ನಟಿ ಐಶ್ವರ್ಯಾ ರೈ ಅವರು ಸಲ್ಮಾನ್ ಖಾನ್ ಜೊತೆ, ವಿವೇಕ್ ಒಬೆರಾಯ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂಬುದು ಜಗತ್ತಿಗೇ ಗೊತ್ತಿರುವ ವಿಷಯ. ಅಲ್ಲದೆ ಒಬ್ಬ ಪುರುಷ ಮಾಡೆಲ್ ಜೊತೆಗೂ ಅವರು ಆಪ್ತವಾಗಿದ್ದರು ಎಂಬ ಮಾತಿದೆ. ಆ ವ್ಯಕ್ತಿಯ ಸಲುವಾಗಿ ಅವರು ಬಾಲಿವುಡ್ ನಟಿ ಮನಿಷಾ ಕೊಯಿರಾಲಾ ಜೊತೆಗೂ ಕಿರಿಕ್ ಮಾಡಿಕೊಂಡಿದ್ದರು. ಇಬ್ಬರ ನಡುವೆ ದೊಡ್ಡ ಮಟ್ಟದಲ್ಲಿ ಜಗಳ ನಡೆದಿತ್ತು. ಮಾಧ್ಯಮಗಳಲ್ಲಿ ಪರಸ್ಪರ ಆರೋಪಗಳನ್ನು ಮಾಡಿಕೊಂಡಿದ್ದರು. ಯಾರು ಆ ಮಾಡೆಲ್? ರಾಜೀವ್ ಮುಲ್ಚಂದಾನಿ.
ಐಶ್ವರ್ಯಾ ರೈ ಬಾಲಿವುಡ್ಗೆ ಕಾಲಿಡುವುದಕ್ಕೂ ಮುನ್ನ ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಆ ಸಂದರ್ಭದಲ್ಲಿ ರಾಜೀವ್ ಮುಲ್ಚಂದಾನಿ ಕೂಡ ಮಾಡೆಲ್ ಆಗಿ ಮಿಂಚುತ್ತಿದ್ದರು. ರಾಜೀವ್ ಮತ್ತು ಐಶ್ವರ್ಯಾ ಜೊತೆ ಹೆಚ್ಚು ಆಪ್ತತೆ ಬೆಳೆದಿತ್ತು. ಆದರೆ ಅವರಿಬ್ಬರ ನಡುವೆ ನಟಿ ಮನಿಷಾ ಕೊಯಿರಾಲಾ ಎಂಟ್ರಿ ನೀಡಿದರು. ಮನಿಷಾ ಮತ್ತು ರಾಜೀವ್ ನಡುವೆ ಒಡನಾಟ ಹೆಚ್ಚಿದ ಬಳಿಕ ಐಶ್ವರ್ಯಾ ಸೈಲೆಂಟ್ ಆಗಿಬಿಟ್ಟರು. ಆದರೆ ರಾಜೀವ್ ಜೊತೆ ಮನಿಷಾ ಹೆಚ್ಚು ಕಾಲ ಚೆನ್ನಾಗಿ ಇರಲಿಲ್ಲ. ಕೆಲವೇ ತಿಂಗಳ ಬಳಿಕ ಇಬ್ಬರ ನಡುವೆ ಬ್ರೇಕಪ್ ಆಯಿತು. ಅದಕ್ಕೆ ಐಶ್ವರ್ಯಾ ರೈ ಕಾರಣ ಎಂದು ಮನಿಷಾ ಆರೋಪ ಮಾಡಿದರು.
ತಮಗೆ ಸಂಬಂಧವೇ ಇಲ್ಲದ ಈ ವಿಚಾರದಲ್ಲಿ ತಮ್ಮ ಹೆಸರನ್ನು ತಳುಕು ಹಾಕಿದ್ದಕ್ಕಾಗಿ ಐಶ್ವರ್ಯಾಗೆ ತುಂಬ ಬೇಜಾರಾಯಿತು. ಹಾಗಾಗಿ ಅವರು ಅನೇಕ ದಿನಗಳ ಕಾಲ ಕಣ್ಣೀರು ಸುರಿಸಿದರಂತೆ. ಐಶ್ವರ್ಯಾ ಬಗ್ಗೆ ಮನಿಷಾ ಆಗಾಗ ಆರೋಪ ಮಾಡುತ್ತಲೇ ಇದ್ದರು. ನಂತರ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿದವು ಎಂದು ಹೇಳುತ್ತಿದ್ದರು. ಅದು ಕೂಡ ಐಶ್ವರ್ಯಾಗೆ ಬೇಸರ ತರಿಸಿತ್ತು. ಇಷ್ಟೆಲ್ಲ ಆದರೂ ಕೂಡ ಮನಿಷಾ ಬಗ್ಗೆ ಐಶ್ವರ್ಯಾ ಯಾವುದೇ ಕಹಿ ಭಾವನೆ ಉಳಿಸಿಕೊಂಡಿರಲಿಲ್ಲ. ಮನಿಷಾಗೆ ಒಳ್ಳೆಯದಾಗಲಿ ಎಂದೇ ಸಂದರ್ಶನವೊಂದರಲ್ಲಿ ಐಶ್ವರ್ಯಾ ಹೇಳಿದರು.
ಅಂತಿಮವಾಗಿ ನಟ ಅಭಿಷೇಕ್ ಬಚ್ಚನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯಾ ರೈ ಹಾಯಾಗಿ ಸಂಸಾರ ಮಾಡಿಕೊಂಡಿದ್ದಾರೆ. 2010ರಲ್ಲಿ ನೇಪಾಳಿ ಉದ್ಯಮಿ ಸಮರ್ಥ್ ಎಂಬುವವರ ಜೊತೆ ಮನಿಷಾ ಮದುವೆಯಾದರು. ಆದರೆ 2012ರಲ್ಲಿ ಅವರು ವಿಚ್ಛೇದನ ಪಡೆದುಕೊಂಡರು.
ಇದನ್ನೂ ಓದಿ:
ಐಶ್ವರ್ಯಾ ರೈ-ಅಭಿಷೇಕ್ ಪ್ರೀತಿಗೆ ಸೇತುವೆ ಆಗಿದ್ದು ಬಾಬಿ ಡಿಯೋಲ್; ಎರಡು ದಶಕಗಳ ನಂತರ ಹೊರ ಬಿತ್ತು ಸತ್ಯ
ಮದುವೆಯಲ್ಲಿ ಪಾಲ್ಗೊಳ್ಳಲು ಬಂದ ಐಶ್ವರ್ಯಾ ರೈ ಕುಟುಂಬ; ಭರ್ಜರಿ ಡಾನ್ಸ್ ವಿಡಿಯೋ ವೈರಲ್