ಕನ್ನಡದ 100 ಸ್ಮರಣೀಯ ಸಿನಿಮಾಗಳು ಯಾವವು ಗೊತ್ತಾ? ಶರಣು ಹುಲ್ಲೂರು ಬರೆದ ಪುಸ್ತಕದಲ್ಲಿದೆ ಉತ್ತರ
ಮೂಕಿ ಸಿನಿಮಾಗಳ ಯುಗದಿಂದ 2022ರ ತನಕ ರಿಲೀಸ್ ಆದ ಕನ್ನಡದ ಸಿನಿಮಾಗಳಲ್ಲಿ ನೂರು ಸಿನಿಮಾಗಳನ್ನು ಆಯ್ಕೆ ಮಾಡುವ ಮೂಲಕ ಸಿನಿಮಾಸಕ್ತರಿಗಾಗಿ ಶರಣು ಹುಲ್ಲೂರು ಅವರು ಈ ಪುಸ್ತಕ ರಚಿಸಿದ್ದಾರೆ. ಅತಿ ಅಪರೂಪದ ಫೋಟೋಗಳು ಕೂಡ ಈ ಪುಸ್ತಕದಲ್ಲಿವೆ. ಇದರ ಬಗ್ಗೆ ರಮೇಶ್ ಅರವಿಂದ್, ಜೋಗಿ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡದಲ್ಲಿ ಈವರೆಗೂ 4800ಕ್ಕೂ ಅಧಿಕ ಸಿನಿಮಾಗಳು (Kannada Movies) ಬಂದಿವೆ. ಇಷ್ಟು ದೊಡ್ಡ ಸಮುದ್ರದಲ್ಲಿ ಸ್ಮರಣೀಯವಾದ 100 ಸಿನಿಮಾಗಳನ್ನು ಪಟ್ಟಿ ಮಾಡುವುದು ಎಂದರೆ ನಿಜಕ್ಕೂ ಸವಾಲಿನ ಕೆಲಸ. ಆ ಕೆಲಸವನ್ನು ಮಾಡಿದ್ದಾರೆ ಪತ್ರಕರ್ತ ಶರಣು ಹುಲ್ಲೂರು (Sharanu Hullur). ಹಲವು ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಅವರು ‘ಕನ್ನಡದ 100 ಸ್ಮರಣೀಯ ಸಿನಿಮಾಗಳು: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಕೃತಿಯನ್ನು ಬರೆದಿದ್ದಾರೆ. ಭಾನುವಾರ (ಅಕ್ಟೋಬರ್ 8) ಬೆಂಗಳೂರಿನಲ್ಲಿ ಈ ಪುಸ್ತಕ ಬಿಡುಗಡೆ ಆಯಿತು. ಸ್ಯಾಂಡಲ್ವುಡ್ನ ಖ್ಯಾತ ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ (Ramesh Aravind) ಹಾಗೂ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರು ಈ ಕೃತಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ‘ಕನ್ನಡದ 100 ಸ್ಮರಣೀಯ ಸಿನಿಮಾಗಳು: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಪುಸ್ತಕದಲ್ಲಿ ಒಟ್ಟು 100 ಸಿನಿಮಾಗಳ ಬಗ್ಗೆ ಮಾಹಿತಿ ಇದೆ. ಅವುಗಳ ಕುರಿತ ವಿಶ್ಲೇಷಣೆ ಇದೆ. ಈ ಚಿತ್ರಗಳನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಗೆ ಉತ್ತರ ಇದೆ. ಆ ಸಿನಿಮಾಗಳಲ್ಲಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿ ಇದೆ. ಅನೇಕ ಅಪರೂಪದ ಸಂಗತಿಗಳ ಬಗ್ಗೆ ಮಾಹಿತಿ ಈ ಪುಸ್ತಕದಲ್ಲಿ ಸಿಗುತ್ತದೆ.
ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೆ ರಾಜಕುಮಾರ’ ರಿಲೀಸ್ ಮಾಡಿದ ಕಿಚ್ಚ ಸುದೀಪ್ ಹೇಳಿದ್ದೇನು?
ಮೂಕಿ ಸಿನಿಮಾಗಳ ಯುಗದಿಂದ 2022ರ ತನಕ ರಿಲೀಸ್ ಆದ ಸಿನಿಮಾಗಳಲ್ಲಿ ನೂರು ಸಿನಿಮಾಗಳನ್ನು ಆಯ್ಕೆ ಮಾಡುವ ಮೂಲಕ ಸಿನಿಮಾಸಕ್ತರಿಗಾಗಿ ಶರಣು ಹುಲ್ಲೂರು ಅವರು ಈ ಪುಸ್ತಕ ರಚಿಸಿದ್ದಾರೆ. ಅತಿ ಅಪರೂಪದ ಫೋಟೋಗಳು ಕೂಡ ಈ ಪುಸ್ತಕದಲ್ಲಿವೆ. ಇದರ ಬಗ್ಗೆ ರಮೇಶ್ ಅರವಿಂದ್ ಮಾತನಾಡಿದ್ದಾರೆ. ‘ಅನೇಕ ವರ್ಷಗಳಿಂದ ಶರಣು ಹುಲ್ಲೂರು ಅವರು ನನಗೆ ಗೊತ್ತು. ಸಿನಿಮಾಗಳನ್ನು ಅವರು ಗ್ರಹಿಸುವ ರೀತಿ ವಿಶೇಷವಾಗಿದೆ. ಸಿನಿಮಾಗಳ ವಿಶ್ಲೇಷಣೆ ಬಗ್ಗೆ ಅವರಿಗೆ ಇರುವ ಆಸಕ್ತಿಯಿಂದಲೇ ಈ ರೀತಿಯ ಪುಸ್ತಕ ಬರೆಯಲು ಸಾಧ್ಯವಾಗಿದೆ. ಈ ಪುಸ್ತಕವನ್ನು ಓದಲು ಮರೆಯದಿರಿ ಮರೆತು ನಿರಾಶಾರಾಗದಿರಿ’ ಎನ್ನುವ ಮೂಲಕ ರಮೇಶ್ ಅವರು ಈ ಪುಸ್ತಕಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಸಾವಣ್ಣ ಪ್ರಕಾಶನದ ಮೂಲಕ ಈ ಪುಸ್ತಕ ಹೊರಬಂದಿದೆ. ಈ ಮೊದಲು ಶರಣು ಹುಲ್ಲೂರ ಬರೆದ ‘ಅಂಬರೀಶ್’, ‘ನೀನೇ ರಾಜಕುಮಾರ’ ಪುಸ್ತಕಗಳನ್ನು ಕೂಡ ಇದೇ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ‘ಕನ್ನಡದ 100 ಸ್ಮರಣೀಯ ಸಿನಿಮಾಗಳು: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಪುಸ್ತಕಕ್ಕೆ ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ. ‘ಶರಣು ಹುಲ್ಲೂರು ಅಸಾಧ್ಯ ಜೀವಂತಿಕೆಯ, ಹೊಸತನಗಳ ಹುಡುಕಾಟದ, ಬರೆಯುವ ಹುರುಪು ಉಳಿಸಿಕೊಂಡ ಲವಲವಿಕೆಯ ಗೆಳೆಯ. ಸಿನಿಮಾ ಮೇಲೆ ಅವರಿಗೆ ಇರುವ ಪ್ರೀತಿಗೆ ಈ ಪುಸ್ತಕವೇ ಸಾಕ್ಷಿ. ಈ ಕೃತಿ ಚಿಗುರಿಸಿರುವ ನೆನಪುಗಳಲ್ಲಿ ನಾನು ನನ್ನ ತಾರುಣ್ಯಕ್ಕೆ ಮರಳಿದ್ದೇನೆ’ ಎಂದು ಅವರು ಹಿನ್ನುಡಿಯಲ್ಲಿ ಬರೆದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.