‘ಅಲ್ಲು ಅರ್ಜುನ್ ಬಂಧನದಲ್ಲಿ ನನ್ನ ಹಸ್ತಕ್ಷೇಪ ಇಲ್ಲ’; ಸಿಎಂ ರೇವಂತ್ ರೆಡ್ಡಿ ಸ್ಪಷ್ಟನೆ
‘ಪುಷ್ಪ 2’ ಚಿತ್ರದ ಯಶಸ್ಸಿನ ನಂತರ ಅಲ್ಲು ಅರ್ಜುನ್ ಅವರ ಬಂಧನವು ದೊಡ್ಡ ಸಂಚಲನವನ್ನು ಉಂಟುಮಾಡಿದೆ. ಹೈದರಾಬಾದ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಅವರನ್ನು ಬಂಧಿಸಲಾಗಿದೆ. ಈ ಘಟನೆಯಲ್ಲಿ ರಾಜಕೀಯ ಹಸ್ತಕ್ಷೇಪದ ಆರೋಪಗಳಿವೆ. ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ ಬಂಧನ ಸಂಚಲನ ಮೂಡಿಸಿದೆ. ‘ಪುಷ್ಪ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದ ಅವರಿಗೆ ಶಾಕ್ ಎದುರಾಗಿದೆ. ಇದರ ಹಿಂದೆ ರಾಜಕೀಯದ ಕೈವಾಡ ಇರಬಹುದು ಎಂಬ ಗುಮಾನಿ ಅನೇಕರಿಗೆ ಮೂಡಿತ್ತು. ಈ ವಿಚಾರದಲ್ಲಿ ಅನೇಕರು ತೆಲಂಗಾಣ ಸಿಎಂ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ದೂರಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಅಲ್ಲು ಅರ್ಜುನ್ ಸಿನಿಮಾ ನೋಡಲು ತೆರಳಿದ್ದರಿಂದಲೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರು ಮತ್ತು ಇದು ಕಾಲ್ತುಳಿತಕ್ಕೆ ಕಾರಣ ಆಯಿತು ಎಂಬುದು ಸದ್ಯ ಇರುವ ಆರೋಪ. ಸದ್ಯ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಿಸಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಚಾರಣೆ ನಡೆಸಲು ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿದೆ.
ಅಲ್ಲು ಅರ್ಜುನ್ ಬಂಧನದ ಬಗ್ಗೆ ಸಿಎಂ ರೇವಂತ್ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ‘ಅಲ್ಲು ಅರ್ಜುನ್ ವಿಚಾರದಲ್ಲಿ ಕಾನೂನು ತನ್ನ ಕೆಲಸ ಮಾಡಲಿದೆ. ಅವರ ಬಂಧನದಲ್ಲಿ ನನ್ನ ಹಸ್ತಕ್ಷೇಪವಿಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನು ಪ್ರಕ್ರಿಯೆ ನಡೆಸಲಾಗುವುದು’ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.
ಅಲ್ಲು ಅರ್ಜುನ್ ಬಂಧನದ ನಂತರ, ಚಿರಂಜೀವಿ ದಂಪತಿಗಳು ಮತ್ತು ನಾಗಬಾಬು ಅಲ್ಲು ಅರ್ಜುನ್ ನಿವಾಸವನ್ನು ತಲುಪಿದ್ದಾರೆ. ಈ ಘಟನೆಯಿಂದ ಶಾಕ್ ಆಗಿರೋ ಚಿರಂಜೀವಿ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಅಲ್ಲು ನಿವಾಸಕ್ಕೆ ಓಡೋಡಿ ಬಂದಿದ್ದಾರೆ. ಸದ್ಯ ಅವರು ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.
ಅಭಿಮಾನಿಗಳಲ್ಲಿ ಆತಂಕ
ಅಲ್ಲು ಅರ್ಜುನ್ ಅವರ ಬಂಧನದ ಬಳಿಕ ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿದೆ. ನೆಚ್ಚಿನ ನಟ ಯಾವಾಗ ಹೊರಕ್ಕೆ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಒಂದೊಮ್ಮೆ ಇವತ್ತು ಜಾಮೀನು ಸಿಗದೆ ಇದ್ದರೆ ಸೋಮವಾರದವರೆಗೆ ಅಲ್ಲು ಅರ್ಜುನ್ ಅವರು ಜೈಲಿನಲ್ಲೇ ಇರಬೇಕಾದ ಪರಿಸ್ಥಿತಿ ಬಂದೊದಗುತ್ತದೆ.
ಇದನ್ನೂ ಓದಿ: ಅಲ್ಲು ಅರ್ಜುನ್ಗೆ ಜೈಲುವಾಸ ಖಾಯಂ, ಪೊಲೀಸರು ಹೇಳಿದ್ದೇನು?
ಹೈಕೋರ್ಟ್ನಲ್ಲಿ ಅರ್ಜಿ
ತಮ್ಮ ವಿರುದ್ಧ ದಾಖಲಾಗಿರೋ ಪ್ರಕರಣವನ್ನು ರದ್ದು ಮಾಡುವಂತೆ ಅಲ್ಲು ಅರ್ಜುನ್ ಅವರು ಈಗಾಗಲೇ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿ ವಿಚಾರಣೆ ನಡೆಯುವುದರ ಒಳಗಾಗಿಯೇ ಅವರ ಬಂಧನ ನಡೆದು ಹೋಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Fri, 13 December 24



