ಕಾಲಿವುಡ್ನಲ್ಲಿ ಇತ್ತೀಚೆಗೆ ತೆರೆಕಂಡಿದ್ದ ಬಹುತಾರಾಗಣದ ವಿಕ್ರಮ್ (Vikram) ಚಿತ್ರವು ಬಾಕ್ಸಾಫೀಸ್ನಲ್ಲಿ ನಾಗಾಲೋಟ ಮುಂದುವರೆಸಿದೆ. ಕೇವಲ 23 ದಿನಗಳಲ್ಲಿ ಚಿತ್ರದ ಕಲೆಕ್ಷನ್ 400 ಕೋಟಿ ದಾಟಿದ್ದು, ಇದೀಗ ಹೊಸ ಇತಿಹಾಸ ಬರೆಯುವತ್ತ ಮುನ್ನುಗ್ಗುತ್ತಿದೆ. ಸಕಲಕಲಾ ವಲ್ಲಭವನ್ ಕಮಲ್ ಹಾಸನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಚಿತ್ರವು ವಾರಗಳ ಹಿಂದೆ ಅತೀ ಕಡಿಮೆ ಅವಧಿಯಲ್ಲಿ 150 ಕೋಟಿ ರೂ. ಕಲೆಕ್ಷನ್ ಮಾಡಿದ ತಮಿಳು ಚಿತ್ರ ಎಂಬ ದಾಖಲೆ ಬರೆದಿತ್ತು. ಇದೀಗ ಅತೀ ವೇಗವಾಗಿ 400 ಕೋಟಿ ಗಳಿಕೆ ಕಂಡ ಕಾಲಿವುಡ್ (Kollywood) ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿದೆ. ಅಷ್ಟೇ ಅಲ್ಲದೆ ತಮಿಳು ಚಿತ್ರರಂಗದ 2ನೇ ಬ್ಲಾಕ್ ಬ್ಲಸ್ಟರ್ ಚಿತ್ರ ಎಂಬ ಹೆಗ್ಗಳಿಕೆ ಕೂಡ ವಿಕ್ರಮ್ ಪಾಲಾಗಿದೆ. ಏಕೆಂದರೆ ವಿಕ್ರಮ್ ಚಿತ್ರವು ಈಗಾಗಲೇ ಬಾಕ್ಸಾಫೀಸ್ನಲ್ಲಿ 400 ಕೋಟಿಯನ್ನು ಲೂಟಿ ಮಾಡಿದ್ದು, ಈ ಮೂಲಕ ಅತೀ ಹೆಚ್ಚು ಕಲೆಕ್ಷನ್ ಮಾಡಿದ 2ನೇ ತಮಿಳು ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿದೆ.
ಸದ್ಯ ವಿಕ್ರಮ್ ಮುಂದಿರುವ ಚಿತ್ರವೆಂದರೆ ರಜನಿಕಾಂತ್ ನಟನೆಯ 2.0 ಸಿನಿಮಾ. ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದ ರೋಬೋ-2 ಅಥವಾ 2.0 ಚಿತ್ರವು 664 ಕೋಟಿ ಕಲೆಕ್ಷನ್ ಮಾಡಿ ತಮಿಳು ಚಿತ್ರರಂಗದಲ್ಲಿ ದಾಖಲೆ ಬರೆದಿತ್ತು. ಇದೀಗ ವಿಕ್ರಮ್ ಚಿತ್ರದ ಒಟ್ಟಾರೆ ಕಲೆಕ್ಷನ್ 400 ಕೋಟಿಯನ್ನು ದಾಟಿದೆ. ಈ ಮೂಲಕ ತಮಿಳಿನಲ್ಲಿ ಅತೀ ಹೆಚ್ಚು ಗಳಿಕೆ ಕಂಡ 2ನೇ ಚಿತ್ರ ಎಂಬ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.
ಈ ವಾರಾಂತ್ಯಕ್ಕೆ ವಿಕ್ರಮ್ ಚಿತ್ರದ ವಿಶ್ವಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ 403 ಕೋಟಿ ದಾಟಿದೆ ಎಂದು ತಿಳಿದು ಬಂದಿದೆ. ಇದರಲ್ಲಿ 283 ಕೋಟಿ ಭಾರತದಿಂದಲೇ ಲಭಿಸಿರುವುದು ವಿಶೇಷ. ಇನ್ನು ಸಾಗರೋತ್ತರ ಸಿನಿಪ್ರಿಯರಿಂದ 120 ಕೋಟಿ ಹರಿದು ಬಂದಿದೆ. ಇದೀಗ ಚಿತ್ರದ ಪ್ರದರ್ಶನಕ್ಕೆ ಸ್ಕ್ರೀನ್ಗಳ ಬೇಡಿಕೆಗಳು ಹೆಚ್ಚಾಗುತ್ತಿದ್ದು, ಹೀಗಾಗಿ ವಿಕ್ರಮ್ 500 ಕೋಟಿ ಕಲೆಕ್ಷನ್ ಮಾಡುವುದು ಬಹುತೇಕ ಖಚಿತ ಎಂದು ಸಿನಿಪಂಡಿತರು ಅಭಿಪ್ರಾಯಪಟ್ಟಿದ್ದಾರೆ.
ಖೈದಿ ಚಿತ್ರ ಖ್ಯಾತಿಯ ಲೋಕೇಶ್ ಕನಗರಾಜ್ ನಿರ್ದೇಶನದ ವಿಕ್ರಮ್ ಚಿತ್ರವು ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ರಾ ಕಾಪ್ ಆಗಿ ಕಮಲ್ ಹಾಸನ್ ನಟಿಸಿದರೆ, ಪ್ರಮುಖ ಪಾತ್ರದಲ್ಲಿ ವಿಜಯ್ ಸೇತುಪತಿ, ಫಹದ್ ಫಾಜಿಲ್ ಕಾಣಿಸಿಕೊಂಡಿದ್ದಾರೆ. ಇನ್ನು ನಟರಾದ ಚೆಂಬನ್ ವಿನೋದ್ ಜೋಸ್, ಕಾಳಿದಾಸ್ ಜಯರಾಮ್, ಆಂಟೋನಿ ವರ್ಗೀಸ್, ನರೇನ್ ಮತ್ತು ಅರ್ಜುನ್ ದಾಸ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
‘ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಶನಲ್’ ಬ್ಯಾನರ್ ಅಡಿಯಲ್ಲಿ ಕಮಲ್ ಹಾಸನ್ ಮತ್ತು ಮಹೇಂದ್ರನ್ ನಿರ್ಮಿಸಿರುವ ವಿಕ್ರಮ್ ಚಿತ್ರವು ಬಾಕ್ಸಾಫೀಸ್ನಲ್ಲಿ ಪರಾಕ್ರಮ ಮುಂದುವರೆಸಿದ್ದು, ಮುಂಬರುವ ದಿನಗಳಲ್ಲಿ ರಜನಿಕಾಂತ್ ಅವರ 2.0 ಚಿತ್ರದ 664 ಕೋಟಿ ಕಲೆಕ್ಷನ್ ದಾಖಲೆಯನ್ನು ಮುರಿಯಲಿದೆಯಾ ಕಾದು ನೋಡಬೇಕಿದೆ.
ವಿಕ್ರಮ್ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್‌ಗಳ ವಿವರ ಹೀಗಿದೆ:
ಸಾಗರೋತ್ತರ – ರೂ. 119.75 ಕೋಟಿ
ವಿಶ್ವದಾದ್ಯಂತ ಒಟ್ಟು ಕಲೆಕ್ಷನ್ – ರೂ. 403.50 ಕೋಟಿ
Published On - 8:36 pm, Sun, 26 June 22