಿ, ಆದರೂ ಪರವಾಗಿಲ್ಲ ಚೆನ್ನಾಗಿದೆ ಎಂದು ಶ್ಲಾಘಿಸಿದರೆಂದು ಸೀತಾರಾಮ್ ಸ್ಮರಿಸಿದರು.
‘ಅವರ ವಂಶವೃಕ್ಷ ಕಾದಂಬರಿಯನ್ನು ಧಾರಾವಾಹಿ ಮಾಡಿಕೊಡಬೇಕೆಂದು ಯಾರೋ ಕೇಳಿದ್ದರು. ಹಾಗಾಗಿ ನಾಲ್ಕೈದು ವರ್ಷಗಳ ಹಿಂದೆ ನಾನು ಮೈಸೂರಿಗೆ ಹೋಗಿ ಅವರನ್ನು ಭೇಟಿ ಆದೆ. ಆಗಲೂ ಸಹ ಅವರು ಖುಷಿಯಿಂದಲೇ ಕಾದಂಬರಿಯ ಹಕ್ಕುಗಳನ್ನು ಕೊಡುವುದಾಗಿ ಹೇಳಿದರು. ಆದರೆ ನಾನಾ ಕಾರಣಗಳಿಂದ ಆ ಧಾರಾವಾಹಿ ಮಾಡಲು ಆಗಲಿಲ್ಲ. ಅದೇ ನನ್ನ ಕೊನೆಯ ಭೇಟಿಯೂ ಆಯ್ತು’ ಎಂದಿದ್ದಾರೆ ಸೀತಾರಾಮ್.
‘ಭೈರಪ್ಪನವರು ಜೀವನದ ಕಟು ಮುಖವನ್ನು ಕಾದಂಬರಿಗಳ ಮೂಲಕ ತೆರೆದಿಡುತ್ತಿದ್ದರು. ಅವರ ಪಾತ್ರಗಳು ನಮ್ಮ ಸುತ್ತ ಮುತ್ತಲೇ ಇರುವ ಜನರ ಪ್ರತಿಬಿಂಬಗಳಾಗಿರುತ್ತಿತ್ತು. ಅವರ ಕತೆಗಳ ಗಟ್ಟಿತನ ಅದ್ಭುತವಾದುದು. ಅವರ ‘ಗೃಹಭಂಗ’, ‘ಪರ್ವ’, ‘ನಾಯಿ ನೆರಳು’ ಇನ್ನೂ ಹಲವು ಕಾದಂಬರಿಗಳನ್ನು ಹಲವಾರು ಬಾರಿ ನಾನು ಓದಿದ್ದೇನೆ. ಅವರು ಕಾದಂಬರಿಕಾರರಾಗಿ ಮಾತ್ರವಲ್ಲ ಒಬ್ಬ ಧೈರ್ಯವಂತ ಪ್ರಜೆಯಾಗಿಯೂ ನೆನಪಿನಲ್ಲಿರುತ್ತಾರೆ. ಸಾಮಾಜಿಕ ಘಟನಾವಳಿಗಳಿಗೆ ಅವರು ದಿಟ್ಟತನದಿಂದ ಸ್ಪಂದಿಸುತ್ತಿದ್ದರು’ ಎಂದಿದ್ದಾರೆ ಟಿಎನ್ ಸೀತಾರಾಮ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




