ಸಿನಿಮಾ ಪ್ರಮುಖರ ಜೊತೆ ಸಭೆ, ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು?

|

Updated on: Dec 26, 2024 | 1:23 PM

Tollywood: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಇತ್ತೀಚೆಗೆ ತೆಲುಗು ಚಿತ್ರರಂಗದ ಬಗ್ಗೆ ವಿಧಾನಸಭೆಯಲ್ಲಿ ಋಣಾತ್ಮಕವಾಗಿ ಮಾತನಾಡಿದ್ದರು. ತೆಲುಗು ಸಿನಿಮಾಗಳಿಗೆ ನೀಡಲಾಗುತ್ತಿದ್ದ ಕೆಲವು ವಿಶೇಷ ಸವಲತ್ತುಗಳನ್ನು ರದ್ದು ಮಾಡುತ್ತಿರುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೆ ಇಂದು ಸಿಎಂ ರೇವಂತ್ ರೆಡ್ಡಿಯವರನ್ನು ತೆಲುಗು ಚಿತ್ರರಂಗದ ಪ್ರಮುಖರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಭೆಯಲ್ಲಿ ಸಿಎಂ ಕೆಲ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಪ್ರಮುಖರ ಜೊತೆ ಸಭೆ, ಸಿಎಂ ರೇವಂತ್ ರೆಡ್ಡಿ ಹೇಳಿದ್ದೇನು?
Revanth Reddy Cm
Follow us on

ಆಂಧ್ರ ಪ್ರದೇಶದ ಸಿಎಂ ರೇವಂತ್ ರೆಡ್ಡಿ ಜೊತೆಗೆ ತೆಲುಗು ಚಿತ್ರರಂಗದ ಪ್ರಮುಖರು ಇಂದು (ಡಿಸೆಂಬರ್ 26) ಸಭೆ ನಡೆಸಿದ್ದಾರೆ. ಅಲ್ಲು ಅರ್ಜುನ್​ರ ಸಂಧ್ಯಾ ಚಿತ್ರಮಂದಿರ ಘಟನೆ ಬಳಿಕ ತೆಲಂಗಾಣ ಸರ್ಕಾರ, ತೆಲುಗು ಚಿತ್ರರಂಗದ ಬಗ್ಗೆ ನಿಷ್ಠುರ ನಿಲವು ತಳೆದಿದೆ. ವಿಧಾನಸಭೆಯಲ್ಲಿ ತೆಲುಗು ಚಿತ್ರರಂಗದ ಬಗ್ಗೆ ಸ್ವತಃ ಸಿಎಂ ಸೇರಿದಂತೆ ಕೆಲವು ಸಚಿವರು ಋಣಾತ್ಮಕವಾಗಿ ಮಾತನಾಡಿದ್ದು, ತೆಲುಗು ಚಿತ್ರರಂಗವನ್ನು ಟೀಕೆ ಸಹ ಮಾಡಿದ್ದಾರೆ. ಸಿನಿಮಾಗಳಿಗೆ ನೀಡಲಾಗುತ್ತಿದ್ದ ಬೆನಿಫಿಟ್ ಶೋ, ಟಿಕೆಟ್ ದರ ಹೆಚ್ಚಳಗಳನ್ನು ರದ್ದು ಮಾಡಿದ್ದಾರೆ. ಅದರ ಬೆನ್ನಲ್ಲೆ ಇಂದು ರೇವಂತ್ ರೆಡ್ಡಿ ಜೊತೆಗೆ ತೆಲುಗು ಚಿತ್ರರಂಗದ ಗಣ್ಯರು ಸಭೆ ನಡೆಸಿದ್ದಾರೆ.

ಆದರೆ ಸಭೆ ಯಶಸ್ವಿಯಾಗಿಲ್ಲ. ಬೆನಿಫಿಟ್ ಶೋಗಳಿಗೆ ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಸಿಎಂ ರೇವಂತ್ ರೆಡ್ಡಿ ಚಿತ್ರರಂಗದ ಗಣ್ಯರೆದುರು ಮತ್ತೊಮ್ಮೆ ಹೇಳಿದ್ದಾರೆ. ಆದರೆ ಸಿನಿಮಾ ಟಿಕೆಟ್ ದರ ಹೆಚ್ಚಳದ ಬಗ್ಗೆ ಚರ್ಚೆ ಜಾರಿಯಲ್ಲಿದ್ದು, ಈ ಬಗ್ಗೆ ಮುಂದೆ ಕೆಲವು ಸುತ್ತುಗಳ ಸಭೆಯ ಬಳಿಕ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇದರ ಜೊತೆಗೆ ಗದ್ದರ್ ಅವಾರ್ಡ್ಸ್​ ಅನ್ನು ಸರ್ಕಾರದಿಂದ ನೀಡುವ ಕುರಿತಾಗಿ ಹಾಗೂ ನರಸಿಂಗ ರಾವ್ ಸಮಿತಿಯ ವರದಿಯ ಅನುಷ್ಠಾನದ ಕುರಿತಾಗಿಯೂ ಚರ್ಚೆಗಳು ನಡೆದಿವೆ.

ಸಭೆಯಲ್ಲಿ ಮೊದಲಿಗೆ ಮಾತನಾಡಿದ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್, ‘ಎಲ್ಲ ಸಿಎಂಗಳೂ ಈವರೆಗೆ ಚಿತ್ರರಂಗವನ್ನು ಚೆನ್ನಾಗಿ ನಡೆಸಿಕೊಂಡಿದ್ದಾರೆ. ಮುಂದೆಯೂ ಅದೇ ನಡೆಯುವ ನಿರೀಕ್ಷೆ ಇದೆ’ ಎಂದರು. ಅಲ್ಲದೆ, ದಿಲ್ ರಾಜು ಅವರನ್ನು ಎಫ್​ಡಿಸಿಯ ಚೇರ್​ಮ್ಯಾನ್ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಮುಂದುವರೆದು, ತೆಲಂಗಾಣದಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಚಿತ್ರರಂಗದ ಸಹಾಯದ ಮೂಲಕ ಅವನ್ನು ಅಭಿವೃದ್ಧಿಪಡಿಸಬಹುದು ಎಂದರು.

ಇದನ್ನೂ ಓದಿ:‘ಅಲ್ಲು ಅರ್ಜುನ್ ಬಂಧನದಲ್ಲಿ ನನ್ನ ಹಸ್ತಕ್ಷೇಪ ಇಲ್ಲ’; ಸಿಎಂ ರೇವಂತ್ ರೆಡ್ಡಿ ಸ್ಪಷ್ಟನೆ

ನಟ ನಾಗಾರ್ಜುನ ಮಾತನಾಡಿ, ‘ಯೂನಿವರ್ಸ್ ಸ್ಟುಡಿಯೋ ಲೆವೆಲ್​ನ ಸ್ಟುಡಿಯೋದ ಅವಶ್ಯಕತೆ ತೆಲುಗು ಚಿತ್ರರಂಗಕ್ಕೆ ಇದೆ. ಸರ್ಕಾರಗಳು ಸಹಕಾರ ನೀಡಿದರೆ ಮಾತ್ರವೇ ತೆಲುಗು ಚಿತ್ರರಂಗ ವಿಶ್ವಮಟ್ಟಕ್ಕೆ ಬೆಳೆಯಲು ಸಾಧ್ಯ. ಹೈದರಾಬಾದ್​, ವಿಶ್ವ ಸಿನಿಮಾ ರಾಜಧಾನಿ ಆಗಬೇಕು ಎಂಬುದು ನಮ್ಮ ಬಯಕೆ’ ಎಂದರು. ಮುರಳಿ ಮೋಹನ್ ಮಾತನಾಡಿ, ‘ಎಲೆಕ್ಷನ್ ಫಲಿತಾಂಶದಂತೆ ಸಿನಿಮಾ ಫಲಿತಾಂಶಗಳು ಸಹ ಮೊದಲ ದಿನದ ಕಲೆಕ್ಷನ್ ಬಹಳ ಮುಖ್ಯ, ಅತಿಯಾದ ಕಲೆಕ್ಷನ್ ಒತ್ತಡದಿಂದಾಗಿ ಪ್ರಚಾರವೂ ಹೆಚ್ಚಾಗಿದೆ. ಸಂಧ್ಯಾ ಚಿತ್ರಮಂದಿರದಲ್ಲಿ ನಡೆದ ಘಟನೆ ಬಗ್ಗೆ ನಾವೆಲ್ಲ ವಿಷಾಧ ವ್ಯಕ್ತಪಡಿಸುತ್ತೇವೆ’ ಎಂದಿದ್ದಾರೆ.

ಬಳಿಕ ರೇವಂತ್ ರೆಡ್ಡಿ, ಎಲ್ಲ ಸಿನಿಮಾ ಪ್ರಮುಖರ ಎದುರು ಖಡಾಖಂಡಿತವಾಗಿ ಇನ್ನು ಮುಂದೆ ಬೆನಿಫಿಟ್ ಶೋಗಳಿಗೆ ಅವಕಾಶ ಇರುವುದಿಲ್ಲ ಎಂದರು. ಮುಂದುವರೆದು ತಾವು ವಿಧಾನಸಭೆಯಲ್ಲಿ ಆಡಿರುವ ಮಾತುಗಳಿಗೆ ಬದ್ಧವಾಗಿ ಇರುವುದಾಗಿ ಸಹ ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ