ಮೋಹನ್ ಬಾಬು ಮ್ಯಾನೇಜರ್ ಬಂಧನ, ಹಿರಿಯ ನಟನಿಗೂ ಶುರು ಭೀತಿ
Mohan Babu: ತೆಲುಗು ಚಿತ್ರರಂಗದ ತಾರಾ ಕುಟುಂಬದಲ್ಲಿ ಒಂದಾದ ಮಂಚು ಕುಟುಂಬದ ವಿವಾದ ಬೀದಿಗೆ ಬಂದಿದೆ. ನಟ ಮಂಚು ಮನೋಜ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಹಿರಿಯ ನಟ ಮೋಹನ್ ಬಾಬು ಅವರ ಮ್ಯಾನೇಜರ್ ವೆಂಕಟ್ ಕಿರಣ್ ಅನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯ ನಟ ಮೋಹನ್ ಬಾಬು ಅವರ ಕುಟುಂಬ ಜಗಳ ಈಗ ಬೀದಿಗೆ ಬಂದಿದೆ. ಕಳೆದ ಕೆಲ ವರ್ಷಗಳಿಂದಲೂ ಮೋಹನ್ ಬಾಬು ಅವರ ಮಂಚು ಕುಟುಂಬದಲ್ಲಿ ಆಂತರಿಕ ಕಲಹಗಳು ಇದ್ದವು. ಮೋಹನ್ ಬಾಬು ಕೊನೆಯ ಪುತ್ರ ಮಂಚು ಮನೋಜ್ ಹಾಗೂ ಮಂಚು ವಿಷ್ಣು ನಡುವೆ ಭಿನ್ನಾಭಿಪ್ರಾಯಗಳು ಇದ್ದವು. ಕೆಲ ದಿನದ ಹಿಂದಷ್ಟೆ ಮಂಚು ಮನೋಜ್, ತಂದೆ ಮೋಹನ್ ಬಾಬು ವಿರುದ್ಧ ಹಲ್ಲೆ ಆರೋಪ ಮಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೋಹನ್ ಬಾಬು ಸಹ ಮಂಚು ಮನೋಜ್ ವಿರುದ್ಧ ಹಲ್ಲೆ ಆರೋಪ ಮಾಡಿ ದೂರು ನೀಡಿದ್ದರು. ಇದೀಗ ಮಂಚು ಮನೋಜ್ ದೂರು ಆಧರಿಸಿ ಮೋಹನ್ ಬಾಬು ಅವರ ಮ್ಯಾನೇಜರ್ ವೆಂಕಟ್ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನದ ಹಿಂದೆ ಹೈದರಾಬಾದ್ ಪೊಲೀಸರಿಗೆ ದೂರು ನೀಡಿದ್ದ ಮಂಚು ಮನೋಜ್, ತಮ್ಮದೇ ಮನೆಯಲ್ಲಿ (ಮೋಹನ್ ಬಾಬು ಮನೆ) ವೆಂಕಟ್ ಕಿರಣ್, ವಿಜಯ್ ಸೇರಿದಂತೆ ಇನ್ನೂ ಕೆಲವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು, ಕಿರಣ್ ಎಂಬಾತ ಮನೆಯಲ್ಲಿದ್ದ ಸಿಸಿಟಿವಿ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾನೆಂದು ಆರೋಪ ಮಾಡಿದ್ದರು. ಆ ಎಲ್ಲರೂ ತಮ್ಮ ತಂದೆಯ ಸೂಚನೆಯ ಮೇರೆಗೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಇದನ್ನೂ ಓದಿ:ಪ್ರಶ್ನೆ ಕೇಳಲು ಹೋದ ವರದಿಗಾರನ ಮೇಲೆ ನಟ ಮೋಹನ್ ಬಾಬು ಹಲ್ಲೆ
ದೂರಿನ ಅನ್ವಯ ಇದೀಗ ಪೊಲೀಸರು ವೆಂಕಟ್ ಕಿರಣ್ ಅನ್ನು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ. ಮಂಚು ಮನೋಜ್, ತಮ್ಮ ತಂದೆ ಮೋಹನ್ ಬಾಬು ವಿರುದ್ಧವೂ ದೂರು ದಾಖಲಿಸಿದ್ದು, ಪೊಲೀಸರು ಈಗಾಗಲೇ ಮೋಹನ್ ಬಾಬುಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ ಮೋಹನ್ ಬಾಬು ಆಸ್ಪತ್ರೆಗೆ ದಾಖಲಾಗಿದ್ದು, ವಿಚಾರಣೆಗೆ ಹಾಜರಾಗಿಲ್ಲ.
ಭಾನುವಾರ ಮೋಹನ್ ಬಾಬು ಮನೆಯಲ್ಲಿ ಹೈಡ್ರಾಮಾ ನಡೆದಿದೆ. ಮೋಹನ್ ಬಾಬು ಮನೆಗೆ ಮಂಚು ಮನೋಜ್ ನುಗ್ಗಲು ಯತ್ನಿಸಿದ್ದು, ಈ ಸಮಯದಲ್ಲಿ ಮನೋಜ್ ಅನ್ನು ಮೋಹನ್ ಬಾಬು ತಡೆದಿದ್ದಾರೆ. ಈ ವೇಳೆ ಮೋಹನ್ ಬಾಬು ಅವರಿಗೆ ಪ್ರಶ್ನೆ ಕೇಳಲು ಮುಂದಾದ ಟಿವಿ9 ವರದಿಗಾರನ ಮೇಲೆ ಮೋಹನ್ ಬಾಬು ಹಲ್ಲೆ ಮಾಡಿದ್ದಾರೆ. ಮೋಹನ್ ಬಾಬು ಹಲ್ಲೆ ಮಾಡಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮೋಹನ್ ಬಾಬು ಮನೆ ಎದುರು ತೆಲುಗು ಮಾಧ್ಯಮದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ