
ವಿಜಯ್ ದೇವರಕೊಂಡ (Vijay Deverakonda) ತೆಲುಗು ಚಿತ್ರರಂಗದ ‘ಫ್ಲಾಪ್ ಸ್ಟಾರ್’ ಆಗಿದ್ದಾರೆ. ಅವರ ನಟನೆಯ ಸಿನಿಮಾ ಒಂದು ಹಿಟ್ ಆಗಿ ವರ್ಷಗಳೇ ಆಗಿವೆ. ‘ಗೀತಾ ಗೋವಿಂದಂ’ ಸಿನಿಮಾದ ಬಳಿಕ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ. ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ವಿಜಯ್ ದೇವರಕೊಂಡ. ಅವರ ನಟನೆಯ ‘ಕಿಂಗ್ಡಮ್’ ಹೆಸರಿನ ಆಕ್ಷನ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರದ ಸಮಯದಲ್ಲಿ ವಿಜಯ್ ದೇವರಕೊಂಡ ಅಸಮಾಧಾನ ಒಂದನ್ನು ತೋಡಿಕೊಂಡಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದಲ್ಲಿ ನಾಯಕ ನಟರುಗಳಿಗೆ ಒಂದಲ್ಲ ಒಂದು ವಿಶೇಷಣಗಳು ಅವರ ಹೆಸರಿನ ಮುಂದೆ ಸೇರಿಸಲಾಗುತ್ತದೆ. ಹ್ಯಾಟ್ರಿಕ್ ಹೀರೋ, ಮೆಗಾಸ್ಟಾರ್, ಸೂಪರ್ ಸ್ಟಾರ್ ಹೀಗೆ. ಅದರಂತೆ ನಟ ವಿಜಯ್ ದೇವರಕೊಂಡ ತಮ್ಮ ಹೆಸರಿನ ಮುಂದೆ ‘ದಿ ವಿಜಯ್ ದೇವರಕೊಂಡ’ ಎಂದು ಸೇರಿಸಿಕೊಂಡಿದ್ದರು. ಅಂದರೆ ಭಾರಿ ಪ್ರಮುಖ, ಶಕ್ತಿಶಾಲಿ, ಮಹಾನ್ ಎಂಬ ಭಾವವನ್ನು ‘ದಿ’ ನೀಡುತ್ತದೆ. ಆದರೆ ಈಗ ಬಿಡುಗಡೆ ಆಗಲಿರುವ ‘ಕಿಂಗ್ ಡಮ್’ ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಹೆಸರಿನ ಮುಂದಿರುವ ‘ದಿ’ ಅನ್ನು ತೆಗೆದಿದ್ದಾರೆ.
ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿರುವ ವಿಜಯ್ ದೇವರಕೊಂಡ, ‘ಜನರಿಂದ ಭಾರಿ ಪ್ರಮಾಣದ ವಿರೋಧ, ಟೀಕೆ ವ್ಯಕ್ತವಾಯಿತು ಹಾಗಾಗಿ ನಾನು ನನ್ನ ಹೆಸರಿನ ಮುಂದೆ ಇದ್ದ ‘ದಿ’ ಅನ್ನು ತೆಗೆದಿದ್ದೇನೆ’ ಎಂದಿದ್ದಾರೆ. ಮುಂದುವರೆದು, ‘ಚಿತ್ರರಂಗದಲ್ಲಿ ಎಲ್ಲ ನಾಯಕ ನಟರಿಗೂ ಒಂದೊಂದು ವಿಶೇಷಣಗಳು ಅವರ ಹೆಸರಿನ ಮುಂದೆ, ಹಿಂದೆ ಇದೆ. ನನಗೆ ಮುಂಚೆ ಬಂದವರಿಗೂ ಇದೆ, ನನ್ನ ಬಳಿಕ ಚಿತ್ರರಂಗಕ್ಕೆ ಬಂದವರಿಗೂ ಇದೆ. ಆದರೆ ಜನ ನನಗೆ ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸಿದರು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನೀನು ಹೆಮ್ಮೆ ಪಡುವಂತೆ ಮಾಡುತ್ತೇನೆ: ವಿಜಯ್ ದೇವರಕೊಂಡಗೆ ರಶ್ಮಿಕಾ ಸಂದೇಶ
ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ, ಮಾಧ್ಯಮಗಳಲ್ಲಿ ವಿಜಯ್ ದೇವರಕೊಂಡ ಹೆಸರನ್ನು ‘ರೌಡಿ ಬಾಯ್’, ‘ರೌಡಿ ಸ್ಟಾರ್’ ಎಂದೆಲ್ಲ ಬಳಸಲಾಗುತ್ತದೆ. ಆದರೆ ಅದು ಅವರಿಗೆ ಇಷ್ಟವಿರದ ಕಾರಣ ‘ದಿ’ ಎಂಬುದನ್ನೇ ಅವರೇ ಸೇರಿಸಿಕೊಂಡಿದ್ದರು. ಆದರೆ ನೆಟ್ಟಿಜನರಿಂದ ಟೀಕೆ ವ್ಯಕ್ತವಾದ ಕಾರಣ ಈಗ ಅವರೇ ಅದನ್ನು ತೆಗೆದಿದ್ದಾರೆ.
ಇನ್ನು ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾ ಇದೇ ತಿಂಗಳ 31ನೇ ತಾರೀಖು ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ವಿಜಯ್ ದೇವರಕೊಂಡ ಸಖತ್ ಮಾಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಗೌತಮ್ ತಿನರುರಿ. ನಾಗ ವಂಶಿ ಮತ್ತು ಸಾಯಿ ಸೌಜನ್ಯ ಅವರುಗಳು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ವಿಜಯ್ ದೇವರಕೊಂಡ ಜೊತೆಗೆ ಸತ್ಯಸಾಯಿ ಸಹ ನಟಿಸಿದ್ದು, ಸಿನಿಮಾದ ನಾಯಕಿ ಭಾಗ್ಯಶ್ರೀ ಬೋರ್ಸೆ. ಈ ಸಿನಿಮಾಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದರು. ಆದರೆ ಬಳಿಕ ಅವರು ಸಿನಿಮಾದಿಂದ ಹೊರನಡೆದರು. ಸಂಗೀತ ನೀಡಿರುವುದು ಅವಿರುದ್ಧ್ ರವಿಚಂದ್ರನ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ