ಕಾಲಿವುಡ್ ನಟ ದಳಪತಿ ವಿಜಯ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. 2019ರಲ್ಲಿ ಬಿಡುಗಡೆಯಾದ ಅವರ ‘ಬಿಗಿಲ್’ ಸಿನಿಮಾ ಬಗ್ಗೆ ಈಗ ಮತ್ತೆ ಸುದ್ದಿ ಆಗುತ್ತಿದೆ. ಆದರೆ ಅದು ಬಾಕ್ಸ್ ಆಫೀಸ್ ಕಲೆಕ್ಷನ್, ಸ್ಯಾಟಲೈಟ್ ರೈಟ್ಸ್ ಇತ್ಯಾದಿ ವ್ಯವಹಾರಕ್ಕೆ ಸಂಬಂಧಿಸಿದ ಸುದ್ದಿ ಅಲ್ಲ. ಅಚ್ಚರಿ ಎಂದರೆ ಒಬ್ಬ ಬಾಲಕನ ಪ್ರಾಣ ಉಳಿಸಲು ಬಿಗಿಲ್ ಸಿನಿಮಾ ನೆರವಾಗಿದೆ. ಅಚ್ಚರಿ ಎನಿಸಿದರೂ ಹೀಗೊಂದು ಘಟನೆ ವರದಿ ಆಗಿದೆ. ವಿಷಯ ಗೊತ್ತಾದ ಬಳಿಕ ಅಭಿಮಾನಿಗಳಿಗೆ ವಿಜಯ್ ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಾಗುತ್ತಿದೆ.
ಇತ್ತೀಚೆಗೆ 10 ವರ್ಷದ ಬಾಲಕನೊಬ್ಬ ಬೈಕ್ ಆಕ್ಸಿಡೆಂಟ್ಗೆ ಒಳಗಾಗಿದ್ದ. ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಕರೆದುಕೊಂಡ ಬಂದಾಗ ತಲೆಯ ಗಾಯದಿಂದ ರಕ್ತಸ್ರಾವ ಆಗುತ್ತಿತ್ತು. ಕೂಡಲೇ ಆತನಿಗೆ ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯ ಆಗಿತ್ತು. ಆದರೆ ಇಂಜೆಕ್ಷನ್ಗೆ ಹೆದರಿಕೊಂಡ ಆತ ಯಾವುದಕ್ಕೂ ಅವಕಾಶವನ್ನೇ ನೀಡಲಿಲ್ಲ. ಆಗ ವೈದ್ಯರ ಸಹಾಯಕ್ಕೆ ಬಂದಿದ್ದೇ ವಿಜಯ್ ನಟನೆಯ ಬಿಗಿಲ್ ಸಿನಿಮಾ.
ಹೌದು, ವೈದ್ಯರೊಬ್ಬರು ಬಾಲಕನ ಜೊತೆ ಮಾತನಾಡಿದಾಗ ಆತನಿಗೆ ನಟ ವಿಜಯ್ ಎಂದರೆ ತುಂಬ ಇಷ್ಟ ಎಂಬುದು ಗೊತ್ತಾಯಿತು. ‘ಬಿಗಿಲ್’ ಸಿನಿಮಾ ಕೂಡ ಅವನ ಅಚ್ಚುಮೆಚ್ಚು ಎಂಬುದನ್ನು ವೈದ್ಯರು ಪತ್ತೆ ಮಾಡಿದರು. ಆಗ ಹುಡುಗನ ಮನವೊಲಿಸಿ, ಕೈಗೆ ಮೊಬೈಲ್ ನೀಡಿ ಅದರಲ್ಲಿ ‘ಬಿಗಿಲ್’ ಚಿತ್ರ ತೋರಿಸಲಾಯಿತು. ಆತ ಬಿಗಿಲ್ ನೋಡುತ್ತಿರುವಾಗ ವೈದ್ಯರು ಸರ್ಜರಿ ಮಾಡಲು ಆರಂಭಿಸಿದರು. ಬಾಲಕ ಸಿನಿಮಾದಲ್ಲಿ ಮಗ್ನನಾಗಿರುವಾಗಲೇ ಆಪರೇಷನ್ ಮಾಡಿ ಮುಗಿಸಲಾಯಿತು ಎಂದು ವರದಿ ಆಗಿದೆ.
ಈ ಘಟನೆ ಕುರಿತು ತಮಿಳು ಪತ್ರಿಕೆಯೊಂದರಲ್ಲಿ ಸುದ್ದಿ ಪ್ರಕಟ ಆಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಭಿಮಾನಿಗಳು ವಿಜಯ್ಗೆ ಜಯಕಾರ ಹಾಕುತ್ತಿದ್ದಾರೆ. ಒಬ್ಬ ನಟನಿಗೆ ಗಲ್ಲಾಪೆಟ್ಟಿಗೆಯಲ್ಲಿ ಸಿಗುವ ಗೆಲುವಿಗಿಂತಲೂ ಈ ರೀತಿ ಸಿಗುವ ಪ್ರೀತಿಯೇ ದೊಡ್ಡದು ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
2019ರ ಅಕ್ಟೋಬರ್ 25ರಂದು ಬಿಡುಗಡೆ ಆಗಿದ್ದ ‘ಬಿಗಿಲ್’ ಚಿತ್ರಕ್ಕೆ ಅಟ್ಲಿ ಕುಮಾರ್ ನಿರ್ದೇಶನ ಮಾಡಿದ್ದರು. ವಿಜಯ್ ಜೊತೆ ನಯನತಾರಾ, ಜಾಕಿ ಶ್ರಾಫ್ ಮುಂತಾದವರು ನಟಿಸಿದ್ದರು. ದ್ವಿಪಾತ್ರದಲ್ಲಿ ವಿಜಯ್ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:
Thalapathy Vijay: ಒಂದೇ ಮಾತಿನಲ್ಲಿ ದಳಪತಿ ವಿಜಯ್ಗೆ ಶಾರುಖ್ ಖಾನ್ ಹೊಗಳಿಕೆ; ಯಾವುದು ಆ ಮಾತು?
Thalapathy Vijay: ದಳಪತಿ ವಿಜಯ್ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರು; ಹಾಗಾದ್ರೆ ಈ ನಟನ ಒಟ್ಟು ಆಸ್ತಿ ಎಷ್ಟು?