ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಖುಷಿ‘ (Kushi) ಸಿನಿಮಾ ಹಿಟ್ ಆಗಿದೆ. ಬಿಡುಗಡೆ ಆದ ಎರಡೇ ದಿನಕ್ಕೆ ಈ ಸಿನಿಮಾ 51 ಕೋಟಿ ಬಾಚಿಕೊಂಡಿದೆ. ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಭಾನುವಾರದಂದು ಸಹ ಒಳ್ಳೆಯ ಕಲೆಕ್ಷನ್ ಮಾಡಬಹುದೆಂಬ ನಿರೀಕ್ಷೆ ಇದೆ. ವಿಜಯ್ ದೇವರಕೊಂಡ, ಸೋಲಿನ ಸುಳಿಯಿಂದ ಹೊರಗೆ ಬಂದಿರುವ ಖುಷಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ಅಭಿಮಾನಿಗಳು ಸಹ ‘ಖುಷಿ’ ಸಿನಿಮಾದ ಗೆಲುವು ಸಂಭ್ರಮಿಸುತ್ತಿದ್ದಾರೆ. ಇದರ ನಡುವೆ ‘ಖುಷಿ’ ಸಿನಿಮಾದ ಪೋಸ್ಟರ್ನಲ್ಲಿ ವಿಜಯ್ ದೇವರಕೊಂಡ ಹೆಸರಿನ ಬಗ್ಗೆ ಕೆಲವು ಅಪಸ್ವರ ತೆಗೆದಿದ್ದಾರೆ. ಅದರಲ್ಲಿ ನಟಿ ಅನುಸೂಯ ಭಾರಧ್ವಜ ಸಹ ಒಬ್ಬರು.
‘ಖುಷಿ’ ಸಿನಿಮಾದ ಪೋಸ್ಟರ್ನಲ್ಲಿ ವಿಜಯ್ ದೇವರಕೊಂಡ ಹೆಸರನ್ನು ‘ದಿ ವಿಜಯ್ ದೇವರಕೊಂಡ’ ಎಂದು ಬರೆಯಲಾಗಿದೆ. ಇದರ ಬಗ್ಗೆ ಹಲವರು ಅಪಸ್ವರ ಎತ್ತಿದ್ದಾರೆ. ಸಾಮಾನ್ಯವಾಗಿ ಮಹೋನ್ನತವಾದುದನ್ನು ಸಂಭೋಧಿಸುವಾಗ ಹೆಸರಿನ ಮುಂದೆ, ಸ್ಥಳದ ಮುಂದೆ ‘ದಿ’ ಎಂದು ಬಳಸಲಾಗುತ್ತದೆ. ಆದರೆ ಕೆಲವೇ ಸಿನಿಮಾಗಳನ್ನು ಮಾಡಿರುವ ಅದರಲ್ಲಿ ಕೆಲವಷ್ಟೆ ಹಿಟ್ ಆಗಿರುವ ವಿಜಯ್ ದೇವರಕೊಂಡ ಹೆಸರಿನ ಮುಂದೆ ದಿ ಬಳಸಿರುವ ಬಗ್ಗೆ ಇತರೆ ನಟರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟಿ ಅನುಸೂಯಾ ಭಾರಧ್ವಜ್ ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ‘ಈಗಷ್ಟೆ ‘ದಿ’ ನೋಡಿದೆ. ದೇವರು ಇಂಥಹವರಿಗೆ ಏನು ಮಾಡುವುದು? ಇದು ಹೀಗೆಯೇ ಮುಂದುವರೆಯದಂತೆ ನೋಡಿಕೊಳ್ಳಬೇಕು’ ಎಂದಿದ್ದರು. ಅನುಸೂಯಾ ಭಾರಧ್ವಜ್ ಟ್ವೀಟ್ಗೆ ವಿಜಯ್ ದೇವರಕೊಂಡ ಅಭಿಮಾನಿಗಳು ಆಕ್ಷೇಪಣೆ ಎತ್ತಿದ್ದರು. ಅನುಸೂಯಾರನ್ನು ನಿಂದಿಸಿದ್ದರು ಸಹ. ಬಳಿಕ ಮತ್ತೆ ಟ್ವೀಟ್ ಮಾಡಿದ್ದ ಅನುಸೂಯಾ, ”ನೀವೆಲ್ಲ ಹೇಗೆ ಪ್ರತಿಕ್ರಿಯೆ ನೀಡುತ್ತಿದ್ದೀರೆಂದರೆ, ನಾನು ನಿಮ್ಮ ಬಗ್ಗೆ ಹೇಳಿದ್ದನ್ನು ಪ್ರೂವ್ ಮಾಡುತ್ತಿದ್ದೀರ” ಎಂದಿದ್ದಾರೆ.
ಇದನ್ನೂ ಓದಿ:‘ಖುಷಿ’ ಚಿತ್ರದ ಬೆಡ್ ರೂಮ್ ದೃಶ್ಯ ವೈರಲ್: ಸಮಂತಾ, ವಿಜಯ್ ದೇವರಕೊಂಡ ಬಗ್ಗೆ ಜನರ ಕಮೆಂಟ್ ಏನು?
ಮುಂದುವರೆದು, ”ಯಾವುದೇ ತಪ್ಪಿನ ವಿರುದ್ಧ ನಿಂತು ಅದನ್ನು ನಿಲ್ಲಿಸುವುದಕ್ಕೆ ಈ ಸ್ಟಾರ್ ನಟರಿಗೆ ಏಕೆ ಸಾಧ್ಯವಾಗುವುದಿಲ್ಲವೋ ತಿಳಿಯದು. ಅಭಿಮಾನಿಗಳ ಹೆಸರಲ್ಲಿ ತಪ್ಪುಗಳ ಮೇಲೆ ತಪ್ಪುಗಳನ್ನು ಕೆಲವರು ಮಾಡುತ್ತಲೇ ಇದ್ದಾರೆ. ದೊಡ್ಡ ವ್ಯಕ್ತಿಗಳಾದಷ್ಟು ಅವರ ಜವಾಬ್ದಾರಿ ಹೆಚ್ಚಾಗುತ್ತದೆ. ನನಗಿರುವ ಸೀಮಿತ ಫೇಮ್ನಲ್ಲಿ ನಾನು ಜವಾಬ್ದಾರಿಯಿಂದಲೇ ವರ್ತಿಸುತ್ತದ್ದೇನೆ. ನೀವು ಏಕೆ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ, ಅಭಿಮಾನಿಗಳನ್ನು, ಫಾಲೋವರ್ಗಳನ್ನು ಕಳೆದುಕೊಳ್ಳುವ ಭಯವೇ” ಎಂದು ಅನುಸೂಯ ಪ್ರಶ್ನೆ ಮಾಡಿದ್ದರು.
”ನಾನು ತಪ್ಪು ಮಾಡಿಲ್ಲ, ಆದರೆ ಟ್ರೋಲ್ ಮಾಡುತ್ತಿರುವ ಅದಕ್ಕೆ ಬೆಂಬಲ ನೀಡುತ್ತಿರುವ ನೀವು ತಪ್ಪು ಮಾಡಿದ್ದೀರಿ. ನನ್ನನ್ನು ಬೆಳೆಸಿರುವ ರೀತಿಗೆ ನನಗೆ ಖುಷಿ ಇದೆ. ತಪ್ಪು ಎನಿಸಿದ್ದನ್ನು ಧೈರ್ಯವಾಗಿ ಹೇಳುವ ರೀತಿ ನನ್ನನ್ನು ಬೆಳೆಸಲಾಗಿದೆ. ನಿನ್ನನ್ನು ಹೇಗೆ ಬೆಳೆಸಿದ್ದಾರೋ ನನಗೆ ಗೊತ್ತಿಲ್ಲ. ಯಾರು ನಿಂದನೆ ಮಾಡುತ್ತಿದ್ದಾರೋ ಅವರ ವಿರುದ್ಧ ನಿಲ್ಲು, ಯಾರು ನಿಂದನೆಗೆ ಒಳಗಾಗುತ್ತಿದ್ದಾರೋ ಅವರ ವಿರುದ್ಧವಲ್ಲ” ಎಂದು ಅನುಸೂಯಾ ಟ್ವೀಟ್ ಮಾಡಿದ್ದರು.
‘ಖುಷಿ’ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿಯೂ ವಿಜಯ್ ದೇವರಕೊಂಡಗೆ ಈ ಬಗ್ಗೆ ಪ್ರಶ್ನೆ ಎದುರಾಗಿತ್ತು. ಹೆಸರಿನ ಮುಂದಿ ‘ದಿ’ ಬಳಸಿದ್ದೇಕೆ ಎಂದು ಪತ್ರಕರ್ತರು ಪ್ರಶ್ನಿಸಿದ್ದರು. ಆದರೆ ಅದಕ್ಕೆ ಸೂಕ್ತ ಉತ್ತರವನ್ನು ನೀಡದೆ, ಅದು ನಾನು ಮಾಡಿದ್ದಲ್ಲ, ನನ್ನ ಕೈಯಲ್ಲಿಲ್ಲ, ಅಭಿಮಾನಿಗಳ ಕೋರಿಕೆ ಎಂದಿತ್ಯಾದಿ ಹೇಳಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ