ಖ್ಯಾತ ನಟ ಮೋಹನ್ ಬಾಬು ಅವರ ಕುಟುಂಬದಲ್ಲಿ ಬಿರುಕು ಮೂಡಿದ್ದು, ಆ ಕುರಿತು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಅವರು ಕೋಪಗೊಂಡಿದ್ದರು. ವಿವಾದದ ಕುರಿತು ಪ್ರಶ್ನೆ ಕೇಳಿದ ಟಿವಿ9 ವರದಿಗಾರ ರಂಜಿತ್ ಕುಮಾರ್ ಮೇಲೆ ಮೋಹನ್ ಬಾಬು ಅವರು ಹಲ್ಲೆ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯಕ್ಕೆ ರಂಜಿತ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ತೆರಳಿ ರಂಜಿತ್ ಕುಮಾರ್ ಅವರ ಆರೋಗ್ಯವನ್ನು ಮೋಹನ್ ಬಾಬು ವಿಚಾರಿಸಿದ್ದಾರೆ. ಅಲ್ಲದೇ, ಅವರ ಬಳಿ ಕ್ಷಮೆ ಕೇಳಿದ್ದಾರೆ.
‘ಮೋಹನ್ ಬಾಬು ಅವರು ನನಗೆ, ನನ್ನ ಕುಟುಂಬಕ್ಕೆ ಹಾಗೂ ಇಡೀ ಪತ್ರಕರ್ತರ ಸಮೂಹಕ್ಕೆ ಕ್ಷಮೆ ಕೇಳಿದ್ದಾರೆ’ ಎಂದು ರಂಜಿತ್ ಹೇಳಿಕೆ ನೀಡಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಂಜಿತ್ ಗುಣಮುಖರಾಗಿ ರಿಸ್ಚಾರ್ಜ್ ಆದ ಬಳಿಕ ಮನೆಗೂ ಭೇಟಿ ನೀಡಿರುವುದಾಗಿ ಮೋಹನ್ ಬಾಬು ಹೇಳಿದ್ದಾರೆ ಎಂದು ವರದಿ ಆಗಿದೆ.
ಡಿಸೆಂಬರ್ 10ರಂದು ಮೋಹನ್ ಬಾಬು ಅವರ ಮನೆಯಲ್ಲಿ ಗಲಾಟೆ ಆಗಿತ್ತು. ಆಸ್ತಿ ವಿಚಾರವಾಗಿ ಅವರ ಪುತ್ರರಾದ ಮಂಜು ಮನೋಜ್ ಹಾಗೂ ಮಂಜು ವಿಷ್ಣು ನಡುವೆ ಜಟಾಪಟಿ ನಡೆದಿತ್ತು. ಮೋಹನ್ ಬಾಬು ಅವರು ಮಂಜು ವಿಷ್ಣು ಪರ ವಹಿಸಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ವರದಿ ಮಾಡಲು ತೆರಳಿದ್ದಾಗ ಮೋಹನ್ ಬಾಬು ಅವರು ಅಶ್ಲೀಲವಾಗಿ ಬೈಯ್ಯುತ್ತ ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ: ವರದಿಗಾರನ ಮೇಲೆ ಹಲ್ಲೆ: ಟಿವಿ9ಗೆ ಕ್ಷಮೆ ಕೇಳಿದ ನಟ ಮೋಹನ್ ಬಾಬು
ಮೋಹನ್ ಬಾಬು ಅವರು ಹಲ್ಲೆ ಮಾಡಿದ್ದನ್ನು ಖಂಡಿಸಿ, ಹೈದರಾಬಾದ್ನಲ್ಲಿ ಪತ್ರಕರ್ತರು ಪ್ರತಿಭಟನೆ ಮಾಡಿದ್ದರು. ಆ ಬಳಿಕ ಮೋಹನ್ ಬಾಬು ಅವರು ಕ್ಷಮೆಯಾಚಿಸಿ ಹೇಳಿಕೆ ಬಿಡುಗಡೆ ಮಾಡಿದ್ದರು. ಕೋಪದಲ್ಲಿ ತಾನು ಹಲ್ಲೆ ಮಾಡಿದ್ದಾಗಿ ಅವರು ವಿವಾಷ ವ್ಯಕ್ತಪಡಿಸಿದ್ದರು. ರಂಜಿತ್ ಕುಮಾರ್ ದೂರು ನೀಡಿದ ಬಳಿಕ ಮೋಹನ್ ಬಾಬು ವಿರುದ್ಧ ಕೊಲೆ ಪ್ರಯತ್ನದ ಕೇಸ್ ದಾಖಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.