ಭಾರತ ಕಂಡ ಅತ್ಯಪೂರ್ವ ನಟ ದಿಲೀಪ್ ಕುಮಾರ್ ಅವರು ತಾವು ಜನಿಸಿದ ಪೇಶಾವರದ ಮನೆಯನ್ನು ಬಹಳಷ್ಟು ಬಾರಿ ಸ್ಮರಿಸಿಕೊಳ್ಳುತ್ತಿದ್ದರು. ಸ್ವಾತಂತ್ರ್ಯಾಪೂರ್ವದಲ್ಲಿ ಭಾರತದ ಭಾಗವಾಗಿದ್ದ ಇದು ಈಗ ಪಾಕಿಸ್ತಾದಲ್ಲಿದೆ. ದಿಲೀಪ್ ಕುಮಾರ್ ಅವರ ಪೂರ್ವ ನಾಮಧೇಯ ಮಹಮ್ಮದ್ ಯೂಸುಫ್ ಖಾನ್ ಎಂದು. ಅವರು ಪೇಶಾವರದ ಹೃದಯ ಭಾಗದಲ್ಲಿರುವ ಅವರ ಪೂರ್ವಜರೆಲ್ಲರೂ ತಲೆಮಾರಿನಿಂದ ವಾಸವಿದ್ದ ಮನೆಯೊಂದರಲ್ಲಿ ಜನಿಸಿದರು. ಇದು ಪ್ರಖ್ಯಾತ ಖಿಸ್ಸಾ-ಖ್ವಾನಿ ಬಜಾರ್ನ ಸಮೀಪವಿದೆ.
ದಿಲೀಪ್ ಕುಮಾರ್ ಅವರು ಖ್ಯಾತಿಯ ಉತ್ತುಂಗಕ್ಕೇರುವ ಮೊದಲು ತಮ್ಮ ಬಾಲ್ಯವನ್ನು ಕಳೆದದ್ದೆಲ್ಲವೂ ಇಲ್ಲಿಯೇ. ಆಶ್ಚರ್ಯಕರ ಸಂಗತಿಯೆಂದರೆ ದಿಲೀಪ್ ಕುಮಾರ್ ಅವರ ಮನೆಯ ಪಕ್ಕದಲ್ಲಿಯೇ ತಮ್ಮ ಸ್ನೇಹಿತ, ಹಿಂದಿ ಚಿತ್ರರಂಗದ ಮತ್ತೊಂದು ದಂತಕತೆ ರಾಜ್ ಕಪೂರ್ ಅವರ ನಿವಾಸವಿದ್ದದ್ದು. ಈ ಈರ್ವರೂ ನಟರು ಬೆಳೆದ ಎರಡೂ ಮನೆಯನ್ನು ಕಳೆದ ತಿಂಗಳು ಖೈಬರ್ ಪಕ್ತುಂಖ್ವಾ ಪುರಾತತ್ವ ಇಲಾಖೆಯವರು ಅವರ ಸುಪರ್ದಿಗೆ ತೆಗೆದುಕೊಂಡು ಅದನ್ನು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯೋಜನೆಯಲ್ಲಿದ್ದಾರೆ.
2014ರಲ್ಲಿ ಪಾಕಿಸ್ತಾನದ ನವಾಜ್ ಷರೀಫ್ ಅವರ ಸರ್ಕಾರವು ರಾಜ್ ಕಪೂರ್ ಹಾಗೂ ದಿಲೀಪ್ ಕುಮಾರ್ ಅವರ ಮನೆಯನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವೆಂದು ಘೋಷಿಸಿತು. ಅಲ್ಲಿನ ಸರ್ಕಾರ ಕಳೆದ ವರ್ಷ ಈ ಈರ್ವರ ನಟರ ಮನೆಗಳನ್ನು ಸಂಗ್ರಹಾಲಯಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಿತು. ಆ ಸಂದರ್ಭದಲ್ಲಿ ದಿಲೀಪ್ ಕುಮಾರ್ ಅವರಿಗೆ ಪಾಕಿಸ್ತಾನದ ಪತ್ರಿಕಾ ಛಾಯಾಗ್ರಾಹಕ ಶಿರಾಜ್ ಹಸನ್ರಿಂದ ಅವರ ನೂರು ವರ್ಷಕ್ಕೂ ಹಳೆ ಮನೆಯ ಚಿತ್ರಗಳು ಸಿಕ್ಕವು. ಅದನ್ನು ಅವರು ಸಂತೋಷದಿಂದ ಟ್ವಿಟರ್ನಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಲ್ಲದೇ, ಇತರರು ತೆಗೆದ ಚಿತ್ರಗಳಿದ್ದರೂ ನನಗೆ ಕಳುಹಿಸಿ ಎಂದು ಕೋರಿದ್ದರು.
Thank you for sharing this. Requesting all in #Peshawar to share photos of my ancestral house (if you’ve clicked the pic) and tag #DilipKumar https://t.co/bB4Xp4IrUB
— Dilip Kumar (@TheDilipKumar) September 30, 2020
ಈರ್ವರೂ ನಟರ ಮನೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಕಾನೂನಾತ್ಮಕ ಕಾರ್ಯಗಳು ಪೂರ್ಣಗೊಂಡಿವೆ. ಈಗ ಅಧಿಕೃತವಾಗಿ ಅವು ಪಾಕಿಸ್ತಾನದ ಪುರಾತತ್ವ ಇಲಾಖೆಗೆ ಸೇರಿವೆ. ಮನೆಯನ್ನು ನವೀಕರಿಸಿ ನಂತರ ಅಲ್ಲಿ ಸಂಗ್ರಹಾಲಯವನ್ನು ನಿರ್ಮಿಸಲಾಗುವುದು ಎಂದು ಕಳೆದ ತಿಂಗಳು ಪುರಾತತ್ವ ಇಲಾಖೆಯ ನಿರ್ದೇಶಕರಾದ(ಪಾಕಿಸ್ತಾನ) ಡಾ.ಅಬ್ದುಲ್ ಸಮದ್ ಅವರು ‘ಡಾನ್’ ಪತ್ರಿಕೆಗೆ ಹೇಳಿಕೆ ನೀಡಿದ್ದರು. ಹಾಗೆಯೇ ಎರಡೂ ಮನೆಗಳ ನಿರ್ಧರಿತ ಬೆಲೆಯನ್ನು ಅದರ ಮಾಲಿಕರಿಗೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ತಿಳಿಸಿದ್ದರು.
ದಿಲೀಪ್ ಕುಮಾರ್ ಅವರು ಭಾರತ ಕಂಡ ಅದ್ಭುತ ನಟ. ಅವರು ಜುಲೈ ಏಳರಂದು ದೀರ್ಘಕಾಲಿಕ ಅನಾರೋಗ್ಯದಿಂದ ಮುಂಬೈನಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಜುಹುವಿನಲ್ಲಿ ನಡೆಸಲಾಗಿತ್ತು. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೂ ಸೇರಿದಂತೆ ಅನೇಕರು ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದರು. ದಿಲೀಪ್ ಕುಮಾರ್ ಅವರು ‘ದೇವದಾಸ್’, ‘ಮುಘಲ್-ಇ-ಆಜಾಮ್’ ಸೇರಿದಂತೆ ಅನೇಕ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.
ಇದನ್ನೂ ಓದಿ: ಡಾ. ರಾಜ್ಕುಮಾರ್ ಜತೆ ದಿಲೀಪ್ ಕುಮಾರ್ಗೆ ಇದ್ದ ಒಡನಾಟ ಎಂಥದ್ದು? ಫೋಟೋ ಸಹಿತ ವಿವರಿಸಿದ ಪುನೀತ್
ಇದನ್ನೂ ಓದಿ: Dilip Kumar: ಬಾಲಿವುಡ್ ಟ್ರ್ಯಾಜಿಡಿ ಕಿಂಗ್ ದಿಲೀಪ್‌ಕುಮಾರ್ ವಿಧಿವಶ
(Veteran actor Dileep Kumar’s ancestral house’s present state in Peshavar)
Published On - 4:24 pm, Thu, 8 July 21