ಮದುವೆ ಬಗ್ಗೆ ಸುದ್ದಿಗೋಷ್ಠಿ ನಡೆಸಲಿರುವ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್​ಫ್ರೆಂಡ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ವಿಜಯ್ ದೇವರಕೊಂಡ ಭಾಗಿ ಆಗಲಿದ್ದಾರೆ. ನಿಶ್ಚಿತಾರ್ಥದ ಗಾಸಿಪ್ ಹಬ್ಬಿದ ನಂತರ ಅವರಿಬ್ಬರು ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ವೇಳೆ ನಿಶ್ಚಿತಾರ್ಥದ ಬಗ್ಗೆ ಪ್ರಶ್ನೆ ಎದುರಾಗುವುದು ಖಚಿತ. ಹಾಗಾಗಿ ಈ ಸುದ್ದಿಗೋಷ್ಠಿ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ.

ಮದುವೆ ಬಗ್ಗೆ ಸುದ್ದಿಗೋಷ್ಠಿ ನಡೆಸಲಿರುವ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ
Rashmika Mandanna, Vijay Deverakonda

Updated on: Nov 11, 2025 | 4:00 PM

ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ (Vijay Deverakonda) ನಡುವಿನ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ. ತಮ್ಮ ರಿಲೇಷನ್​ಶಿಪ್ ಬಗ್ಗೆ ಈ ಜೋಡಿ ನೇರವಾಗಿ ಏನನ್ನೂ ಹೇಳಿಲ್ಲ. ಆದರೆ ತಿರಸ್ಕರಿಸಿಯೂ ಇಲ್ಲ. ಇತ್ತೀಚೆಗೆ ವಿಜಯ್ ದೇವರಕೊಂಡ ಮನೆಯಲ್ಲಿ ಎಂಗೇಜ್​​ಮೆಂಟ್ (Engagement) ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಆ ಬಗ್ಗೆ ಮಾಹಿತಿ ನೀಡಲು ರಶ್ಮಿಕಾ ಮಂದಣ್ಣ (Rashmika Mandanna)  ಮತ್ತು ವಿಜಯ್ ದೇವರಕೊಂಡ ಅವರು ಒಟ್ಟಿಗೆ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ. ಬುಧವಾರ (ನವೆಂಬರ್ 12) ಹೈದರಾಬಾದ್​​ನಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ‘ದಿ ಗರ್ಲ್ಫ್ರೆಂಡ್’ ಸಿನಿಮಾಗೆ ಪಾಸಿಟಿವ್ ವಿಮರ್ಶೆ ಸಿಕ್ಕಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಲು ಪ್ಲ್ಯಾನ್ ಮಾಡಲಾಗಿದೆ.

ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆ ನಿಭಾಯಿಸಿರುವ ‘ದಿ ಗರ್ಲ್​ಫ್ರೆಂಡ್’ ಸಿನಿಮಾ ನವೆಂಬರ್ 7ರಂದು ಬಿಡುಗಡೆ ಆಯಿತು. ಈ ಸಿನಿಮಾಗೆ ಇನ್ನಷ್ಟು ಪ್ರಚಾರ ನೀಡಲು ಚಿತ್ರತಂಡ ಮುಂದಾಗಿದೆ. ಹಾಗಾಗಿ ಹೈದರಾಬಾದ್​​ನಲ್ಲಿ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಲಾಗಿದೆ. ಈ ಸುದ್ದಿಗೋಷ್ಠಿಗೆ ವಿಜಯ್ ದೇವರಕೊಂಡ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎನ್ನಲಾಗಿದೆ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದೆ. ಆ ಬಳಿಕ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರಿಬ್ಬರು ಒಟ್ಟಿಗೆ ಮಾಧ್ಯಮದ ಎದುರು ಬಂದರೆ ಖಂಡಿತವಾಗಿಯೂ ಎಂಗೇಜ್​​ಮೆಂಟ್ ಬಗ್ಗೆ ಪ್ರಶ್ನೆ ಎದುರಾಗಲಿದೆ. ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಲು ಅವರಿಬ್ಬರು ಸಜ್ಜಾಗಿದ್ದಾರೆ ಎಂಬ ಮಾಹಿತಿ ಇದೆ.

ಮೂಲಗಳ ಪ್ರಕಾರ, ಅಕ್ಟೋಬರ್ 3ರಂದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಎಂಗೇಜ್​ಮೆಂಟ್ ಮಾಡಿಕೊಂಡರು. ಆಪ್ತರು ಮತ್ತು ಕುಟುಂಬದವರು ಮಾತ್ರ ಹಾಜರಿ ಹಾಕಿದ್ದರು. ಈವರೆಗೂ ನಿಶ್ಚಿತಾರ್ಥದ ಫೋಟೋ ಹೊರಬಂದಿಲ್ಲ. 2026ರ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಹಸೆಮಣೆ ಏರಲಿದ್ದಾರೆ.

ಇದನ್ನೂ ಓದಿ: ‘ನಾನು ವಿಜಯ್​ನ ಮದುವೆ ಆಗ್ತೀನಿ’; ಕೊನೆಗೂ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ

ಈ ಮೊದಲು ರಶ್ಮಿಕಾ ಮಂದಣ್ಣ ಅವರಿಗೆ ರಕ್ಷಿತ್ ಶೆಟ್ಟಿ ಜೊತೆ ವಿಶ್ಚಿತಾರ್ಥ ಆಗಿತ್ತು. ಆದರೆ ವೈಮನಸ್ಸು ಉಂಟಾಗಿದ್ದರಿಂದ ಆ ಸಂಬಂಧ ಮುರಿದುಬಿತ್ತು. ಬಳಿಕ ರಶ್ಮಿಕಾ ಅವರು ವಿಜಯ್ ದೇವರಕೊಂಡ ಜೊತೆ ಆಪ್ತತೆ ಬೆಳೆಸಿಕೊಂಡರು. ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ ಅವರು ಸಿಕ್ಕಾಪಟ್ಟೆ ಕ್ಲೋಸ್ ಆದರು. ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಕೂಡ ಅವರಿಬ್ಬರು ಜೋಡಿಯಾಗಿ ಅಭಿನಯಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.