‘ಕುಬೇರ’ ನಿರಾಕರಿಸಿ ಹಿಟ್ ಮಿಸ್ ಮಾಡಿಕೊಂಡ ಫ್ಲಾಪ್ ನಟ ಯಾರು ಗೊತ್ತೆ?
Kubera movie: ಧನುಶ್ ನಟನೆಯ ‘ಕುಬೇರ’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಸಿನಿಮಾದ ಕಲೆಕ್ಷನ್ 100 ಕೋಟಿ ದಾಟಿ ಈಗ 200 ಕೋಟಿಯತ್ತ ದಾಪುಗಾಲು ಹಾಕಿದೆ. ಆದರೆ, ‘ಕುಬೇರ’ ಸಿನಿಮಾನಲ್ಲಿ ನಟಿಸಬೇಕಿದ್ದಿದ್ದು ಧನುಶ್ ಅಲ್ಲ, ಮೊದಲು ಸಿನಿಮಾ ಅವಕಾಶ ಹೋಗಿದ್ದು ಒಬ್ಬ ಫ್ಲಾಪ್ ‘ಸ್ಟಾರ್’ಗೆ ಆದರೆ ಆತ ಈ ಸಿನಿಮಾ ನಿರಾಕರಿಸಿ ಈಗ ಕೈ-ಕೈ ಹಿಸುಕಿಕೊಳ್ಳುತ್ತಿದ್ದಾನೆ.

ಧನುಶ್ (Dhanush) ನಟನೆಯ ‘ಕುಬೇರ’ ಸಿನಿಮಾ ದೊಡ್ಡ ಹಿಟ್ ಆಗಿದೆ. ಬಿಡುಗಡೆ ಆದ ಕೆಲವೇ ವಾರಗಳಲ್ಲಿ ಸಿನಿಮಾ 100 ಕೋಟಿ ಕಲೆಕ್ಷನ್ ದಾಟಿದ್ದು, 150 ಕೋಟಿ ಕಲೆಕ್ಷನ್ ಕಡೆಗೆ ದಾಪುಗಾಲು ಹಾಕಿದೆ. ಸಿನಿಮಾದಲ್ಲಿ ನಟಿಸಿರುವ ಎಲ್ಲರ ನಟನೆ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ವಿಶೇಷವಾದ ನಟ ಧನುಶ್ಗೆ ಮತ್ತೊಂದು ರಾಷ್ಟ್ರಪ್ರಶಸ್ತಿ ಸಿಗಲಿದೆ ಎಂಬ ಮಟ್ಟಿಗೆ ವಿಮರ್ಶಕರು ಅವರ ನಟನೆಯನ್ನು ಕೊಂಡಾಡಿದ್ದಾರೆ. ಆದರೆ ಇಂಥಹಾ ಒಂದು ಒಳ್ಳೆಯ ಸಿನಿಮಾ ಅವಕಾಶವನ್ನು ಕಳೆದುಕೊಂಡಿದ್ದು ಯಾರು ಗೊತ್ತೆ?
ಶೇಖರ್ ಕಮ್ಮುಲ, ‘ಕುಬೇರ’ ಸಿನಿಮಾದ ಕತೆ ರೆಡಿ ಆದಾಗ ಮೊದಲಿಗೆ ಸಂಪರ್ಕ ಮಾಡಿದ್ದು ವಿಜಯ್ ದೇವರಕೊಂಡ ಅವರನ್ನು. ಸತತ ಫ್ಲಾಪ್ಗಳಿಂದ ಕಂಗಾಲಾಗಿರುವ ವಿಜಯ್ ದೇವರಕೊಂಡ ಅವರಿಗೆ ‘ಕುಬೇರ’ ಸಿನಿಮಾದ ಕತೆಯನ್ನು ಶೇಖರ್ ಕಮ್ಮುಲ ಹೇಳಿದ್ದರಂತೆ. ಆದರೆ ಮಾಸ್ ಹೀರೋ ಆಗುವ, ‘ಸ್ಟಾರ್’ ಆಗುವ ದೂರಾಲೋಚನೆ ಹೊಂದಿರುವ ವಿಜಯ್ ದೇವರಕೊಂಡ, ಯಾವ ರೀತಿಯ ಗ್ಲಾಮರ್ ಇಲ್ಲದ ಭಿಕ್ಷುಕನ ಪಾತ್ರದಲ್ಲಿ ನಟಿಸುವುದಿಲ್ಲ ಎಂದು ಅವಕಾಶವನ್ನು ನಿರಾಕರಿಸಿದರಂತೆ.
ವಿಜಯ್ ದೇವರಕೊಂಡ ನಟಿಸಿರುವ ಸಿನಿಮಾ ಒಂದು ಹಿಟ್ ಆಗಿ ವರ್ಷಗಳೆ ಆಗಿಬಿಟ್ಟಿವೆ. ಹಾಗಿದ್ದರೂ ಸಹ ವಿಜಯ್, ಶೇಖರ್ ಕಮ್ಮುಲ ಅಂಥಹಾ ಹಿಟ್ ಸಿನಿಮಾ ನಿರ್ದೇಶಕನಿಗೆ ನೋ ಎಂದು ಈಗ ನಿರಾಸೆ ಅನುಭವಿಸಿದ್ದಾರೆ. ಅಂದಹಾಗೆ ವಿಜಯ್ ದೇವರಕೊಂಡ ನಟಿಸಿದ ಎರಡನೇ ಸಿನಿಮಾ ಶೇಖರ್ ಕಮ್ಮುಲ ಅವರ ‘ಲೈಫ್ ಈಸ್ ಬ್ಯೂಟಿಫುಲ್’. ಆ ಸಿನಿಮಾದಲ್ಲಿ ನಟಿಸಲು ಅರ್ಜಿ ಹಾಕಿದ್ದ 16 ಸಾವಿರ ನಟರುಗಳಲ್ಲಿ ವಿಜಯ್ ದೇವರಕೊಂಡ ಸಹ ಒಬ್ಬರಂತೆ. ತಮಗೆ ಆರಂಭದಲ್ಲಿ ಅವಕಾಶ ಕೊಟ್ಟ ನಿರ್ದೇಶಕರಿಗೇ ನೋ ಎಂದಿದ್ದಾರೆ ವಿಜಯ್ ದೇವರಕೊಂಡ.
ಇದನ್ನೂ ಓದಿ:‘ಕುಬೇರ’ ಸಿನಿಮಾ ನೋಡುವಾಗಲೇ ಕುಸಿದು ಬಿದ್ದ ಚಿತ್ರಮಂದಿರದ ಸೀಲಿಂಗ್
ಅಂದಹಾಗೆ ವಿಜಯ್ ದೇವರಕೊಂಡ ಅವರ ಕೊನೆಯ ಹಿಟ್ ಸಿನಿಮಾ 2018 ರಲ್ಲಿ ಬಿಡುಗಡೆ ಆದ ‘ಗೀತಾ ಗೋವಿಂದಂ’ ಆ ಸಿನಿಮಾದ ಬಳಿಕ ವಿಜಯ್ ನಟಿಸಿದ ಇನ್ಯಾವುದೇ ಸಿನಿಮಾ ಹಿಟ್ ಎನಿಸಿಕೊಂಡಿಲ್ಲ. ‘ನೋಟಾ’, ‘ಟ್ಯಾಕ್ಸಿವಾಲ’, ‘ಡಿಯರ್ ಕಾಮ್ರೆಡ್’, ‘ವರ್ಲ್ಡ್ ಫೇಮಸ್ ಲವ್ವರ್’, ‘ಲೈಗರ್’, ‘ಖುಷಿ’, ‘ದಿ ಫ್ಯಾಮಿಲಿ ಸ್ಟಾರ್’ ಇಷ್ಟೂ ಸಿನಿಮಾಗಳು ಒಂದರ ಹಿಂದೊಂದರಂತೆ ಸೋಲುಂಡಿವೆ. ಈಗ ಅವರ ನಟನೆಯ ‘ಕಿಂಗ್ಡಮ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಆ ಸಿನಿಮಾದ ಭವಿಷ್ಯ ಏನಾಗಲಿದೆಯೋ ಕಾದು ನೋಡಬೇಕಿದೆ. ‘ಕಿಂಗ್ಡಮ್’ ಬಳಿಕ ರಶ್ಮಿಕಾ ಮಂದಣ್ಣ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ