ಪ್ರೇಕ್ಷಕರು ಮೆಚ್ಚಿದ ‘ಖುಷಿ’ ಸಿನಿಮಾಗೆ ‘ಬುಕ್ ಮೈ ಶೋ’, ‘ಐಎಂಡಿಬಿ’ಯಲ್ಲಿ ಸಿಕ್ಕ ರೇಟಿಂಗ್ ಎಷ್ಟು?
ಸಾಕಷ್ಟು ನಿರೀಕ್ಷೆ ಸೃಷ್ಟಿಸಿದ್ದ ‘ಖುಷಿ’ ಸಿನಿಮಾ ಸೆಪ್ಟೆಂಬರ್ 1ರಂದು ತೆರೆಕಂಡಿದೆ. ಜನರ ವೋಟಿಂಗ್ ಆಧಾರದ ಮೇಲೆ ‘ಬುಕ್ ಮೈ ಶೋ’, ‘ಐಎಂಡಿಬಿ’ ರೇಟಿಂಗ್ ಕೊಟ್ಟಿದೆ. ಜನರ ಮೆಚ್ಚುಗೆಗೆ ಪಾತ್ರವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಮಿಂಚಿದ್ದಾರೆ.
ಸಮಂತಾ ರುತ್ ಪ್ರಭು, ವಿಜಯ್ ದೇವರಕೊಂಡ (Vijay Devarakonda) ಅಭಿನಯದ ‘ಖುಷಿ’ ಸಿನಿಮಾ ಸೆಪ್ಟೆಂಬರ್ 1ರಂದು ಬಿಡುಗಡೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸೋಲು ಕಾಣುತ್ತಿದ್ದ ವಿಜಯ್ ದೇವರಕೊಂಡ ಅವರು ಈ ಸಿನಿಮಾದ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ತೆಲುಗು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆ ಆಗಿರುವ ‘ಖುಷಿ’ ಸಿನಿಮಾ (Kushi Movie) ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿಕೊಂಡಿದೆ. ಶಿವ ನಿರ್ವಾಣ ನಿರ್ದೇಶನದದಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಚಿತ್ರಮಂದಿರಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡ ಸಿನಿಮಾದ ರೇಟಿಂಗ್ ಹೇಗಿದೆ? ‘ಬುಕ್ ಮೈ ಶೋ’, ‘ಐಎಂಡಿಬಿ’ (IMDb) ವೆಬ್ಸೈಟ್ ಎಷ್ಟು ರೇಟಿಂಗ್ ನೀಡಿದೆ ಎಂದು ತಿಳಿದುಕೊಳ್ಳಬೇಕಾ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..
ಸಿನಿಮಾಗಳ ರೇಟಿಂಗ್ ವಿಚಾರದಲ್ಲಿ ‘ಐಎಂಡಿಬಿ’ ಮಾನ್ಯತೆಗೆ ಒಂದು ತೂಕ ಇದೆ. ಅದೇ ರೀತಿ, ಟಿಕೆಟ್ ಬುಕಿಂಗ್ ಆ್ಯಪ್ ಆದಂತಹ ‘ಬುಕ್ ಮೈ ಶೋ’ ಕೂಡ ಸಿನಿಮಾಗಳಿಗೆ ರೇಟಿಂಗ್ ನೀಡುತ್ತದೆ. ‘ಐಎಂಡಿಬಿ’, ‘ಬುಕ್ ಮೈ ಶೋ’ನಲ್ಲಿ ಜನರ ವೋಟಿಂಗ್ ಆಧಾರದ ಮೇಲೆ ‘ಖುಷಿ’ ಸಿನಿಮಾಕ್ಕೆ ರೇಟಿಂಗ್ ನೀಡಲಾಗಿದೆ. ‘ಐಎಂಡಿಬಿ’ಯಲ್ಲಿ ಭಾನುವಾರ (ಸೆ.3) ಮಧ್ಯಾಹ್ನ 3 ಗಂಟೆ ತನಕ 3,700 ಜನರು ವೋಟ್ ಮಾಡಿದ್ದು, 10ಕ್ಕೆ 7 ರೇಟಿಂಗ್ ಸಿಕ್ಕಿದೆ. ‘ಬುಕ್ ಮೈ ಶೋ’ನಲ್ಲಿ 39,400 ಜನ ವೋಟಿಂಗ್ ಮಾಡಿದ್ದಾರೆ. ಇದರನ್ವಯ 10ಕ್ಕೆ 7 ರೇಟಿಂಗ್ ದೊರೆತಿದೆ. ಇದು ಸದ್ಯದ ವೋಟಿಂಗ್ ಮೇಲೆ ನೀಡಲಾದ ರೇಟಿಂಗ್ ಆಗಿದ್ದು, ಮುಂದಿನ ದಿನಗಳಲ್ಲಿ ವೋಟಿಂಗ್ ಪ್ರಮಾಣದಲ್ಲಿ ಏರಿಕೆಯಾದರೆ ರೇಟಿಂಗ್ನಲ್ಲಿಯೂ ಬದಲಾವಣೆ ಆಗಬಹುದು.
ಇದನ್ನೂ ಓದಿ: 2 ದಿನದಲ್ಲಿ 51 ಕೋಟಿ ರೂಪಾಯಿ ಬಾಚಿಕೊಂಡ ‘ಖುಷಿ’; ವಿಜಯ್ ದೇವರಕೊಂಡ ಮುಖದಲ್ಲಿ ಗೆಲುವಿನ ನಗು
‘ಖುಷಿ’ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಈ ಮೊದಲು ‘ಮಜಿಲಿ’ ಚಿತ್ರದಲ್ಲಿ ಸಮಂತಾ ಹಾಗೂ ನಿರ್ದೆಶಕ ಶಿವ ನಿರ್ವಾಣ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿಯೂ ಲವ್ ಸ್ಟೋರಿಯನ್ನೇ ಎತ್ತಿಕೊಂಡ ನಿರ್ದೇಶಕ ಶಿವ ಅವರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮಂತಾ ಹಾಗೂ ವಿಜಯ್ ಚಂದದ ಜೋಡಿ ಎನಿಸಿಕೊಂಡಿದ್ದಾರೆ. ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಜೋಡಿಯು ಎದುರಿಸಿದ ಕಷ್ಟ, ನಿಭಾಯಿಸಿದ ರೀತಿಯನ್ನು ಇಲ್ಲಿ ತೋರಿಸಲಾಗಿದೆ. ಈ ಸಿನಿಮಾ ವಿಭಿನ್ನವಾದ ಕಥಾವಸ್ತು ಹೊಂದಿದ್ದು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಸಿಕ್ಕ ‘ಬುಕ್ ಮೈ ಶೋ’, ‘ಐಎಂಡಿಬಿ’ ರೇಟಿಂಗ್ ಎಷ್ಟು?
ಸಚಿನ್ ಖೇಡೆಕರ್, ಮುರಳಿ ಶರ್ಮಾ, ಲಕ್ಷ್ಮೀ, ಶರಣ್ಯ ಪೊನ್ವಣ್ಣನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನವೀನ್ ಯೆರ್ನೇನಿ, ವೈ. ರವಿಶಂಕರ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ‘ಹೃದಯಂ’ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಅವರು ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ ಹಾಡುಗಳು ಭಾರಿ ಹಿಟ್ ಆಗಿವೆ. ಸಮಂತಾ ವಿಜಯ್ ಜೋಡಿ ಮೋಡಿ ಮಾಡಿದ್ದು, ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆಗಳು ಸಿಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.