‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಮಾಡಿದ ಸ್ಯಾಂಡಲ್​ವುಡ್ ಗಣ್ಯರು

ಕನ್ನಡ ಚಿತ್ರರಂಗದ ಬಗ್ಗೆ ವಿಶೇಷ ಮಾಹಿತಿಗಳನ್ನು ತಿಳಿಸುವಂತಹ ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಆಗಿದೆ. ಕನ್ನಡ ಮತ್ತು ಇಂಗ್ಲಿಷ್​ನಲ್ಲಿ ಈ ಕೃತಿ ಮೂಡಿಬಂದಿದೆ. ಡಾ. ಶರಣು ಹುಲ್ಲೂರು ಮತ್ತು ಎಸ್​. ಶ್ಯಾಮ್ ಪ್ರಸಾದ್ ಅವರು ಈ ಪುಸ್ತಕ ಬರೆದಿದ್ದಾರೆ. ಸ್ಯಾಂಡಲ್​ವುಡ್​ ಗಣ್ಯರು ಕೃತಿ ಬಿಡುಗಡೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಮಾಡಿದ ಸ್ಯಾಂಡಲ್​ವುಡ್ ಗಣ್ಯರು
‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮ
Follow us
ಮದನ್​ ಕುಮಾರ್​
|

Updated on: Dec 15, 2024 | 6:31 PM

‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಪ್ರಕಟಿಸಿರುವ ‘ಚಂದನವನದ ಚಿಲುಮೆಗಳು’ (ಕನ್ನಡ), ‘Landmarks of Sandalwood’ (ಇಂಗ್ಲಿಷ್​) ಪುಸ್ತಕವನ್ನು ಇಂದು (ಡಿಸೆಂಬರ್​ 15) ಬಿಡುಗಡೆ ಮಾಡಲಾಯಿತು. ಬೆಂಗಳೂರಿನಲ್ಲಿ ಈ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಕನ್ನಡದಲ್ಲಿ ಡಾ. ಶರಣು ಹುಲ್ಲೂರು ಹಾಗೂ ಇಂಗ್ಲಿಷ್​ನಲ್ಲಿ ಎಸ್. ಶ್ಯಾಮ್ ಪ್ರಸಾದ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ, ಹಿರಿಯ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಟಿ.ಎಸ್. ನಾಗಾಭರಣ, ಖ್ಯಾತ ನಟ ಶ್ರೀಮುರಳಿ ಹಾಗೂ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಅವರು ದ್ವಿಭಾಷಾ ಪುಸ್ತಕವನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಡಾ. ಶರಣು ಹುಲ್ಲೂರು ಹಾಗೂ ಎಸ್. ಶ್ಯಾಮ್ ಪ್ರಸಾದ್ ಅವರು ಜೊತೆಯಾಗಿ ಆರೇಳು ತಿಂಗಳುಗಳ ಕಾಲ ಈ ಪುಸ್ತಕಕ್ಕಾಗಿ ಶ್ರಮಿಸಿದ್ದಾರೆ. ಈ ಲೇಖಕರನ್ನು ಹಂಸಲೇಖ ಅವರು ಶ್ಲಾಘಿಸಿದರು. ಈ ರೀತಿಯ ದಾಖಲೆಗಳು ಹೆಚ್ಚಾಗಲಿ ಎಂದು ಹಂಸಲೇಖ ಆಶಿಸಿದರು.

ಪುಸ್ತಕದ ವಿಶೇಷ:

ಕನ್ನಡ ಚಿತ್ರರಂಗ 90 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ‘ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ’ ಈ ಅಪರೂಪದ ಕಾಫಿ ಟೇಬಲ್ ಪುಸ್ತಕವನ್ನು ಹೊರತಂದಿದೆ. ಕನ್ನಡ ಚಿತ್ರರಂಗಕ್ಕೆ ತಿರುವು ನೀಡಿದ 90 ಸಿನಿಮಾಗಳ ಬಗ್ಗೆ ವಿಶೇಷ ದಾಖಲೆಗಳು ಹಾಗೂ ಅಪರೂಪದ ಫೋಟೋಗಳು ಈ ಪುಸ್ತಕದಲ್ಲಿ ಇದೆ. ಸ್ಯಾಂಡಲ್​ವುಡ್​ ಬಗ್ಗೆ ದ್ವಿಭಾಷೆಯಲ್ಲಿ ಪ್ರಕಟವಾದ ಕನ್ನಡದ ಮೊದಲ ಕಾಫಿ ಟೇಬಲ್ ಪುಸ್ತಕ ಇದು ಎಂಬುದು ವಿಶೇಷ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮಾತನಾಡಿ, ‘ಪುಸ್ತಕ ರೂಪದಲ್ಲಿ ಸಿನಿಮಾ ಕುರಿತಾದ ವಿಷಯಗಳು ಕನ್ನಡದಲ್ಲಿ ಬಹಳ ವಿರಳ. ದಾಖಲೀಕರಣವೂ ಇಲ್ಲ. ಅದು ಕನ್ನಡದಲ್ಲಿ ಹೆಚ್ಚಾಗಲಿ’ ಎಂದು ಹೇಳಿದರು. ಟಿ.ಎಸ್. ನಾಗಾಭರಣ ಅವರು ಮಾತನಾಡಿ, ‘ಸಿನಿಮಾ ಪಠ್ಯಗಳ ಜರೂರತ್ತು ಇಂದಿನ ದಿನವಿದೆ. ಅದು ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಮೂಲಕ ಆಗಿರುವುದಕ್ಕೆ ಅಭಿನಂದನೆ ಸಲ್ಲಿಸಲೇಬೇಕು. ಪುಸ್ತಕ ಎಲ್ಲರ ಮನೆಯಲ್ಲೂ ಇರಲಿ’ ಎಂದು ಹೇಳಿದರು.

ಇದನ್ನೂ ಓದಿ: ಕನ್ನಡದ 100 ಸ್ಮರಣೀಯ ಸಿನಿಮಾಗಳು ಯಾವವು ಗೊತ್ತಾ? ಶರಣು ಹುಲ್ಲೂರು ಬರೆದ ಪುಸ್ತಕದಲ್ಲಿದೆ ಉತ್ತರ

ಕಾರ್ಯಕ್ರಮದಲ್ಲಿ ಹಾಜರಿದ್ದ ನಟ ಶ್ರೀಮುರಳಿ ಅವರು ಸಿನಿಮಾ ಪತ್ರಕರ್ತರು ಮತ್ತು ಚಿತ್ರರಂಗದ ನಂಟಿನ ಕುರಿತು ಮಾತನಾಡಿದರು. ಅಲ್ಲದೇ, ‘ಗಾನಯೋಗಿ ಪಂಚಾಕ್ಷರಿ ಗವಾಯಿ’ ಸಿನಿಮಾದ ಗೀತೆ ಹಾಡಿ ರಂಜಿಸಿದರು. ಡಾ. ರಾಜ್​ಕುಮಾರ್​ ಅಪಹರಣ ಸೇರಿದಂತೆ ತಮ್ಮ ಬಾಲ್ಯದ ದಿನಗಳ ಸಿನಿಮಾ ಅನುಭವಗಳ ಕುರಿತಾಗಿ ಆಯೇಷಾ ಖಾನಂ ಅವರು ಮಾತನಾಡಿದರು. ಕನ್ನಡದ ಚಿತ್ರರಂಗದ ಹಲವು ತಂತ್ರಜ್ಞರು, ಕಲಾವಿದರು, ಪತ್ರಕರ್ತರು ಹಾಗೂ ಸಾಹಿತ್ಯಾಸಕ್ತರು ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.